ಸವಣೂರು : ಪುಣ್ವಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಿಂದ ಮಕ್ಕಳ ದಿನಾಚರಣೆಯನ್ನು ಪ್ರಕೃತಿಯ ಜೊತೆ ಕಳೆಯುವ ಮೂಲಕ ವಿಶಿಷ್ಟವಾಗಿ ಆಚರಿಸಿಕೊಂಡರು.
ಶಾಲೆಯ ಇಕೋ ಕ್ಲಬ್ ವತಿಯಿಂದ ‘ಪ್ರಕೃತಿಯ ಕಡೆಗೆ ನಮ್ಮ ನಡಿಗೆ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪುಣ್ಚಪ್ಪಾಡಿ ನಡುಮನೆ ಮಕ್ಕಳ ಪಾರ್ಕ್ -ಎ ಎನ್ ಎಸ್ ಅಮೃತ ಉದ್ಯಾನವನದಿಂದ ನಡಿಗೆ ಪ್ರಾರಂಭಿಸಿ ಕಾರಣಿಕ ಕ್ಷೇತ್ರ ಸವಣೂರು ಜಿನಮಂದಿರ, ಮಕ್ಕಳ ಬಸದಿಗೆ ಹೋಗಿ ಐತಿಹಾಸಿಕ ಹಿನ್ನಲೆಯಿರುವ ಬಸದಿಯ ಸೊಬಗನ್ನು ವೀಕ್ಷಿಸಲಾಯಿತು. ತೆನೆತುಂಬಿದ ಭತ್ತದ ಗದ್ದೆಯ ಅಂದವನ್ನು ಮಕ್ಕಳು ಕಣ್ತುಂಬಿಕೊಂಡರು.
ಸವಣೂರು ಪೇಟೆಯಲ್ಲಿ ನಡೆಯುತ್ತಿದ್ದ ವಾರದ ಸಂತೆಯೊಳಗೊಂದು ಸುತ್ತು… ವಸ್ತುಗಳ ಮಾರಾಟ ಖರೀದಿಯ ವ್ಯಾವಹಾರಿಕ ಜ್ಞಾನವನ್ನು ಅರಿತುಕೊಂಡು ಸವಣೂರಿನ ಪ್ರಸಿದ್ದ ಹೋಟೆಲ್ ಚಂದ್ರಭವನದಲ್ಲಿ ಉಪಹಾರ ಸೇವಿಸಿ ಸವಣೂರಿನ ಹಾಲು ಶೀತಲೀಕರಣ ಕೇಂದ್ರ ಹಾಗೂ ಎಣ್ಣೆ ಗಿರಣಿಗೆ ಭೇಟಿ ನೀಡಿ ಅಲ್ಲಿನ ಕಾರ್ಯ ವೈಖರಿಯನ್ನು ತಿಳಿದುಕೊಂಡು ಅಲ್ಲಿಂದ ಅಂಚೆ ಕಛೇರಿ, ಗ್ರಾಮ ಪಂಚಾಯತ್ ಕಾರ್ಯಾಲಯ,ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಗಳಿಗೆ ಭೇಟಿ ನೀಡಿ ಕಛೇರಿಯಲ್ಲಿ ಸಾರ್ವಜನಿಕರು ವ್ಯವಹಾರ ನಡೆಸುವ ಬಗೆಗಿನ ಸಂದೇಹಗಳನ್ನು ಮಕ್ಕಳು ಕೇಳಿ ತಿಳಿದುಕೊಂಡರು.
ಸಾರ್ವಜನಿಕ ಡಿಜಿಟಲ್ ಗ್ರಂಥಾಲಯಕ್ಕೆ ಹೋಗಿ ಪುಸ್ತಕಗಳ ಕುರಿತಾದ ಅರಿವನ್ನು ವಿಸ್ತರಿಸಿಕೊಂಡರು.ಡಿಜಿಟಲ್ ಗ್ರಂಥಾಲಯದ ಉಪಯೋಗವನ್ನು ಪ್ರತ್ಯಕ್ಷವಾಗಿ ವೀಕ್ಷಿಸಿ ಪ್ರಯೋಜನವನ್ನು ಅರಿತುಕೊಂಡರು.
ಸವಣೂರು ಸರಕಾರಿ ಪ್ರೌಢಶಾಲೆ ಮತ್ತು ಪದವಿ ಪೂರ್ವ ಕಾಲೇಜಿನ ವಿಜ್ಞಾನ ಮತ್ತು ಗಣಿತ ಪ್ರಯೋಗಾಲಯಕ್ಕೆ ಭೇಟಿ ನೀಡಿ ವೈಜ್ಞಾನಿಕ ವಿಚಾರಗಳ ಬಗೆಗಿನ ಕೌತುಕತೆ ಸಂದೇಹಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿದರು.
ಹೀಗೆ ಮುನ್ನಡೆಯುತ್ತಿದ್ದಂತೆ ಪೇಟೆಯ ವಿವಿಧೆಡೆ ಮಕ್ಕಳ ದಿನಾಚರಣೆಯ ಶುಭಾಶಯಗಳೊಂದಿಗೆ ಸಿಹಿತಿಂಡಿ ಹಣ್ಣುಗಳ ಮಹಪೂರವೇ ಹರಿದು ಬಂತು. ಪ್ರಕೃತಿ ನಡಿಗೆ ಕಾರ್ಯಕ್ರಮದ ಆದಿಯಿಂದ ಅಂತ್ಯದವರೆಗೂ ತಮ್ಮ ಒಂದು ದಿನದ ಸಮಯವನ್ನು ನಮ್ಮ ಶಾಲೆಯ ಪುಟಾಣಿಗಳಿಗಾಗಿ ಮೀಸಲಿಟ್ಟು ಪ್ರತಿಯೊಂದು ಸ್ಥಳಗಳ ಐತಿಹಾಸಿಕ ಹಿನ್ನೆಲೆ, ವ್ಯವಹಾರಿಕ ಬಗೆ ಇತ್ಯಾದಿ ವಿಚಾರಗಳ ವಿವರಣೆಯ ಜೋಳಿಗೆಯೊಂದಿಗೆ ಬಂದು ಅರಿಯದ ವಿಚಾರದ ಅರಿವನ್ನು ನೀಡಿ ಮಕ್ಕಳ ಜ್ಞಾನದ ವಿಸ್ತಾರವನ್ನು ತೆರೆದವರು ಸವಣೂರು ಗ್ರಾಮ ಪಂಚಾಯತ್ ಸದಸ್ಯರಾದ ಗಿರಿಶಂಕರ ಸುಲಾಯ, ಶಿಕ್ಷಕರಾದ ಶೋಭಾ. ಕೆ, ಚಂದ್ರಿಕಾ, ತೃಪ್ತಿ, ಸವಿತ ಹಾಗೂ ಪೋಷಕರಾದ ಪೂರ್ಣಿಮಾ, ಸುಹಾಸ್ ಕಾರಂತ್ ಸಹಕರಿಸಿದರು. ವಸುಂದರೆಯ ಹಸಿರಿನ ಜೊತೆಗೆ ಧಾರ್ಮಿಕ ಮತ್ತು ಸಾರ್ವಜನಿಕ ಸ್ಥಳಗಳ ಭೇಟಿ ಸಂತಸದಾಯಕ ಕಲಿಕೆಗೆ ಸಾಕ್ಷಿಯಾಯಿತು.