ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿಯಲ್ಲಿ ಕಾರೊಂದು ಡಿವೈಡರ್‌ಗೆ ಡಿಕ್ಕಿಯಾದ ಪರಿಣಾಮ ಕಾರಿನಲ್ಲಿದ್ದ ಪ್ರಯಾಣಿಕರೋರ್ವರು ಮೃತಪಟ್ಟ ಘಟನೆ ನ.17ರಂದು ಸಂಜೆ ನಡೆದಿದೆ.


ಮೃತಪಟ್ಟವರನ್ನು ಅರಿಯಡ್ಕ ಗ್ರಾಮದ ಪಯಂದೂರು ಕೋಡಿಯಡ್ಕ ನಿವಾಸಿ, ಕೂಲಿಕಾರ್ಮಿಕ ರಾಮಣ್ಣ ಪೂಜಾರಿ ಅವರ ಪುತ್ರ ಜಗದೀಶ್(26ವ.)ಎಂದು ಗುರುತಿಸಲಾಗಿದೆ. ಇವರ ಸ್ನೇಹಿತ ಕಾರು ಚಾಲಕ ಸಚಿನ್ ಎಂಬವರು ಅಪಾಯದಿಂದ ಪಾರಾಗಿದ್ದಾರೆ. ಜಗದೀಶ್ ಹಾಗೂ ಅವರ ಸ್ನೇಹಿತರು ಬೇರೆ ಬೇರೆ ಕಾರಿನಲ್ಲಿ ಶಿರಾಡಿ ಗ್ರಾಮದ ಗುಂಡ್ಯ ಸಮೀಪದ ಗಡಿ ದೇವಸ್ಥಾನಕ್ಕೆ ಹೋದವರು ಅಲ್ಲಿಂದ ಹಿಂತಿರುಗಿ ಬರುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಸಚಿನ್ ಚಲಾಯಿಸುತ್ತಿದ್ದ ಕಾರಿನಲ್ಲಿ ಜಗದೀಶ್ ಮಾತ್ರ ಇದ್ದರು. ವೇಗವಾಗಿ ಬಂದ ಕಾರು ಮಣ್ಣಗುಂಡಿಯಲ್ಲಿ ಡಿವೈಡರ್‌ಗೆ ಡಿಕ್ಕಿಯಾಗಿ ಡಿವೈಡರ್ ಮೇಲೆ ಏರಿ ನಿಂತಿದೆ. ಘಟನೆಯಲ್ಲಿ ಕಾರು ನಜ್ಜುಗುಜ್ಜಾಗಿದ್ದು ಗಂಭೀರ ಗಾಯಗೊಂಡಿದ್ದ ಜಗದೀಶ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಜಗದೀಶ್ ಅವರು ತಂದೆ ರಾಮಣ್ಣ ಪೂಜಾರಿ, ತಾಯಿ ಸುಶೀಲ ಹಾಗೂ ಸಹೋದರ ಹೇಮಚಂದ್ರ ಅವರನ್ನು ಅಗಲಿದ್ದಾರೆ. ಜಗದೀಶ್ ಅವರು ವೃತ್ತಿಯಲ್ಲಿ ಪೈಂಟರ್ ಆಗಿದ್ದು ಮಜ್ಜಾರಡ್ಕ ಶ್ರೀ ವಿಷ್ಣು ಯುವಶಕ್ತಿ ಬಳಗದ ಸಕ್ರೀಯ ಕಾರ್ಯಕರ್ತರಾಗಿದ್ದರು ಎಂದು ವರದಿಯಾಗಿದೆ.
