@ ಸಿಶೇ ಕಜೆಮಾರ್
ಪುತ್ತೂರು: ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ನೀವೊಮ್ಮೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಮಾಡಿದರೆ ರಸ್ತೆಯುದ್ದಕ್ಕೂ ಬದಿಯಲ್ಲೆಲ್ಲ ಹೊಂಡ, ಚರಂಡಿ ನಿರ್ಮಾಣವಾಗಿರುವುದನ್ನು ಕಾಣಬಹುದಾಗಿದೆ. ಮಳೆಗಾಲದಲ್ಲಿ ಮಳೆ ನೀರು ರಸ್ತೆ ಬದಿಯಲ್ಲೇ ಹರಿದು ಹೋಗಿರುವ ಕಾರಣ ಇಂತಹ ಹೊಂಡ, ಚರಂಡಿ ನಿರ್ಮಾಣವಾಗಿವೆ. ಕೆಲವೊಂದು ಕಡೆಗಳಲ್ಲಿ ರಸ್ತೆಯನ್ನೇ ನುಂಗುವ ರೀತಿಯಲ್ಲಿ ಹೊಂಡಗಳು ಇರುವುದರಿಂದ ಇದು ದ್ವಿಚಕ್ರ ವಾಹನ ಸವಾರರಿಗೆ, ಪಾದಚಾರಿಗಳಿಗೆ ಕಂಟಕವಾಗಿದೆ.
ರಸ್ತೆ ಬದಿಯುದ್ದಕ್ಕೂ ಹೊಂಡ ನಿರ್ಮಾಣ
ರಾಷ್ಟ್ರೀಯ ಹೆದ್ದಾರಿಯ ಬದಿಯುದ್ದಕ್ಕೂ ಅಪಾಯಕಾರಿ ಹೊಂಡಗಳು ನಿರ್ಮಾಣಗೊಂಡಿದೆ. ಮಳೆಗಾಲದಲ್ಲಿ ಮಳೆ ನೀರು ರಸ್ತೆ ಬದಿಯಲ್ಲೇ ಹರಿದು ಹೋಗಿ ಇಂತಹ ಹೊಂಡಗಳು ಉಂಟಾಗಿದ್ದು ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೇ ಇರುವುದೇ ಇದಕ್ಕೆ ಕಾರಣವಾಗಿದೆ.
ಅಪಾಯಕಾರಿ ಹೊಂಡಗಳು
ರಸ್ತೆ ಬದಿಯಲ್ಲಿ ಉಂಟಾಗಿರುವ ಇಂತಹ ಹೊಂಡಗಳು ತುಂಬಾ ಅಪಾಯಕಾರಿಯಾಗಿದ್ದು ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಕಂಟಕವಾಗಿವೆ. ದ್ವಿಚಕ್ರ ವಾಹನ ಸವಾರರು ವಾಹನಗಳಿಗೆ ಸೈಡ್ ಕೊಡುವಾಗ ಸ್ವಲ್ವ ಎಚ್ಚರ ತಪ್ಪಿದರೂ ಚರಂಡಿಗಳಿಗೆ ಬೀಳುವ ಅಪಾಯವಿದೆ. ಇದಲ್ಲದೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುವವರಿಗೆ ಕಂಟಕವಾಗಿದೆ.
ಪಾದಚಾರಿಗಳಿಗೆ ಅಪಾಯ…!?
ಕೆಲವೊಂದು ಕಡೆಗಳಲ್ಲಿ ರಸ್ತೆಯ ಬದಿಯಲ್ಲೇ ಮೀಟರ್‌ಗಟ್ಟಲೆ ಚರಂಡಿ ನಿರ್ಮಾಣವಾಗಿರುವುದರಿಂದ ರಸ್ತೆ ಬದಿಯಲ್ಲೇ ನಡೆದುಕೊಂಡು ಹೋಗುವುದೇ ಸಾಹಸದ ಕೆಲಸವಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಇದು ಅತ್ಯಂತ ಅಪಾಯಕಾರಿಯಾಗಿದ್ದು ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಘನ ವಾಹನಗಳು ಬಂದರೆ ರಸ್ತೆ ಬದಿಗೆ ಹೋಗುವ ಭರದಲ್ಲಿ ಚರಂಡಿಗೆ ಬೀಳುವ ಅಪಾಯವಿದೆ.
ಚರಂಡಿ ವ್ಯವಸ್ಥೆ ಇದ್ದರೂ ಪ್ರಯೋಜನವಿಲ್ಲ…!?
ಹೆದ್ದಾರಿಯುದ್ದಕ್ಕೂ ಮಳೆ ನೀರು ಹರಿದು ಹೋಗಲು ಕಾಂಕ್ರೀಟ್‌ನಿಂದ ನಿರ್ಮಿತ ಚರಂಡಿ ವ್ಯವಸ್ಥೆ ಇದೆ. ಆದರೆ ಇದು ಪ್ರಯೋಜನಕ್ಕಿಲ್ಲದಂತಾಗಿದೆ. ಕೆಲವೊಂದು ಕಡೆಗಳಲ್ಲಿ ಈ ಚರಂಡಿಯಲ್ಲಿ ಮಳೆ ನೀರು ಹರಿದು ಹೋಗುವುದೇ ಇಲ್ಲದಾಗಿದೆ. ಬದಲಾಗಿ ರಸ್ತೆಯ ಬದಿಯಲ್ಲೇ ಮಳೆ ನೀರು ಹರಿದು ಹೋಗಿ ಕೃತಕ ಚರಂಡಿ ನಿರ್ಮಾಣವಾಗಿದೆ ಎನ್ನುತ್ತಾರೆ ಗ್ರಾಮಸ್ಥರು.
ಸೈಡ್ ಕೊಡುವುದೇ ಅಪಾಯ
ರಸ್ತೆಯ ಬದಿಗಳಲ್ಲೇ ಅಪಾಯಕಾರಿ ಚರಂಡಿ ನಿರ್ಮಾಣಗೊಂಡಿರುವುದರಿಂದ ವಾಹನಗಳಿಗೆ ಸೈಡ್ ಕೊಡುವುದೇ ಅಪಾಯಕಾರಿಯಾಗಿದೆ. ವಾಹನಗಳನ್ನು ರಸ್ತೆಯಿಂದ ಇಳಿಸಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ಕೆಲವೊಂದು ಕಡೆಗಳಲ್ಲಿದೆ. ಅದರಲ್ಲೂ ದ್ವಿಚಕ್ರ ವಾಹನ ಸವಾರರಿಗೆ ಇದು ಅತ್ಯಂತ ಅಪಾಯಕಾರಿಯಾಗಿದ್ದು ಅಪ್ಪಿತಪ್ಪಿ ಎಲ್ಲಿಯಾದರೂ ವಾಹನ ರಸ್ತೆ ಬದಿಯ ಗುಂಡಿಗೆ ಇಳಿದರೆ ಅಪಘಾತ ಸಂಭವಿಸುವ ಸಾಧ್ಯತೆ ಹೆಚ್ಚಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ರಸ್ತೆ ಬದಿಗಳಿಗೆ ಮಣ್ಣು ಹಾಕಿಸುವ ಕೆಲಸ ಮಾಡಬೇಕಾಗಿದೆ ಎಂಬುದು ಸಾರ್ವಜನಿಕರ ಮನವಿಯಾಗಿದೆ.
ಕೃತಕ ಚರಂಡಿ, ಹೊಂಡ ಮುಚ್ಚುವ ಕೆಲಸ ಆಗಬೇಕಿದೆ
ಈಗಾಗಲೇ ಮಳೆ ನೀರಿನಿಂದ ರಸ್ತೆ ಬದಿಯುದ್ದಕ್ಕೂ ಅಲ್ಲಲ್ಲಿ ನಿರ್ಮಾಣಗೊಂಡ ಕೃತಕ ಚರಂಡಿ, ಗುಂಡಿಗಳನ್ನು ಆದಷ್ಟು ಶೀಘ್ರವಾಗಿ ಮುಚ್ಚಿಸುವ ಕೆಲಸ ಆಗಬೇಕಾಗಿದೆ. ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಗಮನ ಹರಿಸಬೇಕಾಗಿದೆ. ಜೀವ ಹಾನಿ ಸಂಭವಿಸುವ ಮುನ್ನ ಹೆದ್ದಾರಿ ಬದಿಯ ಚರಂಡಿ, ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚಿಸುವ ಕೆಲಸವನ್ನು ಮಾಡಬೇಕು ಎನ್ನುವುದು ಗ್ರಾಮಸ್ಥರ ಆಗ್ರಹವಾಗಿದೆ.
“ ಗ್ರಾಮ ವ್ಯಾಪ್ತಿಗೆ ಬರುವ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲೂ ಕೂಡ ಮಳೆ ನೀರಿನಿಂದ ಉಂಟಾದ ಕೃತಕ ಚರಂಡಿಗಳು ಇರುವುದು ಗಮನಕ್ಕೆ ಬಂದಿದೆ. ಇದು ಪಾದಚಾರಿಗಳಿಗೆ, ದ್ವಿಚಕ್ರ ವಾಹನ ಸವಾರರಿಗೆ ಅಪಾಯಕಾರಿಯಾಗಿದೆ. ಇಂತಹ ಗುಂಡಿಗಳನ್ನು ಮುಚ್ಚಿಸುವ ಬಗ್ಗೆ ಹೆದ್ದಾರಿ ಪ್ರಾಧಿಕಾರಕ್ಕೆ ಪಂಚಾಯತ್‌ನಿಂದ ಮನವಿ ಮಾಡಿಕೊಳ್ಳಲಾಗುವುದು.”
ತ್ರಿವೇಣಿ ಪಲ್ಲತ್ತಾರು, ಅಧ್ಯಕ್ಷರು ಒಳಮೊಗ್ರು ಗ್ರಾಮ ಪಂಚಾಯತ್