ಅಂಬಿಕಾದಲ್ಲಿ ದ.ಕ. ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಆಯೋಜನೆ

0

ದೇಸೀಯ ಕಲೆಗಳ ಅರಿವು ವಿದ್ಯಾರ್ಥಿಗಳಿಗಿರಬೇಕು : ಸುಬ್ರಹ್ಮಣ್ಯ ನಟ್ಟೋಜ

ಪುತ್ತೂರು: ಶಿಕ್ಷಣ ಕೇವಲ ಪಠ್ಯ ಸಂಗತಿಗಳನ್ನು ತಿಳಿಸಿದರೆ ಸಾಲದು. ಭಾರತೀಯತೆ, ದೇಸೀಯ ಕಲೆಗಳನ್ನೂ ಮಕ್ಕಳಿಗೆ ಅರ್ಥ ಮಾಡಿಸಿಕೊಡಬೇಕು. ಆ ನೆಲೆಯಲ್ಲಿ ಯೋಚಿಸುವಾಗ ನಾನಾ ಬಗೆಯ ಸ್ಪರ್ಧೆಗಳ ಅನಿವಾರ್ಯತೆ ಇದೆ. ಮನರಂಜನೆಯ ಮೂಲಕ ನಮ್ಮತನವೆಂಬುದು ವಿದ್ಯಾರ್ಥಿಗಳಲ್ಲಿ ಹಂಚಿಕೆಯಾಗುವುದಕ್ಕೆ ಸ್ಪರ್ಧೆಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಹ್ಮಣ್ಯ ನಟ್ಟೋಜ ಹೇಳಿದರು.

ಅವರು ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಬಪ್ಪಳಿಗೆಯಲ್ಲಿನ ಅಂಬಿಕಾ ಮಹಾವಿದ್ಯಾಲಯದಲ್ಲಿ ದ.ಕ. ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ಹಾಗೂ ಅಂಬಿಕಾ ಪದವಿಪೂರ್ವ ವಿದ್ಯಾಲಯಗಳ ಸಹಯೋಗದಲ್ಲಿ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಬುಧವಾರ ಮಾತನಾಡಿದರು.


ಭಾರತೀಯ ವಿಚಾರಗಳನ್ನು ಯುವಸಮುದಾಯಕ್ಕೆ ತಲುಪಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕಿವೆ. ಸಾಂಸ್ಕೃತಿಕ ಸ್ಪರ್ಧೆಗಳು ಭಾರತದ ನಾನಾ ಬಗೆಯ ಸಂಸ್ಕೃತಿಗಳನ್ನು ಪರಿಚಯಿಸುವ ನೆಲೆಯಲ್ಲಿ ಮತ್ತಷ್ಟು ವಿಸ್ತಾರವನ್ನು ಕಾಣಬೇಕಿವೆ ಎಂದರು. ಅಂಬಿಕಾ ಮಹಾವಿದ್ಯಾಲಯದ ಪ್ರಾಚಾರ್ಯ ರಾಕೇಶ್ ಕುಮಾರ್ ಕಮ್ಮಜೆ ಶುಭಾಶಂಸನೆಗೈದರು.


ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಸದಸ್ಯ ಸುರೇಶ ಶೆಟ್ಟಿ ಸ್ಪರ್ಧಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ನಟ್ಟೋಜ, ಆಡಳಿತಾಧಿಕಾರಿ ಗಣೇಶ್ ಪ್ರಸಾದ್ ಎ. ಉಪಸ್ಥಿತರಿದ್ದರು.

ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ ಸ್ವಾಗತಿಸಿ, ಬಪ್ಪಳಿಗೆ ಅಂಬಿಕಾ ವಸತಿಯುತ ಪದವಿಪೂರ್ವ ವಿದ್ಯಾಲಯದ ಪ್ರಾಚಾರ್ಯೆ ಸುಚಿತ್ರಾ ಪ್ರಭು ವಂದಿಸಿದರು. ಕನ್ನಡ ಉಪನ್ಯಾಸಕ ಸತೀಶ್ ಇರ್ದೆ ಕಾರ್ಯಕ್ರಮ ನಿರ್ವಹಿಸಿದರು.

ಸಮಾರೋಪ ಸಮಾರಂಭ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪದವಿಪೂರ್ವ ಶಿಕ್ಷಣದ ಉಪನಿದೇಶಕ ಜಯಣ್ಣ ಸಿ.ಡಿ. ಮುಖ್ಯ ಅತಿಥಿಯಾಗಿ ಭಾಗವಹಿಸಿ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಅನಾವರಣಗೊಳಿಸುವ ಕಾರ್ಯವನ್ನು ಶಿಕ್ಷಣ ಇಲಾಖೆ ಅನ್ಯಾನ್ಯ ಶಿಕ್ಷಣ ಸಂಸ್ಥೆಗಳ ಸಹಯೋಗದೊಂದಿಗೆ ನೆರವೇರಿಸುತ್ತಿದೆ. ವಿದ್ಯಾರ್ಥಿಗಳು ತಮಗೆ ದೊರಕುವ ವೇದಿಕೆಗಳನ್ನು ಸದ್ವಿನಿಯೋಗ ಮಾಡಿಕೊಂಡು ಮುನ್ನಡೆಯಬೇಕು ಎಂದರು.

ಸೋಲು ಗೆಲುವೆಂಬುದು ಸ್ಪರ್ಧೆಗಳ ಕೇವಲ ಒಂದು ಭಾಗ. ಆದರೆ ಅದರಾಚೆಗೆ ದೊರಕುವ ಅನುಭವಗಳು ನಮ್ಮ ಬದುಕಿನುದ್ದಕ್ಕೂ ಸಹಕಾರಿಯೆನಿಸುತ್ತವೆ. ಪ್ರತಿಯೊಂದು ಸಂಸ್ಥೆಗಳಿಗೆ ಭೇಟಿ ಕೊಟ್ಟಾಗಲೂ ಹೊಸ ಹೊಸ ಸಂಗತಿಗಳನ್ನು ಕಲಿಯುವ ಅವಕಾಶ ವಿದ್ಯಾರ್ಥಿಗಳಿಗೆ ಪ್ರಾಪ್ತವಾಗುತ್ತದೆ. ಅಂತಹ ಕಲಿಕೆಗಳಿಗೆ ನಮ್ಮನ್ನು ನಾವು ತೆರೆದಿಟ್ಟುಕೊಳ್ಳಬೇಕು ಎಂದರು ಅಭಿಪ್ರಾಯಪಟ್ಟರು.

ಪ್ರಥಮ ಹಾಗೂ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪ್ರತ್ಯೇಕವಾಗಿ ಹನ್ನೊಂದು ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅಂಬಿಕಾ ಮಹಾವಿದ್ಯಾಲಯದ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಚಂದ್ರಕಾಂತ ಗೋರೆ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here