*ದರ್ಬೆಯಿಂದ ಭಜನಾ ಸಂಕೀರ್ತನಾ ಮೆರವಣಿಗೆ
*ನಟರಾಜ ವೇದಿಕೆಯಲ್ಲಿ ಸಮಾವೇಶ
*ಭಜಕರ ಸಹಿ ಸಂಗ್ರಹ, ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ
ಪುತ್ತೂರು:ಭಜನಾ ಸೇವೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರ ಬಗ್ಗೆ ಅವಹೇಳನ ಮಾಡಿ, ಸಮಾಜದ ಸ್ವಾಸ್ಥ್ಯವನು ಹಾಳು ಕೆಡವುತ್ತಿರುವುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ, ಸರಕಾರವನ್ನು ಒತ್ತಾಯಿಸುವ ನಿಟ್ಟಿನಲ್ಲಿ ಭಜನಾ ಪರಿಷತ್ ಪುತ್ತೂರು, ವಿವಿಧ ಹಿಂದೂ ಪರ ಸಂಘಟನೆಗಳ ಹಾಗೂ ಭಜಕರ ನೇತೃತ್ವದಲ್ಲಿ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ನಟರಾಜ ವೇದಿಕೆಯಲ್ಲಿ ನ.24ರಂದು ಭಜಕರ ಬೃಹತ್ ಸಮಾವೇಶ ನಡೆಯಲಿದೆ ಎಂದು ಅಧ್ಯಕ್ಷ ಲೋಕೇಶ್ ಬೆತ್ತೋಡಿ ಹೇಳಿದರು.
ನ.21ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾವೇಶದ ಅಂಗವಾಗಿ ಪ್ರಾರಂಭದಲ್ಲಿ ಬೆಳಗ್ಗೆ 8 ರಿಂದ ಪುತ್ತೂರು ದರ್ಬೆ ವೃತ್ತದಿಂದ ಭಜಕರ ಭಜನಾ ಸಂಕೀರ್ತನಾ ಮೆರವಣಿಗೆ ಆರಂಭಗೊಂಡು, ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಬೆಳಿಗ್ಗೆ 10.30 ಕ್ಕೆ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದ ಬಳಿಕ 11 ಗಂಟೆಗೆ ನಟರಾಜ ವೇದಿಕೆಯಲ್ಲಿ ಭಜಕರ ಸಮಾವೇಶ ನಡೆಯಲಿದೆ. ಸಮಾವೇಶದಲ್ಲಿ ಶ್ರೀ ಧಾಮ ಮಾಣಿಲದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಉಜಿರೆ ಕಾಲೇಜಿನ ಸಹ ಪ್ರಾಧ್ಯಾಪಕರಾದ ಹರಿಣಿ ಪುತ್ತೂರಾಯ ಸಮಾವೇಶವನ್ನು ಉದ್ದೇಶಿಸಿ, ಮಾತಾನಾಡಲಿದ್ದಾರೆ ಎಂದರು.
ಸಮಾವೇಶದಲ್ಲಿ ಪಾಲ್ಗೊಂಡ ಭಜಕರ ಸಹಿ ಸಂಗ್ರಹಿಸಿ, ಭಜನಾ ಸೇವೆ ಮತ್ತು ಭಜನಾ ಸೇವೆಯಲ್ಲಿ ಪಾಲ್ಗೊಳ್ಳುವ ಮಹಿಳೆಯರ ಬಗ್ಗೆ ಅವಹೇಳನ ಮಾಡಿ, ಸಮಾಜದ ಸ್ವಾಸ್ಥ್ಯವನ್ನು ಹಾಳು ಕೆಡವುತ್ತಿರುವವರ ಬಗ್ಗೆ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪುತ್ತೂರು ತಹಶೀಲ್ದಾರರ ಮೂಲಕ ರಾಜ್ಯದ ರಾಜ್ಯಪಾಲರಿಗೆ ಮನವಿಯನ್ನು, ನ.25ರಂದು ಸಲ್ಲಿಸಲಾಗುವುದು. ಭಜಕರ ಸಮಾವೇಶದಲ್ಲಿ ತಾಲೂಕಿನ ಸುಮಾರು 50 ಭಜನಾ ಮಂಡಳಿಗಳ ಸುಮಾರು 1000 ಜನರು ಪಾಲ್ಗೊಳ್ಳಲಿದ್ದಾರೆ ಎಂದರು.
ಭಜನಾ ಪರಿಷತ್ನ ಕಾರ್ಯದರ್ಶಿ ಡಾ|ಗೋಪಾಲಕೃಷ್ಣ ಎಂ.ಎ, ಉಪಾಧ್ಯಕ್ಷ ದಿನೇಶ್ ಸಾಲಿಯಾನ್, ಕೋಶಾಧಿಕಾರಿ ಸುಧಾಕರ ಕುಲಾಲ್, ಮಾಜಿ ಅಧ್ಯಕ್ಷ ಸುಬ್ಬಯ್ಯ ರೈ, ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.