ಕುಂಬ್ರ ವರ್ತಕರ ಸಂಘದ 20ನೇ ವರ್ಷಾಚರಣೆ ಸಂಭ್ರಮ-‘ಪೊರ್ಲುದ ಕುಂಬ್ರ’ ಸೆಲ್ಫೀ ಪಾಯಿಂಟ್ ಲೋಕಾರ್ಪಣೆ

0

ಪುತ್ತೂರು: ಕುಂಬ್ರ ವರ್ತಕರ ಸಂಘವು ಸಮಾಜಮುಖಿ ಕೆಲಸಗಳ ಮೂಲಕ ಹತ್ತೂರಲ್ಲೂ ಪ್ರಸಿದ್ಧಿ ಪಡೆದುಕೊಂಡಿದ್ದು ಮುಂದಿನ ದಿನಗಳಲ್ಲಿ ರಾಜ್ಯ, ರಾಷ್ಟ್ರ ಮಟ್ಟಗಳಲ್ಲಿ ಗುರುತಿಸುವಂತಾಗಲಿ, ನಾವೆಲ್ಲರೂ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ನಮ್ಮ ಪೊರ್ಲುದ ಕುಂಬ್ರ ಎಲ್ಲಾ ಗ್ರಾಮಗಳಿಗೂ ಮಾದರಿಯಾಗಲಿ ಎಂದು ಒಳಮೊಗ್ರು ಗ್ರಾಮ ಪಂಚಾಯತ್ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರು ಹೇಳಿದರು.


ಅವರು ನ.16 ರಂದು ಕುಂಬ್ರ ಜಂಕ್ಷನ್‌ನಲ್ಲಿ ನಡೆದ ಕುಂಬ್ರ ವರ್ತಕರ ಸಂಘದ 20 ನೇ ವರ್ಷಾಚರಣೆ ಹಾಗೂ ‘ಪೊರ್ಲುದ ಕುಂಬ್ರ’ ಸೆಲ್ಫೀ ಪಾಯಿಂಟ್ ಉದ್ಘಾಟನಾ ಸಮಾರಂಭದಲ್ಲಿ ಸೆಲ್ಫೀ ಪಾಯಿಂಟ್ ಅನ್ನು ಉದ್ಘಾಟಿಸಿ ಮಾತನಾಡಿದರು. ಸ್ವಚ್ಛತೆಯನ್ನು ಕಾಪಾಡುವುದು ಕೇವಲ ಗ್ರಾಮ ಪಂಚಾಯತ್‌ನವರ ಕರ್ತವ್ಯ ಮಾತ್ರವಲ್ಲ ಪ್ರತಿಯೊಬ್ಬ ಗ್ರಾಮಸ್ಥರ ಕೂಡ ನಮ್ಮ ಗ್ರಾಮ ಸ್ವಚ್ಛವಾಗಿರಬೇಕು ಎಂಬ ಪ್ರಜ್ಷೆಯನ್ನು ಬೆಳೆಸಿಕೊಳ್ಳಬೇಕು ಎಂದ ತ್ರಿವೇಣಿ ಪಲ್ಲತ್ತಾರುರವರು ಕುಂಬ್ರಕ್ಕೆ ಪೊರ್ಲುದ ಕುಂಬ್ರ ಎಂಬ ಆಕರ್ಷಕವಾದ ಸೆಲ್ಫೀ ಪಾಯಿಂಟ್ ಅನ್ನು ನೀಡಿದ ಆಕರ್ಷಣ್ ಇಂಡಸ್ಟ್ರೀಸ್‌ನ ಮಾಲಕರಾದ ಮಹಮ್ಮದ್ ಸಾದಿಕ್ ಹಾಜಿಯವರಿಗೆ ಒಳಮೊಗ್ರು ಗ್ರಾಪಂ ವತಿಯಿಂದ ಅಭಿನಂದನೆ ಸಲ್ಲಿಸಿದರು.


ವರ್ತಕರ ಬೆಳವಣಿಗೆಗೆ ಗ್ರಾಹಕರೇ ಮೂಲ ಕಾರಣ: ವಾಮವ ಪೈ
ವರ್ತಕರ ಸಂಘದ 20 ನೇ ವರ್ಷಾಚರಣೆಯನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಪುತ್ತೂರು ಕೈಗಾರಿಕಾ ಮತ್ತು ವಾಣಿಜ್ಯ ಸಂಘದ ಅಧ್ಯಕ್ಷ ವಾಮನ ಪೈಯವರು ಮಾತನಾಡಿ, ವರ್ತಕರಿಗೆ ಜಾತಿ ಇಲ್ಲ, ಭಾಷೆಯೂ ಇಲ್ಲ ಏಕೆಂದರೆ ವರ್ತಕರು ಎಲ್ಲಾ ಭಾಷೆಗಳಲ್ಲೂ ವ್ಯವಹರಿಸಬೇಕಾಗಿದೆ. ವರ್ತಕರಿಗೆ ಎಲ್ಲರೂ ಬೈತ್ತಾರೆ ಆದರೆ ವರ್ತಕರು ಎಲ್ಲರನ್ನೂ ಪ್ರೀತಿಸುತ್ತಾರೆ. ವರ್ತಕರಿಗೆ ಇರುವಷ್ಟು ಕಿರಿಕಿರಿ ಬೇರೆ ಯಾರಿಗೂ ಇರುವುದಿಲ್ಲ, ಸುಮಾರು 41 ವರ್ಷಗಳಿಂದ ಪುತ್ತೂರು ವರ್ತಕರ ಸಂಘದ ನಡೆದುಕೊಂಡು ಬಂದಿದೆ. ವರ್ತಕರಿಗೆ ಸಂಘಟನೆಯ ಅವಶ್ಯಕತೆ ತುಂಬಾ ಇದೆ. ವರ್ತಕರು ಬೆಳೆಯಬೇಕಾದರೆ ಗ್ರಾಹಕರೇ ಮುಖ್ಯ ಕಾರಣ ಎಂದು ಹೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿದ್ದ ವಿಶ್ರಾಂತ ಪ್ರಾಂಶುಪಾಲ ಝೇವಿಯರ್ ಡಿ’ಸೋಜಾರವರು ಮಾತನಾಡಿ, ಸಂಘ ಹೇಗಿರಬೇಕು ಎಂದು ಹೇಳಿಕೊಳ್ಳಲು ನನಗೆ ಕುಂಬ್ರದ ವರ್ತಕರ ಸಂಘ ಒಂದು ಉತ್ತಮ ಉದಾಹರಣೆಯಾಗಿದೆ. ಕುಂಬ್ರಕ್ಕೆ ತನ್ನದೇ ಆದ ಇತಿಹಾಸವಿದೆ. ಗಾಂಧಿಜಿಯವರು ಬಂದು ಹೋಗಿರುವ ಪ್ರದೇಶ ಇದಾಗಿದೆ. ಪ್ರತಿಯೊಂದು ಊರಿಗೂ ಒಂದು ಐಕಾನ್ ಇದೆ. ಅದೇ ರೀತಿ ಕುಂಬ್ರಕ್ಕೆ ಐಕಾನ್ ಒಂದನ್ನು ಸಾದಿಕ್ ಹಾಜಿಯವರು ಮಾಡಿಕೊಟ್ಟಿದ್ದಾರೆ. ಇಂತಹ ಒಳ್ಳೆಯ ಕೆಲಸವನ್ನು ಮಾಡಿರುವ ವರ್ತಕರ ಸಂಘಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದು ಹೇಳಿ ಶುಭ ಹಾರೈಸಿದರು. ಕುಂಬ್ರ ಮೆಸ್ಕಾಂನ ಜ್ಯೂನಿಯರ್ ಇಂಜಿನಿಯರ್ ರವೀಂದ್ರರವರು ಮಾತನಾಡಿ, ಕುಂಬ್ರಕ್ಕೆ ಪ್ರತ್ಯೇಕ ಟೌನ್ ಫೀಡರ್ ಬೇಕು ಎಂಬುದು ಇಲ್ಲಿನ ವರ್ತಕರ ಬೇಡಿಕೆಯಾಗಿತ್ತು ಅದನ್ನು ಪೂರೈಸಿಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲೂ ಸಂಘದೊಂದಿಗೆ ಉತ್ತಮ ಬಾಂಧವ್ಯ ಇರಲಿ ಎಂದು ಹೇಳಿ ಶುಭ ಹಾರೈಸಿದರು.

ಸಂಪ್ಯ ಅಕ್ಷಯ ಕಾಲೇಜಿನ ಸಂಚಾಲಕರು, ಉದ್ಯಮಿ ಜಯಂತ ನಡುಬೈಲ್‌ರವರು ಮಾತನಾಡಿ, ವರ್ತಕರ ಸಮಸ್ಯೆಗಳಿಗೆ ಸದಾ ಸ್ಪಂದನೆ ಕೊಡುವ ಸಂಘವೊಂದಿದ್ದರೆ ಅದು ಕುಂಬ್ರ ವರ್ತಕರ ಸಂಘವಾಗಿದೆ. ಹಲವು ಸಮಾಜಮುಖಿ ಕೆಲಸಗಳ ಮೂಲಕ ಈಗಾಗಲೇ ಎಲ್ಲಾ ಕಡೆಗಳಲ್ಲೂ ಗುರುತಿಸಿಕೊಂಡಿರುವುದು ಕುಂಬ್ರಕ್ಕೆ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಪೊರ್ಲುದ ಕುಂಬ್ರ ಸೆಲ್ಫೀ ಪಾಯಿಂಟ್ ಅನ್ನು ಕೊಡುಗೆಯಾಗಿ ನೀಡಿರುವ ಮುಕ್ರಂಪಾಡಿ ಆಕರ್ಷಣ್ ಇಂಡಸ್ಟ್ರೀಸ್ ಮಾಲಕ ಮಹಮ್ಮದ್ ಸಾದಿಕ್ ಹಾಜಿಯವರು ಮಾತನಾಡಿ, ಪೊರ್ಲುದ ಕುಂಬ್ರ ಎಂಬ ಕಲ್ಪನೆಗೆ ನನಗೆ ಭಾಗವಹಿಸಲು ಅವಕಾಶ ಮಾಡಿಕೊಟ್ಟವರು ವರ್ತಕರ ಸಂಘದವರು ಅದಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಸೆಲ್ಫೀ ಪಾಯಿಂಟ್ ವಿಷಯದಲ್ಲಿ ನಾವು ಯಾರನ್ನೂ ಅನುಕರಣೆ ಮಾಡುವುದು ಬೇಡ, ನಮ್ಮದು ಸ್ವಚ್ಛ ಪೊರ್ಲುದ ಕುಂಬ್ರವಾಗಲಿ, ಸರಕಾರ ಕೂಡ ಸ್ವಚ್ಚತೆಗೆ ಹೆಚ್ಚಿನ ಮಹತ್ವ ನೀಡುತ್ತಿದೆ. ಈ ನಿಟ್ಟಿನಲ್ಲಿ ಸ್ವಚ್ಛ ಕುಂಬ್ರದ ಕಲ್ಪನೆಯಲ್ಲಿ ಒಂದು ಸೆಲ್ಫೀ ಪಾಯಿಂಟ್ ಅನ್ನು ನಿರ್ಮಿಸಲು ಅವಕಾಶ ಸಿಕ್ಕಿದೆ. ನಾವೆಲ್ಲರೂ ನಮ್ಮ ಗ್ರಾಮವನ್ನು ಸ್ವಚ್ಚವಾಗಿಟ್ಟುಕೊಳ್ಳೋಣ ಎಂದೇಳಿ ಶುಭ ಹಾರೈಸಿದರು.


ಮುಖ್ಯ ಅತಿಥಿಗಳಾಗಿದ್ದ ಕುಂಬ್ರ ಮಾತೃಶ್ರೀ ಅರ್ಥ್‌ಮೂವರ‍್ಸ್ ಮಾಲಕ, ಉದ್ಯಮಿ ಮೋಹನದಾಸ ರೈ ಕುಂಬ್ರ, ವರ್ತಕರ ಸಂಘದ ಗೌರವ ಸಲಹೆಗಾರರಾದ ಕುಂಬ್ರ ದುರ್ಗಾಪ್ರಸಾದ್ ರೈ, ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಚಂದ್ರಕಾಂತ ಶಾಂತಿವನ, ಪತ್ರಕರ್ತ ಸಿಶೇ ಕಜೆಮಾರ್‌ರವರುಗಳು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ವೇದಿಕೆಯಲ್ಲಿ ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆ,ಒಳಮೊಗ್ರು ಗ್ರಾಪಂ ಉಪಾಧ್ಯಕ್ಷ ಅಶ್ರಫ್ ಉಜಿರೋಡಿ, ಅಝ್ಮೀಯ ಟ್ರೇಡರ‍್ಸ್ ಮಾಲಕ, ಉದ್ಯಮಿ ಯೂಸುಫ್ ಹಾಜಿ ಕೈಕಾರ ಉಪಸ್ಥಿತರಿದ್ದರು. ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್‌ರಾಯ ಸಭಾಧ್ಯಕ್ಷತೆ ವಹಿಸಿದ್ದರು. ವಂಶಿ ಬೊಳ್ಳಾಡಿ ಪ್ರಾರ್ಥಿಸಿದರು. ವರ್ತಕರ ಸಂಘದ ಕೋಶಾಧಿಕಾರಿ ಸಂಶುದ್ದೀನ್ ಎ.ಆರ್ ಸ್ವಾಗತಿಸಿದರು. ಸಂಘದ ಸ್ಥಾಪಕ ಅಧ್ಯಕ್ಷ ಶ್ಯಾಮ್‌ಸುಂದರ್ ರೈ ಕೊಪ್ಪಳರವರು ಸಂಘದ ನಡೆದು ಬಂದ 20 ವರ್ಷಗಳ ಪ್ರಯಾಣವನ್ನು ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ಭವ್ಯ ರೈ ವಂದಿಸಿದರು. ಶಿಕ್ಷಕರುಗಳಾದ ಬಾಲಕೃಷ್ಣ ಪೊರ್ದಾಲ್ ಮತ್ತು ವಿಶ್ವನಾಥ ಗೌಡ ಬೊಳ್ಳಾಡಿ ಕಾರ್ಯಕ್ರಮ ನಿರೂಪಿಸಿದರು. ವರ್ತಕರ ಸಂಘದ ಪದಾಧಿಕಾರಿಗಳು ಸಹಕರಿಸಿದ್ದರು.

ಸನ್ಮಾನ ಕಾರ್ಯಕ್ರಮ
ವರ್ತಕರ ಸಂಘದ ಗೌರವ ಸಲಹೆಗಾರರಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನ, ಸೆಲ್ಫೀ ಪಾಯಿಂಟ್ ಕೊಡುಗೆಯಾಗಿ ನೀಡಿದ ಆಕರ್ಷಣ್ ಇಂಡಸ್ಟ್ರೀಸ್‌ನ ಮಾಲಕ ಮಹಮ್ಮದ್ ಸಾದಿಕ್ ಹಾಜಿ, ಪತ್ರಕರ್ತ ಸಿಶೇ ಕಜೆಮಾರ್, ಶಿಕ್ಷಣ ಕ್ಷೇತ್ರದ ಪ್ರತಿಭೆಗಳಾದ ಸನ್ನಿಧಿ ಕುರಿಕ್ಕಾರ, ಮೊಹಮ್ಮದ್ ಹಾಶೀರ್,ಫಾತಿಮತುಲ್ ಬುಸೈರ, ಎಸ್.ಪಿ ಮುಹಮ್ಮದ್ ಹಾಶಿರ್, ಫಾತಿಮತ್ ಶಿಫಾ, ಕಾವ್ಯಶ್ರೀ, ತನುಶ್ರೀ, ಅಕ್ಷಯ್, ಅಭೀಷ್ ರೈ ಮಂದಾರ ಹಾಗೂ ಒಳಮೊಗ್ರು, ಕೆದಂಬಾಡಿ ಮತ್ತು ಅರಿಯಡ್ಕ ಗ್ರಾಮ ಪಂಚಾಯತ್‌ನ ಸ್ವಚ್ಚ ವಾಹಿನಿಯ ಸ್ವಚ್ಛತಾ ಸೇನಾನಿಗಳಿಗೆ ಸನ್ಮಾನ ಮೂಲಕ ಗೌರವಿಸಲಾಯಿತು. ಶಾಲು, ಹಾರ, ಫಲಪುಷ್ಪ, ಸ್ಮರಣಿಕೆ, ಸನ್ಮಾನ ಪತ್ರದೊಂದಿಗೆ ಗುರುತಿಸಿ ಗೌರವಿಸಲಾಯಿತು.


ಮನರಂಜಿಸಿದ ಸಾಂಸ್ಕೃತಿಕ ವೈವಿಧ್ಯ
ಸಭಾ ಕಾರ್ಯಕ್ರಮದ ಮೊದಲು ಕುಂಬ್ರ ವರ್ತಕರ ಸಂಘದ ಸದಸ್ಯರ ಮಕ್ಕಳಿಂದ ಮತ್ತು ಸ್ಥಳೀಯ ಅಂಗನವಾಡಿ ಪುಟಾಣಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಬಳಿಕ ಅಕ್ಷಯ ಕಾಲೇಜು ಸಂಪ್ಯ ಪುತ್ತೂರು ಇವರಿಂದ ‘ಅಕ್ಷಯ ಕಲಾ ವೈಭವ’ ನೃತ್ಯ ರೂಪಕ, ನೃತ್ಯ ಮನರಂಜಿಸಿತು. ಕಾರ್ಯಕ್ರಮದ ಕೊನೆಯಲ್ಲಿ ವರ್ತಕರ ಸಂಘ ಏರ್ಪಡಿಸಿದ್ದ ಅದೃಷ್ಟ ಚೀಟಿಯ ಡ್ರಾ ಕಾರ್ಯಕ್ರಮ ನಡೆಯಿತು.


ಕುಂಬ್ರದ ಸೆಲ್ಫೀ ಪಾಯಿಂಟ್‌ನಲ್ಲಿ ಇರಿಸಲಾಗಿರುವ ಎತ್ತಿನ ಗಾಡಿ ಇದು ನನ್ನ ಕಲ್ಪನೆಯಲ್ಲ ನನ್ನ ಆತ್ಮೀಯ ಸ್ನೇಹಿತರಾಗಿರುವ ನಾರಾಯಣ ಆಚಾರ್‌ರವರು ನನ್ನೊಂದಿಗೆ ಹಂಚಿಕೊಂಡ ಕಲ್ಪನೆಯಾಗಿದೆ. ಬಾಂತಲಪ್ಪು(ಕುಂಬ್ರ)ನಲ್ಲಿ ಹಿಂದಿನ ಕಾಲದಲ್ಲಿ ಎತ್ತಿನ ಗಾಡಿಗಳು ಸಾಲುಗಟ್ಟಿ ನಿಲ್ಲುತ್ತಿದ್ದವು ಆ ನೆನಪಿಗಾಗಿ ನಾರಾಯಣ ಆಚಾರ್‌ರವರ ಕೆತ್ತನೆಯಲ್ಲೇ ಇಂದು ಎತ್ತಿನ ಗಾಡಿಯನ್ನು ಮಾಡಿ ನಿಲ್ಲಿಸಿದ್ದೇವೆ ಎಂದು ಮಹಮ್ಮದ್ ಸಾದಿಕ್ ಹಾಜಿಯವರು ಸೆಲ್ಫೀ ಪಾಯಿಂಟ್ ಬಗ್ಗೆ ಅನುಭವ ಹಂಚಿಕೊಂಡರು.

ಕುಂಬ್ರಕ್ಕೆ ಬಾಂತಲಪ್ಪು ಎಂದು ಹೆಸರು ಇತ್ತು, ಇದು ವಿಟ್ಲ ಮತ್ತು ಪಂಜ ಸೀಮೆಯ ಗಡಿ ಪ್ರದೇಶವಾಗಿತ್ತು. ಇಲ್ಲಿ ಒಂದು ಗಡಿ ಕಲ್ಲು ಇತ್ತು. ದಕ್ಷಿಣ ಕನ್ನಡದ ಇತಿಹಾಸದಲ್ಲೇ ಬಹಳ ದೊಡ್ಡದಾದ ಕೋಳಿ ಅಂಕ ಇಲ್ಲಿ ನಡೆಯುತ್ತಿತ್ತು. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿಯೇ ಜಾಸ್ತಿ ಇತ್ತು. ಬಂಟ್ವಾಳ ಕಡೆಯಿಂದ ವಿವಿಧ ಸಾಮಾಗ್ರಿ ಹೇರಿಕೊಂಡು ಬರುತ್ತಿದ್ದ ಎತ್ತಿನಗಾಡಿಗಳು ರಾತ್ರಿ ಸಮಯ ಕುಂಬ್ರದಲ್ಲಿ ತಂಗುತ್ತಿದ್ದವು. ಬಸ್ಸು ಇಲ್ಲದ ಸಮಯದಲ್ಲಿ ನೂರಾರು ಎತ್ತಿನ ಗಾಡಿಗಳು ಕುಂಬ್ರದಲ್ಲಿ ನಿಲ್ಲುತ್ತಿದ್ದವು ಎಂಬುದನ್ನು ಸಾಂಕೇತಿಕವಾಗಿ ಸೆಲ್ಫೀ ಪಾಯಿಂಟ್‌ನಲ್ಲಿ ತೋರಿಸಲಾಗಿದೆ ಎಂದು ಕುಂಬ್ರ ದುರ್ಗಾಪ್ರಸಾದ್ ರೈ ತನ್ನ ಮಾತುಗಳ ಮೂಲಕ ತಿಳಿಸಿದರು.

‘ ಎಲ್ಲರ ಸಹಕಾರದಿಂದ ಸಂಘದ 20 ನೇ ವರ್ಷಾಚರಣೆ ಬಹಳ ಸಂಭ್ರಮದಿಂದ ನಡೆದಿದೆ. ಪೊರ್ಲುದ ಕುಂಬ್ರ ಕಲ್ಪನೆಯಲ್ಲಿ ಆಕರ್ಷಣ್ ಇಂಡಸ್ಟ್ರೀಸ್‌ನ ಕೊಡುಗೆಯಾಗಿ ನೀಡಿರುವ ಸೆಲ್ಫೀ ಪಾಯಿಂಟ್ ಎಲ್ಲರ ಮೆಚ್ಚುಗೆ ಪಡೆದುಕೊಂಡಿದೆ. ಕಾರ್ಯಕ್ರಮಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಸಂಘದ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತೇವೆ, ಮುಂದೆಯೂ ಸಹಕಾರವನ್ನು ಬಯಸುತ್ತೇವೆ.’
ರಫೀಕ್ ಅಲ್‌ರಾಯ, ಅಧ್ಯಕ್ಷರು ಕುಂಬ್ರ ವರ್ತಕರ ಸಂಘ

LEAVE A REPLY

Please enter your comment!
Please enter your name here