ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ದೇವರ ಜಾತ್ರೋತ್ಸವ, ದರ್ಶನ ಬಲಿ

0

ಪುತ್ತೂರು: ಶ್ರೀಕ್ಷೇತ್ರ ಬೆಟ್ಟಂಪಾಡಿಯ ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ನ.16ರಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.


ವರ್ಷದ ಆದಿಯ ಜಾತ್ರೆ ಎಂದು ಪ್ರಸಿದ್ದಿ ಪಡೆದಿರುವ ಕ್ಷೇತ್ರದ ಜಾತ್ರೋತ್ಸವದಲ್ಲಿ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಉತ್ಸವದಲ್ಲಿ ಬೆಳಿಗ್ಗೆ ಉತ್ಸವ ಬಲಿ, ದರ್ಶನ ಬಲಿ ನಡೆದು ಬಟ್ಟಲು ಕಾಣಿಕೆ, ರಾಜಾಂಗಣದಲ್ಲಿ ಪ್ರಸಾದ ವಿತರಣೆ, ಮಂತ್ರಾಕ್ಷತೆಯಾಗಿ ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನೆರವೇರಿತು.


ಕಟ್ಟೆಪೂಜೆ, ಬೆಟ್ಟಂಪಾಡಿ ಬೆಡಿ:
ನ.15ರಂದು ರಾತ್ರಿ ದೇವಸ್ಥಾನದಲ್ಲಿ ಮಹಾಪೂಜೆ, ಶ್ರೀ ದೇವರ ಉತ್ಸವ ಬಲಿ, ಭೂತಬಲಿ ನಡೆದು ವಸಂತಕಟ್ಟೆ ಪೂಜೆ ನಡೆಯಿತು. ಬಳಿಕ ದೇವಳದಿಂದ ಹೊರಟು ದೇವರ ಸವಾರಿ ನಡೆಯಿತು. ದಾರಿಯುದ್ದಕ್ಕೂ ಕಟ್ಟೆಪೂಜೆ, ಭಕ್ತಾದಿಗಳು ತಳಿರು ತೋರಣಗಳಿಂದ ದೇವರನ್ನು ಬರಮಾಡಿಕೊಂಡರು. ದೇವರ ಮೂಲಸ್ಥಾನ ಬಿಲ್ವಗಿರಿ ಪ್ರವೇಶ ನಡೆದು ಕಟ್ಟೆಪೂಜೆ ನಡೆಯಿತು. ಇದೇ ವೇಳೆ ಆಕರ್ಷಕ ’ಬೆಟ್ಟಂಪಾಡಿ ಬೆಡಿ’ ಪ್ರದರ್ಶನಗೊಂಡಿತು. ಬಿಲ್ವಗಿರಿಯಿಂದ ಹಿಂತಿರುಗಿ ಕೆರೆ ಉತ್ಸವ ನಡೆಯಿತು. ಪುನಃ ದೇವಾಲಯದ ಒಳಗಾಗಿ ಮಂಗಳಾರತಿ ನಡೆಯಿತು.


ಸಂಸದ, ಶಾಸಕರ ಭೇಟಿ:
ಜಾತ್ರೋತ್ಸವದಲ್ಲಿ ನ.15ರಂದು ಮಧ್ಯಾಹ್ನ ಸಂಸದ ಕ್ಯಾ.ಬ್ರಿಜೇಶ್ ಚೌಟ, ಬಿಜೆಪಿ ಮುಖಂಡ ಅರುಣ್ ಕುಮಾರ್ ಪುತ್ತಿಲ, ನ.16ರಂದು ಶಾಸಕ ಅಶೋಕ್ ಕುಮಾರ್ ರೈ, ವಿಧಾನ ಪರಿಷತ್ ಸದಸ್ಯ ಕಿಶೋರ್ ಬೊಟ್ಯಾಡಿ, ವಿವಿಧ ಜನ ಪ್ರತಿನಿಧಿಗಳು, ವಿವಿಧ ಸಾಮಾಜಿಕ, ಧಾರ್ಮಿಕ, ರಾಜಕೀಯ, ಶೈಕ್ಷಣಿಕ ಸಂಘ ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಊರ ಪರವೂರ ಸಾವಿರಾರು ಮಂದಿ ಭಕ್ತಾದಿಗಳು ಪಾಲ್ಗೊಂಡು ದೇವರ ಉತ್ಸವದ ವೈಭವವನ್ನು ಕಣ್ತುಂಬಿಕೊಂಡರು.


ನಾಳೆ(ನ.17) ಧೂಮಾವತಿ, ಹುಲಿಭೂತ ನೇಮ;
ಜಾತ್ರೋತ್ಸವದ ಕೊನೆಯ ದಿನವಾದ ನ.17ರಂದು ಬೆಳಿಗ್ಗೆ ಕ್ಷೇತ್ರದ ಪರಿವಾರ ಸಾನಿಧ್ಯಗಳಾದ ಧೂಮಾವತಿ ದೈವದ ನೇಮ ಹಾಗೂ ಅಪರಾಹ್ನ ವ್ಯಾಘ್ರಚಾಮುಂಡಿ ಹುಲಿಭೂತ ನೇಮೋತ್ಸವದೊಂದಿಗೆ ಈ ವರ್ಷದ ಮೊದಲ ಜಾತ್ರೋತ್ಸವ ಸಂಪನ್ನಗೊಳ್ಳಲಿದೆ.

LEAVE A REPLY

Please enter your comment!
Please enter your name here