“ಪ್ರಗತಿ ವೈಭವ” ಅಷ್ಟಾದಶ 18ರ ಸಂಭ್ರಮ

0

ಪುತ್ತೂರು: ಪುತ್ತೂರಿನ ಹೃದಯ ಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಗತಿ ಸ್ಟಡಿ ಸೆಂಟರ್ 18 ಸಂವತ್ಸರಗಳನ್ನು ಪೂರೈಸಿದ ಸಂಭ್ರಮದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪದವಿಪೂರ್ವ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಗಳ ಪ್ರಗತಿ ವೈಭವ-2024 ಇಲ್ಲಿನ ಪುರಭವನದಲ್ಲಿ ನವೆಂಬರ್ 17 ರಂದು ನಡೆಯಿತು. ಕಾರ್ಯಕ್ರಮವನ್ನು ಮುಗ್ಧ ಪುಟಾಣಿ ಮಕ್ಕಳು ದೀಪ ಪ್ರಜ್ವಲನೆಯ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಪ್ರಗತಿ ಸ್ಟಡಿ ಸೆಂಟರ್‌ನ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಅವರ ತಾಯಿ ದಿ|ಪಿ.ವಿ. ಸಾವಿತ್ರಿ ಮತ್ತು ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಅವರ ಸಹೋದರ ಕೆ. ವಿನೋದ್ ಕುಮಾರ್ ಅವರ ಆಶೀರ್ವಾದ ಮಾರ್ಗದರ್ಶನ ಮತ್ತು ಸಹಾಯದಿಂದ ಪ್ರಾರಂಭಗೊಂಡಿರುವ ಪ್ರಗತಿ ಸ್ಟಡಿ ಸೆಂಟರ್ 17 ಸಂವತ್ಸರಗಳನ್ನು ಪೂರೈಸಿ 18ನೇ ಸಂವತ್ಸರಕ್ಕೆ ಪಾದಾರ್ಪಣೆ ಮಾಡುತ್ತಿದೆ.

ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಅಶೋಕ್ ಕುಮಾರ್ ರೈ ವಹಿಸಿ ಮಾತನಾಡಿ ಪ್ರಗತಿ ಸಂಸ್ಥೆಯು ಹಲವಾರು ವರ್ಷಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ನೀಡುತ್ತಿದೆ. ಮುಂದಿನ ದಿನಗಳಲ್ಲಿ ಪ್ರಗತಿಯು ಹಲವಾರು ಶಾಖೆಗಳನ್ನು ತೆರೆಯುವಂತಾಗಲಿ ಎಂದು ಶುಭ ಹಾರೈಸಿದರು.

ಮುಖ್ಯ ಅತಿಥಿ ಸುದ್ದಿ ಪತ್ರಿಕೆಯ ಕಾರ‍್ಯನಿರ್ವಹಣಾಧಿಕಾರಿಯಾದ ಸೃಜನ್ ಊರುಬೈಲು ಮಾತನಾಡಿ, ಪ್ರಗತಿಯ ವಿದ್ಯಾರ್ಥಿಗಳಿಗೆ ಬಹಳ ಶಿಸ್ತಿನಿಂದ ಇದ್ದು ಪ್ರಗತಿ ಸಂಸ್ಥೆಯು ಆಯೋಜಿಸಿದ ಕಾರ್ಯಕ್ರಮವು ಯಶಸ್ಸು ಕಾಣಲಿ, ವರ್ಷದಿಂದ ವರ್ಷಕ್ಕೆ ಬೆಳೆಯಲಿ ಎಂದು ಹಾರೈಸಿದರು.

ಸ್ಪರ್ಧೆಯ ತೀರ್ಪೂಗಾರರಾಗಿ ನಾರಾಯಣ ರೈ ಕುಕ್ಕುವಳ್ಳಿ, ತಾರನಾಥ ಸವಣೂರು, ವಿದೂಷಿ ಪವಿತ್ರ ರೂಪೇಶ್, ರವಿ ಪಾಂಬಾರು ಹಾಗೂ ಜಗನ್ನಾಥ ಅರಿಯಡ್ಕ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಡಾ| ಮೇಘ ಗೋಕುಲ್‌ನಾಥ್ ರನ್ನು ಶಾಸಕರಾದ ಅಶೋಕ್ ಕುಮಾರ್ ರೈ ಕೋಡಿಂಬಾಡಿ ಸನ್ಮಾನಿಸಿದರು.

ಸನ್ಮಾನಿತರು ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ.ವಿ. ಹಾಗೂ ಪ್ರಾಂಶುಪಾಲೆ ಹೇಮಲತಾ ಗೋಕುಲ್ ದಂಪತಿಗಳ ಪುತ್ರಿಯಾದ ಡಾ| ಮೇಘಗೋಕುಲ್ ಇತ್ತೀಚೆಗೆ ಪಿಎಚ್‌ ಡಿ ಪದವಿ ಪಡೆದಿದ್ದು ಅದರ ಸಲುವಾಗಿ ಸಂಸ್ಥೆಯ ಉಪನ್ಯಾಸಕರ ವತಿಯಿಂದ ಶಾಸಕರಾದ ಅಶೋಕ್ ಕುಮಾರ್ ರೈ ಸನ್ಮಾನಿಸಿದರು.


ಸ್ಪರ್ಧೆಯ ವಿಜೇತರ ವಿವರ:
ಪ್ರಗತಿ ವೈಭವ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ವಿಭಾಗದಲ್ಲಿ:- ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ತೆಂಕಿಲ (ಪ್ರಥಮ), ಲಿಟ್ಲ್ ಪ್ಲವರ್ ಹಿರಿಯ ಪ್ರಾಥಮಿಕ ಶಾಲೆ, ದರ್ಬೆ (ದ್ವಿತೀಯ)
ಪ್ರೌಢಶಾಲಾ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಪ್ರೌಢಶಾಲೆ ತೆಂಕಿಲ (ಪ್ರಥಮ), ಸರಸ್ವತಿ ವಿದ್ಯಾಮಂದಿರ ನರಿಮೊಗರು (ದ್ವಿತೀಯ)
ಪದವಿಪೂರ್ವ ವಿಭಾಗದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜು ದರ್ಬೆ ಪುತ್ತೂರು, ಬಹುಮಾನ ಪಡೆದರು. ವಿಜೇತ ತಂಡಗಳಿಗೆ ಟ್ರೋಫಿ ಪ್ರಮಾಣ ಪತ್ರವನ್ನು ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ತಂಡಗಳನ್ನು ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ನಾರಾಯಣ ರೈ ಕುಕ್ಕುವಳ್ಳಿ, ತಾರಾನಾಥ ಸವಣೂರು, ರವಿ ಪಾಂಬಾರು, ಜಗನ್ನಾಥ ಅರಿಯಡ್ಕ ಹಾಗೂ ಪವಿತ್ರ ರೂಪೇಶ್ ಇವರು ತೀರ್ಪುಗಾರರಾಗಿ ಸಹಕರಿಸಿದರು.


“ಕತ್ತಲಿನಲ್ಲಿರುವ ವಿದ್ಯಾರ್ಥಿಗಳಿಗೆ ಬೆಳಕು ನೀಡುವ ಸಂಸ್ಥೆ ಈ ಪ್ರಗತಿ ವಿದ್ಯಾ ಸಂಸ್ಥೆ.”
ಮಾಜಿ ಬಿಜೆಪಿ ರಾಜಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಭೂತ ಕಾಲದ ಕತ್ತಲಲ್ಲಿ ಬೆಳಕನ್ನು ಹುಡುಕುವುದಕ್ಕಿಂತ ಭವಿಷ್ಯತ್ ಕಾಲದ ಕತ್ತಲಿನಲ್ಲಿ ಬೆಳಕನ್ನು ಮಾಡುವವ ಸಾಧಕ. ಕತ್ತಲಿನಲ್ಲಿರುವ ಅದೆಷ್ಟೋ ವಿದ್ಯಾರ್ಥಿಗಳ ಬದುಕಿನಲ್ಲಿ ಬೆಳಕನ್ನು ನೀಡುವ ಕೆಲಸವನ್ನು ಈ ಪ್ರಗತಿ ಸಂಸ್ಥೆ ಮಾಡುತ್ತಿದೆ. ಈ ಸಾಧನೆಗಾಗಿ ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಹಾಗೂ ಪ್ರಾಂಶುಪಾಲರಾದ ಹೇಮಲತಾ ಗೋಕುಲ್‌ನಾಥ್ ಇವರಿಗೆ ಅಭಿನಂದನೆ ಸಲ್ಲಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಶಿಕ್ಷಣ ಸಂಸ್ಥೆಗಳಿವೆ. ಆದುದರಿಂದ ಶಿಕ್ಷಣಕ್ಕೆ ಕೊರತೆ ಇಲ್ಲ ಆದರೆ ಹಿಂದುಳಿದ ವಿದ್ಯಾರ್ಥಿಗಳಲ್ಲಿ ಮುಂದಕ್ಕೆ ತರುವಂತಹ ಇಂತಹ ಸಂಸ್ಥೆಯ ಅವಶ್ಯಕತೆ ಇದೆ ಎಂದು ಹೇಳಿದರು.


ವಿವೇಕಾನಂದ ಬಿ.ಎಡ್ ಕಾಲೇಜು ತೆಂಕಿಲ ಪುತ್ತೂರು ಇದರ ಪ್ರಾಂಶುಪಾಲೆ ಶೋಭಿತಾ ಸತೀಶ್ ರಾವ್ ಮಾತನಾಡಿ ನಿರ್ದಿಷ್ಟವಾದ ಕಾರ‍್ಯಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರದ್ದೇ ಆದ ವ್ಯಕ್ತಿತ್ವ ರೂಪಿಸಿಕೊಂಡಿರುವ ಸಜ್ಜನರು, ಹಿರಿಯರು ಸಾಧಕರಿಂದ ಕೂಡಿದ ಕಾರ‍್ಯಕ್ರಮವನ್ನು ಆಯೋಜಿಸಿದ ಪ್ರಗತಿ ಸಂಸ್ಥೆಯ ಸಂಚಾಲಕರು ಹಾಗೂ ಪ್ರಾಂಶುಪಾಲರಿಗೆ ಅಭಿವಂದನೆ ಸಲ್ಲಿಸಿದರು. ಮಕ್ಕಳನ್ನು ನಾವು ಹೂವಿನಂತೆ ಕಾಣಬೇಕು. ಹೀಗೆ ಪ್ರತಿ ಹೂ ವಿಭಿನ್ನವಾಗಿರುತ್ತದೆಯೋ ಅದೇ ರೀತಿ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯು ವಿಶೇಷತೆ ಇರುತ್ತದೆ ಎಂದು ಹೇಳಿದರು.


ವಿದ್ಯಾರ್ಥಿಗಳಿಗೆ ಧೈರ್ಯವನ್ನು ನೀಡುವುದೇ ಶಿಕ್ಷಣ-ಆಶಾ
ವಿವೇಕಾನಂದ ಪ್ರೌಢಶಾಲೆ ತೆಂಕಿಲ ಪುತ್ತೂರು ಇದರ ಮುಖ್ಯೋಪಾಧ್ಯಯನಿಯಾದ ಆಶಾ ಬೆಳ್ಳಾರೆ ಮಾತನಾಡಿ ವಿದ್ಯಾರ್ಥಿಗಳಗೆ ಧೈರ್ಯವನ್ನು ನೀಡುವುದೇ ಶಿಕ್ಷಣ. ವಿದ್ಯಾರ್ಥಿಗಳಿಗೆ ಗುರಿ, ಧ್ಯೇಯ, ಉದ್ದೇಶ ಎಲ್ಲವು ಒಂದೇ ಆಗಿರಬೇಕು. ಅದನ್ನು ತಲುಪುವ ಮಾರ್ಗ ಬೇರೆಯಾದರೂ ನಮ್ಮ ಉದ್ದೇಶ ಈಡೇರಬೇಕು. ಪ್ರಗತಿಯ ಮುಂದಿನ ಎಲ್ಲಾ ಕಾರ‍್ಯಗಳಿಗೆ ಮನಸ್ಸು, ಬುದ್ಧಿ, ದೇಹ ಇದರ ಸಮನ್ವಯ ಇರಲಿ ಎಂದು ಶುಭ ಹಾರೈಸಿದರು.


ಮೊಡಕವಿದ ವಾತಾವರಣ ಅನುಭವಿಸಿದ ವಿದ್ಯಾರ್ಥಿಗಳ ಬದುಕಿನಲ್ಲಿ ಆಶಾಕಿರಣ ಈ ಪ್ರಗತಿ ಸ್ಟಡಿ ಸೆಂಟರ್- ಸುದರ್ಶನ್ ಮೂಡಬಿದಿರೆ
ಭಾರತೀಯ ಜನತಾ ಪಾರ್ಟಿ ಇದರ ಮಾಜಿ ಜಿಲ್ಲಾಧ್ಯಕ್ಷ ಸುದರ್ಶನ್ ಮಾಡಬಿದಿರೆ ಅವರು ಮಾತನಾಡಿ 18 ವರ್ಷಗಳಿಂದ ವಿದ್ಯಾಭ್ಯಾಸದಲ್ಲಿ ಮೊಡಕವಿದ ವಾತಾವರಣ ಅನುಭವಿಸಿದ ವಿದ್ಯಾರ್ಥಿಗಳಿಗೆ ಉಜ್ವಲ ಭವಿಷ್ಯವನ್ನು ಕಲ್ಪಿಸುವ ಕೆಲಸವನ್ನು ಪ್ರಗತಿ ಸ್ಟಡಿ ಸೆಂಟರ್ ಮಾಡುತ್ತಿದೆ. ಈ ಉತ್ತಮ ಕೆಲಸಕ್ಕಾಗಿ ಸಂಸ್ಥೆಯ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದಕ್ಕೆ ಅಭಿವಂದನೆ ಸಲ್ಲಿಸಿದರು. ನಾವು ಯಾವುದೇ ಹಂತಕ್ಕೆ ತಲುಪಿದರು ನಮಗೆ ವಿದ್ಯೆ ನೀಡಿದ ಸಂಸ್ಥೆಯನ್ನು ಹಾಗೂ ಪೋಷಕರನ್ನು ಮರೆಯಬಾರದು ಎಂದು ಹೇಳಿದರು. ಇವತ್ತು ಪ್ರಗತಿಯ ಮಕ್ಕಳು ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರಿಗೆ ಆತ್ಮ ವಿಶ್ವಾಸವನ್ನು ತುಂಬುವ ಕೆಲಸವನ್ನು ಮಾಡಿದೆ ಎಂದರು.


“ಪ್ರಗತಿಗೆ ಪ್ರಗತಿಯೇ ಸಾಟಿ”:- ನಾರಾಯಣ ರೈ ಕುಕ್ಕುವಳ್ಳಿ
ಸುದ್ದಿ ಬಿಡುಗಡೆಯ ಪ್ರತಿಭಾರಂಗ, ಅಂಕಣಕಾರ, ಮಧುಪ್ರಪಂಚ ಪತ್ರಿಕೆಯ ಪ್ರಧಾನ ಸಂಪಾದಕರು, ನಿವೃತ್ತ ಶಿಕ್ಷಕರು ಆದ ನಾರಾಯಣ ರೈ ಕುಕ್ಕುವಳ್ಳಿ ಇವರು ಮಾತನಾಡಿ ಪ್ರಗತಿ ಎಂಬ ಸಂಸ್ಥೆಯು ವಿದ್ಯಾರ್ಥಿಗಳನ್ನು ಪ್ರತಿ ಕ್ಷಣ ಎಲ್ಲರನ್ನು ಗಮನಿಸಿ ಅವರ ಬದುಕಿನಲ್ಲಿ ತಿರುವು ನೀಡುವ ಸಂಸ್ಥೆಯೇ ಪ್ರಗತಿ ಸ್ಟಡಿ ಸೆಂಟರ್ ಇಲ್ಲಿ ಪ್ರತಿಭಾವಂತ ಉಪನ್ಯಾಸಕ ವೃಂದದವರಿದ್ದಾರೆ. ಅವರೆಲ್ಲರ ಮಾರ್ಗದರ್ಶನದಿಂದ ಇಂದು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡುತ್ತಿದ್ದಾರೆ. ಇವತ್ತು ಪ್ರಗತಿಯ ಚಿಂತನೆಗಳು ವಿಸ್ತಾರಗೊಂಡಿದೆ ಎಂದರು.


“ನೊಂದ ಪೋಷಕರ ಬದುಕಿನ ಆಶಾಕಿರಣ”
ಪೋಷಕರ ಪರವಾಗಿ ಕೊಡಗಿನ ಕಾರಗುಂದ ನಿವಾಸಿ ಮಲ್ಲಿಗೆ ಇವರು ಮಾತನಾಡಿ ನೊಂದ ಪೋಷಕರ ಬದುಕಿನ ಆಶಾಕಿರಣ ಈ ಸಂಸ್ಥೆ. ನನ್ನ ಮಗ 9ನೇ ತರಗತಿ ಅನುತ್ತೀರ್ಣಗೊಂಡು ಪ್ರಗತಿ ಸಂಸ್ಥೆಯಲ್ಲಿ 10ನೇ ತರಗತಿ ವಿದ್ಯಾಭ್ಯಾಸ ಮಾಡಿ ಉತ್ತೀರ್ಣಗೊಂಡು ಇದೀಗ ದ್ವಿತೀಯ ಪಿ.ಯು.ಸಿ ವಾಣಿಜ್ಯ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ನನ್ನ ಮಗನ ಶಿಕ್ಷಣಕ್ಕೆ ತಂದೆ ಹಾಗೂ ತಾಯಿಯ ಸ್ಥಾನದಲ್ಲಿ ನಿಂತು ಅವನಲ್ಲಿರುವ ತಪ್ಪುಗಳನ್ನು ಸರಿಪಡಿಸಿದ ಸಂಸ್ಥೆಯ ಮುಖ್ಯಸ್ಥರಿಗೆ ನಾವು ಜೀವನ ಪೂರ್ತಿ ಚಿರಋಣಿಗಳು ಎಂದು ಹೇಳಿದರು.

ಪೋಷಕರಾದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ನಿವಾಸಿಯಾದ ಅನಿತಾ ಎಂ.ಜಿ. ಇವರು ಮಾತನಾಡಿ ನನ್ನ ಮಗ 9ನೇ ತರಗತಿಯಲ್ಲಿ ಓದುತ್ತಿದ್ದಾನೆ. ಅವನು ಈ ಸಂಸ್ಥೆಗೆ ಬರುವಾಗ ಅಕ್ಷರ ಜ್ಞಾನವೇ ಇರಲಿಲ್ಲ. ಪ್ರತಿಷ್ಠಿತ ಶಾಲೆಯಲ್ಲಿ ಓದಿದರೂ ನನ್ನ ಮಗನಿಗೆ ಅಕ್ಷರ ಜ್ಞಾನವಿರಲಿಲ್ಲ 8ನೇ ತರಗತಿಯ ತನಕ ಉತ್ತೀರ್ಣಗೊಳಿಸಿ 9ನೇ ತರಗತಿಗೆ ದಾಖಲಾತಿ ನಿರಾಕರಿಸಿದ ಸಂದರ್ಭದಲ್ಲಿ ನಮ್ಮ ಮಗನಲ್ಲಿ ವಿಶ್ವಸವನ್ನು ತುಂಬಿ ಶಿಕ್ಷಣವನ್ನು ನೀಡಿದ ಸಂಸ್ಥೆ ಈ ಪ್ರಗತಿ. ಇಂದು ಎಲ್ಲ ವಿಷಯದಲ್ಲಿ ಉತ್ತಮ ಅಂಕಗಳನ್ನು ಪಡೆದಿರುತ್ತಾನೆ. ಈ ಸಂಸ್ಥೆಯ ಮುಖ್ಯಸ್ಥರು ಹಾಗೂ ಅಧ್ಯಾಪಕರ ಮೇಲಿನ ಗೌರವವು ಇನ್ನಷ್ಟು ಹೆಚ್ಚಾಗಿದೆ ಎಂದು ಹೇಳಿದರು.


2011-12ನೇ ಸಾಲಿನ ಹಿರಿಯ ವಿದ್ಯಾರ್ಥಿ ಅಬ್ದುಲ್ ಮಜೀದ್ ಇವರು ಮಾತನಾಡಿ ನಾನು ಇಂದು ಇಷ್ಟು ಸಾಧನೆ ಮಾಡಿರುವೆನು ಎಂದರೆ ಅದಕ್ಕೆ ಕಾರಣ ಈ ಪ್ರಗತಿ ಸ್ಟಡಿ ಸೆಂಟರ್. ಹೇಮಲತಾ ಒಬ್ಬ ತಾಯಿಯಂತೆ ನನ್ನ ತಪ್ಪುಗಳನ್ನು ತಿದ್ದಿ ನನ್ನ ಗೆಲುವಿಗೆ ಕಾರಣರಾಗಿದ್ದಾರೆ ಎಂದು ಹೇಳಿದರು.


ಸಂಸ್ಥೆಯ ಸಂಚಾಲಕ ಗೋಕುಲ್‌ನಾಥ್ ಪಿ. ವಿ. ಅವರು ಪ್ರಸ್ತಾವಿಕವಾಗಿ ಮಾತನಾಡಿ ಟ್ಯೂಟೋರಿಯಲ್ ಆಗಿ ಆರಂಭಗೊಂಡ ಸಂಸ್ಥೆ ತದನಂತರ CET, NEET ತರಗತಿಯ ಮೂಲಕ ಆರಂಭಗೊಂಡು ನಂತರ ಟ್ಯೂಷನ್ ಬ್ಯಾಚ್, NMMS ತರಗತಿ ಹೀಗೆ ಹಲವಾರು ತರಗತಿಯ ಮೂಲಕ 1200 ರಷ್ಟು ವಿದ್ಯಾರ್ಥಿಗಳು ವಿದ್ಯಾರ್ಜನೆ ಪಡೆಯುತ್ತಿದ್ದಾರೆ. ಈ ಸಂಧರ್ಭದಲ್ಲಿ ಸಹಕರಿಸಿದ ಅರ್ತಿಕಜೆ ಗಣಪತಿ ಭಟ್, ವಿ.ವಿ. ಅರ್ತಿಕಜೆ, ಶೋಭಿತಾ ಸತೀಶ್ ರಾವ್, ಗಂಗಾಧರ್ ಬೆಳ್ಳಾರೆ, ಆಶಾ ಬೆಳ್ಳಾರೆ ಇವರನ್ನು ಸ್ಮರಿಸಿದರು. ಕಾರ‍್ಯಕ್ರಮದಲ್ಲಿ ವಿಶೇಷ ಕಾರ‍್ಯಕ್ರಮವನ್ನು ನೀಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ ಇವರನ್ನು ಅಭಿನಂದಿಸಿದರು.


ಪ್ರಗತಿ ಸ್ಟಡಿ ಸೆಂಟರ್‌ನ ಪ್ರಾಂಶುಪಾಲೆ ಹೇಮಲತಾ ಗೋಕುಲ್‌ನಾಥ್ ಮಾತನಾಡಿ ಪುತ್ತೂರಿನ ಆಸುಪಾಸಿನ ಜನರು ಪ್ರಗತಿಯ ಫಲಿತಾಂಶಕ್ಕೆ ಕಾಯುತ್ತಿದ್ದು, ಮುಂದಿನ ದಿನಗಳಲ್ಲಿ ಉತ್ತಮವಾಗಿ ಓದಿ ಉತ್ತಮ ಫಲಿತಾಂಶವನ್ನು ನೀಡುವಲ್ಲಿ ಗಮನಹರಿಸಿ ಎಂದು ವಿದ್ಯಾರ್ಥಿಗಳಿಗೆ ಹಿತನುಡಿದರು.


ಕಾರ‍್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ ಪ್ರಸುತ್ತ ಬನ್ಸಿಕ್ ಕೊರಿಯನ್ ಕಂಪೆನಿ ಲಂಡನ್‌ನಲ್ಲಿ ಉದ್ಯೋಗಿ ಅಬ್ದುಲ್ ಮಜೀದ್ ಆನಾಜೆ ಕೊಡಿಪ್ಪಾಡಿ, ನಿವೃತ್ತ ಶಿಕ್ಷಕರು, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರತಿಭರಂಗದ ಅಂಕಣಕಾರರಾದ, ಪ್ರಧಾನ ಸಂಪಾದಕರು ಮಧುಪ್ರಪಂಚದ ನಾರಾಯಣ ರೈ ಕುಕ್ಕುವಳ್ಳಿ, ಪೋಷಕರ ಪರವಾಗಿ ಕೊಡಗಿನ ಕಾರಗುಂದ ನಿವಾಸಿಯಾಗಿರುವ ಪ್ರಸುತ್ತ ದ್ವಿತೀಯ ಪಿಯುಸಿ ವಿದ್ಯಾರ್ಥಿ ಬಿ.ಪಿ ಬಿದ್ದಪ್ಪ ಇವನ ಪೋಷಕರಾದ ಪವನ್ ಹಾಗೂ ಮಲ್ಲಿಗೆಯವರನ್ನು ಉತ್ತಮ ಪೋಷಕರು ಎಂಬುದಾಗಿ ಸಂಸ್ಥೆಯ ವತಿಯಿಂದ ಸನ್ಮಾನಿಸಲಾಯಿತು.

ಕಾರ‍್ಯಕ್ರಮದಲ್ಲಿ ಶ್ರೀ ಪ್ರಗತಿ ಎಜುಕೇಶನ್ ಫೌಂಡೇಶನ್ (ರಿ.) ಅಧ್ಯಕ್ಷರು ಹೇಮಾವತಿ ಸುದರ್ಶನ್ ಮೂಡಬಿದಿರೆ ಇವರು ಉಪಸ್ಥಿತರಿದ್ದರು. 2023-24ನೇ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಸಾಧನೆ ಗೈದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಾದ ದಿಶಾ ಸಿ.ಇ, ಆಯುಷಾತ್ತುಲ್ ಮಿಸ್ರಿಯ, ಅಶ್ವಿಜ ಕೆ. ಹಾಗೂ 10ನೇ ತರಗತಿ ವಿದ್ಯಾರ್ಥಿಗಳಾದ ಪ್ರಣಾಮ್ ಕೆ.ಟಿ., ಫಾತಿಮತ್ ಫಾರಹ್ಹಾನ, ಐರಾ ಕನಾಮ್ ಅಭಿನಂಧಿಸಲಾಯಿತು.

ಪ್ರಗತಿ ಎಜುಕೇಶನ್ ಫೌಂಡೇಶನ್‌ನ 17 ವರ್ಷ ಸಾಗಿ ಬಂದ ಕುರಿತು ಪ್ರಗತಿ ಸ್ಟಡಿ ಸೆಂಟರ್‌ನ ಮುಖ್ಯಗುರು ಪ್ರಮೀಳಾ ಎನ್.ಡಿ. ವಾರ್ಷಿಕ ವರದಿ ವಾಚಿಸಿದರು. ಪ್ರಗತಿ ಸ್ಟಡಿ ಸೆಂಟರ್ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.ಪ್ರಗತಿ ಸ್ಟಡಿ ಸೆಂಟರ್‌ನ ಸಹೋದ್ಯೋಗಿಗಳು ಪ್ರಾರ್ಥಿಸಿದರು. ಪ್ರಗತಿ ಸ್ಟಡಿ ಸೆಂಟರ್‌ನ ಉಪನ್ಯಾಸಕರಾದ ಸುಮಿತ್ರಾ ಪಿ., ಶುತಿ, ವಂದನ ಅತಿಥಿಗಳನ್ನು ಸ್ವಾಗತಿಸಿದರು. ಪ್ರಗತಿ ಸ್ಟಡಿ ಸೆಂಟರ್‌ನ ಉಪನ್ಯಾಸಕರಾದ ಸುಪ್ರೀತ, ಕೀರ್ತಿಕಾ, ಅಕ್ಷತಾ, ಕಲಾವತಿ, ಅಭಿಷೇಕ್ ಶ್ರೀ ಪ್ರಗತಿ ವಿಸ್ತಾರ ಎವಿಯೇಷನ್ ಆಂಡ್ ಮ್ಯಾನೇಜ್‌ಮೆಂಟ್‌ನ ಉಪನ್ಯಾಸಕರಾದ ಸ್ನಿಗ್ಧ ಆಳ್ವ, ಪೂಜಾ, ದಿವ್ಯ, ಚೈತ್ರ, ಜಯಶ್ರೀ ನೆಟ್ಟಾರು, ಅರುಣ್ ಜೋಶ್ ಕಾರ‍್ಯಕ್ರಮಕ್ಕೆ ಸಹಕರಿಸಿದರು.ಅರ್ಥಶಾಸ್ತ್ರ ಉಪನ್ಯಾಸಕ ನಾಸಿರ್ ಇವರು ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕರಾದ ಸೌಮ್ಯ, ಹರ್ಷಿತಾ, ಮಾಧವಿ ಕಾರ‍್ಯಕ್ರಮ ನಿರೂಪಿಸಿದರು. ಗಣಿತಶಾಸ್ತ್ರ ಉಪನ್ಯಾಸಕಿ ಮಧುಶ್ರೀ ವಂದಿಸಿದರು. ಕಾರ‍್ಯಕ್ರಮದಲ್ಲಿ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಪೋಷಕರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here