5 ವರ್ಷದಲ್ಲಿ 3-4 ಸಾವಿರ ಯುವಕ, ಯುವತಿಯರಿಗೆ ಉದ್ಯೋಗ-ಉದ್ಯೋಗ ಮೇಳದಲ್ಲಿ ತನ್ನ ಕನಸು ಬಿಚ್ಚಿಟ್ಟ ಶಾಸಕ ಅಶೋಕ್ ಕುಮಾರ್ ರೈ

0

ಪುತ್ತೂರು:ಯುವಕ,ಯುವತಿಯರ ಕೈಗೆ ಕೆಲಸ ಕೊಡಬೇಕು.ಅದಕ್ಕಾಗಿ ಉದ್ಯೋಗ ಸೃಷ್ಟಿ ಮಾಡಬೇಕು.ಈ ನಿಟ್ಟಿನಲ್ಲಿ ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಯುವ ಸಮುದಾಯ ಬದುಕು ಕಟ್ಟಿಕೊಳ್ಳಲು ನೆರವಾಗಬೇಕು.ಇನ್ನು 5 ವರ್ಷದಲ್ಲಿ 3ರಿಂದ 4 ಸಾವಿರ ಯುವಕ, ಯುವತಿಯರಿಗೆ ಉದ್ಯೋಗ ಕೊಡಿಸುವ ಕನಸಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ರೈ ಎಸ್ಟೇಟ್ ಆಂಡ್ ಎಜ್ಯುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನ.16ರಂದು ಶಾಸಕರ ಕಚೇರಿಯಲ್ಲಿ ನಡೆದ ಉದ್ಯೋಗ ಮೇಳವನ್ನು ಅವರು ಉದ್ಘಾಟಿಸಿ ಮಾತನಾಡಿದರು.ಇವತ್ತು ಯುವತಿಯರಿಗೆ ಮದುವೆ ಆದ ಕೂಡಲೇ ಕೆಲಸದಿಂದ ಬಿಡುಗಡೆ ಮಾಡಿ ಮನೆಯಲ್ಲಿ ಕೂತುಕೊಳಿಸುವ ಕೆಲಸ ಆಗುತ್ತದೆ.ಒಂದಷ್ಟು ಮಂದಿ ಶಿಕ್ಷಣ ಪಡೆದವರಿದ್ದಾರೆ.ಉದ್ಯೋಗಕ್ಕಾಗಿ ಮಂಗಳೂರಿಗೆ ಹೋಗುವುದು ದೂರ ಅಲ್ಲ ಎಂದು ಹೇಳಿದ ಶಾಸಕರು ಯುವಕ, ಯುವತಿಯರ ಕೈಗೆ ಕೆಲಸ ಕೊಡಬೇಕು.ಇವತ್ತು ಉದ್ಯೋಗ ಮೇಳದಲ್ಲಿ ಉದ್ಯೋಗ ಕೊಡಿಸುವ ಕೆಲಸ ಆಗುತ್ತಿದೆ.ಅಲ್ಲಿ ಊಟ, ವಸತಿ ವ್ಯವಸ್ಥೆ ಕೊಟ್ಟು ಸಿಗುವ ರೂ.15ರಿಂದ 20 ಸಾವಿರ ವೇತನ ಒಳ್ಳೆಯ ವೇತನವಾಗಿದ್ದು ಉದ್ಯೋಗಿಗಳ ಆರ್ಥಿಕ ಪರಿಸ್ಥಿತಿಯನ್ನು ಮೇಲೆತ್ತಲಿದೆ.ಕಡಿಮೆ ಸಂಬಳ ಎಂದು ಮನೆಯಲ್ಲೇ ಕೂತರೆ ಮೆಂಟಲಿ ಅಪ್ಸೆಟ್ ಆಗುತ್ತಾರೆ.ಹಣವಿದ್ದರೆ ಮೆಂಟಲಿ ಮತ್ತು ಫಿಸಿಕಲಿ ಸರಿಯಾಗುತ್ತಾರೆ ಎಂದರು.ಮೊದಲಿಂದಲೂ ನನ್ನ ಕನಸು ಯುವಕ, ಯುವತಿಯರಿಗೆ ಕೆಲಸ ಕೊಡಬೇಕೆಂಬುದಾಗಿದ್ದು ಯಾರೆಲ್ಲ ಡಿಗ್ರಿ, ಪಿಯುಸಿ, ಪ್ರಥಮ ಪಿಯುಸಿ ಆಗಿ ಮನೆಯಲ್ಲಿದ್ದಾರೋ ಅವರು ದಯಮಾಡಿ ನಮ್ಮನ್ನು ಭೇಟಿ ಮಾಡಬಹುದು ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.


ಉದ್ಯೋಗ ಸೃಷ್ಟಿಯಾದರೆ ದೇಶ ಅಭಿವೃದ್ದಿ:
ಪುತ್ತೂರಿಗೆ ಕೆಎಮ್‌ಎಫ್ ಬರುತ್ತದೆ.ಸುಮಾರು 500 ಮಂದಿಗೆ ಉದ್ಯೋಗ ಸೃಷ್ಟಿಯಾಗುತ್ತದೆ.ಅದೇ ರೀತಿ ಪಶು ವೈದ್ಯಕೀಯ ಕಾಲೇಜು ಈ ಅಕಾಡೆಮಿಯಲ್ಲಿ ಆರಂಭಗೊಳ್ಳುತ್ತದೆ.ಅಲ್ಲಿ 3 ಸಾವಿರ ಮಕ್ಕಳು ಬರಲಿದ್ದಾರೆ.250 ಜನರಿಗೆ ಕೆಲಸ ಸಿಗುತ್ತದೆ.ಹೀಗೆ ಉದ್ಯೋಗ ಸೃಷ್ಟಿ ಮಾಡಿದರೆ ದೇಶ ಅಭಿವೃದ್ದಿಯಾಗಲು ಸಾಧ್ಯ.ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮ ದೇಶ ಅಭಿವೃದ್ಧಿಯಲ್ಲಿ ತೀರಾ ಹಿಂದುಳಿದಿದ್ದು ಅಭಿವೃದ್ಧಿ ಶೀಲ ರಾಷ್ಟ್ರಗಳಿಂದ ಸುಮಾರು 150 ವರ್ಷ ಹಿಂದೆ ನಾವಿದ್ದೇವೆ.1979ರಲ್ಲೇ ಮೆಟ್ರೋ ಆರಂಭಿಸಿದ ರಾಷ್ಟ್ರಗಳಿವೆ.ಆದರೆ ನಾವು ಮೆಟ್ರೋಗಾಗಿ ಈಗ ಕಂಬ ನೆಡುತ್ತಿದ್ದೇವೆ.ಭಾರತ ವಿಶ್ವಗುರು ಆಗಬೇಕಾದರೆ ಯುವ ಜನರಿಗೆ ಉದ್ಯೋಗ ಕೊಡಬೇಕು.ಭಾರತದಲ್ಲಿ ಒಂದು ಕೆಲಸಕ್ಕೆ ಕನಿಷ್ಟ 6 ಮಂದಿಯನ್ನು ಬಳಕೆ ಮಾಡಲಾಗುತ್ತಿದೆ.ಅದೇ ವಿದೇಶಗಳಲ್ಲಿ ಕೇವಲ ಯಾಂತ್ರೀಕೃತ ವ್ಯವಸ್ಥೆಯಲ್ಲಿ ಈ 6 ಮಂದಿಯ ಕೆಲಸ ಮಾಡಲಾಗುತ್ತಿದೆ.ನಮ್ಮಲ್ಲಿ ಮಾನವಶ್ರಮವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುತ್ತಿಲ್ಲ ಎಂದು ಶಾಸಕರು ಹೇಳಿದರು.


ಒಳ್ಳೆ ಕೆಲಸ ಮಾಡಿದರೆ ಓಟು ಹಾಕಿ:
ಇವತ್ತು ಉದ್ಯೋಗ ಕೊಡಿಸುವ ಸಂದರ್ಭ, ನನಗೆ ಓಟು ಹಾಕುತ್ತಾರೋ ಬಿಡುತ್ತಾರೋ ಬೇರೆ ವಿಷಯ, ಒಳ್ಳೆ ಕೆಲಸ ಮಾಡಿದರೆ ಓಟು ಕೊಡಿ.ಅಭಿವೃದ್ದಿ ನಮ್ಮ ಗುರಿ ಹೊರತು ಬೇರೆ ಉದ್ದೇಶವಿಲ್ಲ.ತುಂಬಾ ಜನ ರೀಲ್ ಬಿಡುವುದನ್ನು ನೋಡಿದ್ದೇನೆ ಎಂದು ಅಶೋಕ್ ಕುಮಾರ್ ರೈ ಹೇಳಿದರು.


ಬಿಗ್ ಬ್ಯಾಗ್ಸ್ ಕಂಪೆನಿಯ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಮಮತಾ ಅವರು ಮಾತನಾಡಿ, ಗ್ರಾಮೀಣ ಭಾಗದಿಂದ ಯುವಜನತೆ ಕೆಲಸಕ್ಕೆ ಬರುವಂತಾಗಬೇಕು.ಪ್ರದೇಶ ವ್ಯಾಪ್ತಿಯ ಚೌಕಟ್ಟು ಹಾಕಿಕೊಂಡು ನಿಮ್ಮ ಅವಕಾಶ ಬಿಟ್ಟುಬಿಡಬೇಡಿ.ಅವಕಾಶಗಳನ್ನು ಬಳಸಿಕೊಳ್ಳಿ ಎಂದರು.


ಮಾಸ್ಟರ್ ಪ್ಲಾನರಿಯ ನಿರ್ದೇಶಕ ಆಕಾಶ್ ಎಚ್.ಕೆ, ದರ್ಬೆ ಪಶುಪತಿ ಎಲೆಕ್ಟ್ರಿಕಲ್ಸ್ ಮಾಲಕ ಪಶುಪತಿ ಶರ್ಮ ಮತ್ತಿತರರು ಉದ್ಯೋಗಾಂಕ್ಷಿಗಳಿಗೆ ಮಾಹಿತಿ ನೀಡಿದರು.
ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ, ಭೂನ್ಯಾಯ ಮಂಡಳಿ ಸದಸ್ಯರಾದ ಕೃಷ್ಣಪ್ರಸಾದ್ ಆಳ್ವ ಮತ್ತು ನಿರಂಜನ್ ರೈ ಮಠಂತಬೆಟ್ಟು, ಮುರಳೀಧರ್ ರೈ ಮಠಂತಬೆಟ್ಟು, ಜಿ.ಪಂ.ಮಾಜಿ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ, ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯಾಧ್ಯಕ್ಷ ಸುದೇಶ್ ಶೆಟ್ಟಿ,ಪುಡಾ ಸದಸ್ಯ ನಿಹಾಲ್ ಪಿ.ಶೆಟ್ಟಿ, ಹರಿಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು.ಬಾಲಕೃಷ್ಣ ಪಲ್ಲತ್ತಾರು ಕಾರ್ಯಕ್ರಮ ನಿರೂಪಿಸಿದರು.

186 ಮಂದಿಗೆ ಉದ್ಯೋಗ
ರೈ ಎಸ್ಟೇಟ್ ಆಂಡ್ ಎಜುಕೇಶನಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜನೆಗೊಂಡ ಉದ್ಯೋಗ ಮೇಳದಲ್ಲಿ ಒಟ್ಟು 424 ಮಂದಿ ಉದ್ಯೋಗಾಂಕ್ಷಿಗಳು ನೋಂದಾವಣೆ ಮಾಡಿಕೊಂಡಿದ್ದರು.ನೇರ ಸಂದರ್ಶನಕ್ಕೆ 268 ಮಂದಿ ಹಾಜರಾಗಿದ್ದರು.ವಿವಿಧ ಸಂಸ್ಥೆಗಳಿಗೆ ನೇರ ಸಂದರ್ಶನದಲ್ಲಿ 186 ಮಂದಿ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್‌ನ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here