ಉಪ್ಪಿನಂಗಡಿ: ಕನ್ನಡ ಕಲರವ ಕಾರ್ಯಕ್ರಮ

0

ಉಪ್ಪಿನಂಗಡಿ: ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಆಶ್ರಯದಲ್ಲಿ ಕನ್ನಡ ಕಲರವ-1 ಕಾರ್ಯಕ್ರಮ ಇಲ್ಲಿನ ಸಿಎ ಬ್ಯಾಂಕ್ ಸಭಾಂಗಣದಲ್ಲಿ ಶನಿವಾರದಂದು ನಡೆಯಿತು.


ಕಾರ್ಯಕ್ರಮವನ್ನು ಉದ್ಘಾಟಿಸಿದ ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಮಾತನಾಡಿ, ಎಳೆಯ ಮಕ್ಕಳಿಗೆ ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಂಡ ’ನಾ ಕಂಡ ನಮ್ಮೂರ ವಿಶೇಷತೆ’ ಎಂಬ ಬರಹ ಯೋಜನೆಯಲ್ಲಿ 26 ವಿದ್ಯಾರ್ಥಿಗಳು ಭಾಗವಹಿಸಿದ್ದು ಶ್ಲಾಘನಾರ್ಹ ವಿಚಾರ. ಬರೆಯುವುದಕ್ಕೆ ಪ್ರೇರಣೆ ಮತ್ತು ಪ್ರೋತ್ಸಾಹ ನೀಡುವ ಮೂಲಕ ಸಾಹಿತ್ಯ ಪರಿಷತ್ತಿನ ಉಪ್ಪಿನಂಗಡಿ ಹೋಬಳಿ ಘಟಕವು ಪ್ರಶಾಂಸನಾರ್ಹ ಕಾರ್ಯ ಮಾಡಿದೆ ಎಂದರು.


ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ನಿವೃತ್ತ ಉಪನ್ಯಾಸಕ ಮಹಾಲಿಂಗೇಶ್ವರ ಭಟ್, ಗದ್ಯ, ಪದ್ಯ , ನಾಟಕಗಳ ಮೂಲಕ ಸಾಹಿತಿಗಳಾಗಬಹುದು. ಮೊದಮೊದಲು ನಾಲ್ಕು ಸಾಲಿನ ಚುಟುಕುಗಳನ್ನು ರಚಿಸುವ ಹವ್ಯಾಸವನ್ನು ಬೆಳೆಸಿಕೊಂಡರೆ ಮುಂದೆ ತಾನಾಗಿ ಕವನಗಳು ರಚಿಸಲ್ಪಡುತ್ತದೆ ಎಂದು ಮಕ್ಕಳಲ್ಲಿ ಸಾಹಿತ್ಯಾಸಕ್ತಿಯನ್ನು ಬಿತ್ತಿದರು.


ಅಧ್ಯಕ್ಷತೆ ವಹಿಸಿದ ಕನ್ನಡ ಸಾಹಿತ್ಯ ಪರಿಷತ್ ಉಪ್ಪಿನಂಗಡಿ ಹೋಬಳಿ ಘಟಕದ ಅಧ್ಯಕ್ಷ ಕರುಣಾಕರ ಸುವರ್ಣ ಮಾತನಾಡಿ, ಎಳೆಯ ಮಕ್ಕಳಲ್ಲಿ ಬರವಣಿಗೆಯ ಆಸಕ್ತಿ ಕೆರಳಿಸಲು ಮತ್ತು ಸಾಂಸ್ಕೃತಿಕ ಕಲಾ ವಿದ್ವಿತ್ ಪ್ರಕಾಶಿಸಲು ಕನ್ನಡ ಕಲರವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಮಕ್ಕಳ ಸಾಹಿತ್ಯ ನೆಲೆಗಟ್ಟಿನ ಪ್ರತಿಭೆ ಅನಾವರಣಗೊಳಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗುವುದೆಂದು ತಿಳಿಸಿದರು.


ವೇದಿಕೆಯಲ್ಲಿ ಹೋಬಳಿ ಘಟಕದ ಗೌರವ ಕಾರ್ಯದರ್ಶಿ ಉದಯ ಕುಮಾರ್, ಗೌರವ ಕೋಶಾಧಿಕಾರಿ ಡಾ. ಗೋವಿಂದ ಪ್ರಸಾದ್ ಕಜೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಪ್ರಮುಖರಾದ ದುರ್ಗಾಮಣಿ, ವಿನಯಾ ಆರ್ ರೈ, ಮಂಜುಳಾ ಸೀತಾರಾಮ್, ಶಶಿಧರ್ ಶೆಟ್ಟಿ, ಯತೀಶ್ ಶೆಟ್ಟಿ, ಸಲಾಂ ಮೇದರಬೆಟ್ಟು, ಸುನಿತಾ, ಗಿರಿಜಾ , ವಿನಯ ಯು , ಮೊದಲಾದವರು ಭಾಗವಹಿಸಿದ್ದರು.


ಇಂದ್ರಪ್ರಸ್ಥ ವಿದ್ಯಾಲಯದ ಮುಖ್ಯ ಶಿಕ್ಷಕಿ ವೀಣಾ ಪ್ರಸಾದ್ ಸ್ವಾಗತಿಸಿ , ಘಟಕದ ಸಂಘಟನಾ ಕಾರ್ಯದರ್ಶಿ ನವೀನ್ ಬ್ರಾಗ್ಸ್ ವಂದಿಸಿದರು. ಘಟಕದ ಸದಸ್ಯರಾದ ಸುಂದರಿ ಸುಕುಮಾರ್ , ಹಾಗೂ ವಿಮಲಾ ತೇಜಾಕ್ಷಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ತ್ರಿವೇಣಿ ಸಹಕರಿಸಿದರು. ಬಳಿಕ ಗ್ರಾಮದ ವಿವಿಧ ಶಾಲೆಗಳ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ಅತ್ಯಾಕರ್ಷಕವಾಗಿ ಮೂಡಿಬಂದಿತು.

LEAVE A REPLY

Please enter your comment!
Please enter your name here