ಪುತ್ತೂರು: ಭಕ್ತಿಯಿಂದ ನಂಬಿದ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುತ್ತಿರುವ ಆರ್ಯಾಪು ಗ್ರಾಮದ ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಶ್ರೀ ಮಲರಾಯ ದೈವಸ್ಥಾನದ ಕಾರಣಿಕ ಶಕ್ತಿಗಳಾದ ಶ್ರೀ ಮಲರಾಯ ದೈವ ಮತ್ತು ಪರಿವಾರ ದೈವಗಳಿಗೆ 18 ನೇ ವರ್ಷದ ವಿಜೃಂಭಣೆಯ ನೇಮೋತ್ಸವವು ನ.19 ಮತ್ತು 20 ರಂದು ಅದ್ಧೂರಿಯಾಗಿ ನಡೆಯಲಿದೆ.
ನೇಮೋತ್ಸವದ ಅಷ್ಠದಶ ಸಂಭ್ರಮ ಇದಾಗಿದ್ದು ಸೆ.12 ರಂದು ಶ್ರೀ ಮಲರಾಯ ದೈವಸ್ಥಾನದ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ಬ್ರಹ್ಮಕಲಶೋತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆದಿದೆ.
ವೈಧಿಕ ಕಾರ್ಯಕ್ರಮಗಳು
ನ.19 ಮಂಗಳವಾರ ಬೆಳಿಗ್ಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಸ್ಥಳಶುದ್ಧಿ, ಗಣಹೋಮ, ನಾಗತಂಬಿಲ, ಹರಿಸೇವೆ, ಧರ್ಮದೈವಗಳ ಕಲಶಾಭಿಷೇಕ ಮತ್ತು ತಂಬಿಲ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆದು ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ.
ದೈವಗಳ ನೇಮೋತ್ಸವ ಸಂಭ್ರಮ
ನ.19 ರಂದು ಸಂಜೆ ಗಂಟೆ 6.00 ಕ್ಕೆ ದೈವಗಳ ಭಂಡಾರ ಇಳಿಯುವುದು, ರಾತ್ರಿ ಗಂಟೆ 8.30 ರಿಂದ ಅನ್ನಸಂತರ್ಪಣೆ, ರಾತ್ರಿ ಗಂಟೆ 9.00 ರಿಂದ ಕಳಲ್ತಾ ಗುಳಿಗ ನೇಮೋತ್ಸವ (ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ-ಬಡಿಸುವುದು) ಬಳಿಕ ಶ್ರೀ ಮಲರಾಯ ಮತ್ತು ಶ್ರೀ ಮಲರಾಯ ಬಂಟ ಮಹಿಶಾಂತಾಯ ದೈವಗಳ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಲಿದೆ.
ನ.20 ರಂದು ಬೆಳಿಗ್ಗೆ ಗಂಟೆ 6.00 ರಿಂದ ಕೊರಗಜ್ಜ ದೈವದ ನೇಮ ನಡೆಯಲಿದೆ. ಸಂಜೆ ಗಂಟೆ 5.00 ರಿಂದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ನೇಮೋತ್ಸವ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೈವಗಳ ಗಂಧಪ್ರಸಾದದೊಂದಿಗೆ ಅನ್ನಪ್ರಸಾದ ಸ್ವೀಕರಿಸುವಂತೆ ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಮತ್ತು ಕುಟುಂಬಸ್ಥರ ಪ್ರಕಟಣೆ ತಿಳಿಸಿದೆ.
ಅಭೂತಪೂರ್ವ ಪುನರ್ ಪ್ರತಿಷ್ಠಾ ಬ್ರಹ್ಮಕಲಶ
ಶ್ರೀ ಮಲರಾಯ ದೈವಸ್ಥಾನದಲ್ಲಿ ಸುಮಾರು 22 ಲಕ್ಷ ರೂಪಾಯಿಗಳ ಅಭಿವೃದ್ದಿ ಕೆಲಸಗಳ ಸಮರ್ಪಣೆಯೊಂದಿಗೆ 18 ವರ್ಷಗಳ ಬಳಿಕ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದದಲ್ಲಿ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವಿಜೃಂಭಣೆಯಿಂದ ನಡೆದು ಸಾವಿರಾರು ಮಂದಿ ಅನ್ನಪ್ರಸಾದ ಸ್ವೀಕರಿಸುವ ಮೂಲಕ ಶ್ರೀ ದೈವಗಳ ಕೃಪೆಗೆ ಪಾತ್ರರಾಗಿದ್ದಾರೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿ ಮೂಡಿಬಂದಿದೆ.
ನೇಮೋತ್ಸವದ ಅಷ್ಠದಶ ಸಂಭ್ರಮ
ಶ್ರೀ ಮಲರಾಯ ದೈವಸ್ಥಾನದಲ್ಲಿ ಪ್ರತಿವರ್ಷ ವಿಜೃಂಭಣೆಯ ನೇಮೋತ್ಸವ ನಡೆದುಕೊಂಡು ಬಂದಿದೆ. ಶ್ರೀ ದೈವಸ್ಥಾನದಲ್ಲಿ ನಡೆಯುವ 18 ನೇ ವರ್ಷದ ನೇಮೋತ್ಸವ ಇದಾಗಿದೆ. ವಿಶೇಷವಾಗಿ 18 ವರ್ಷಗಳ ಬಳಿಕ ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಕೂಡ ನಡೆದಿದೆ. ಈ ವರ್ಷ ವಿಶೇಷವಾಗಿ ದೈವಸ್ಥಾನದ ಶ್ರೀ ಮಲರಾಯ ದೈವ, ಮಲರಾಯ ಬಂಟ ಮಹಿಶಾಂತಾಯ ದೈವಗಳ ನೇಮೋತ್ಸವದೊಂದಿಗೆ ಪರಿವಾರ ದೈವಗಳಾದ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳಿಗೆ ಹಾಗೇ ಸ್ವಾಮಿ ಕೊರಗಜ್ಜ ದೈವಕ್ಕೆ ನೇಮೋತ್ಸವ ನಡೆಯಲಿದೆ.