ಪುತ್ತೂರು: ಶ್ರೀಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿ ಇದರ 8ನೇ ವರ್ಷದ ತಿರುಗಾಟವು ನ.20ರಂದು ಹನುಮಗಿರಿ ಕ್ಷೇತ್ರದಲ್ಲಿ ಪ್ರಥಮ ಸೇವೆಯಾಟ ನಡೆಯುವುದರೊಂದಿಗೆ ವಿದ್ಯುಕ್ತವಾಗಿ ಆರಂಭಗೊಂಡಿತು.
ಸಂಜೆ ಹನುಮಗಿರಿ ಪಂಚಮುಖಿ ಆಂಜನೇಯ ದೇವರ ಎದುರು ಪ್ರಾರ್ಥನೆ, ಪೂಜೆ ನಡೆಯಿತು. ಹಿರಿಯ ಯಕ್ಷಗಾನ ಕಲಾವಿದರಾದ ಗೋವಿಂದ ಭಟ್‌ರವರು ಗೆಜ್ಜೆ ಹಸ್ತಾಂತರಿಸಿದ ಬಳಿಕ ಶ್ರೀಕೋದಂಡರಾಮ ದೇವರ ಸನ್ನಿಧಿಯಲ್ಲಿ ಗೆಜ್ಜೆಸೇವೆ ನಡೆಯಿತು. ನಂತರ ಹನುಮಗಿರಿ ಗಜಾನನ ವಿದ್ಯಾಸಂಸ್ಥೆಯ ಆವರಣದಲ್ಲಿ ಪ್ರಥಮ ಸೇವೆಯಾಟ ನಡೆಯಿತು. ಸೇವೆಯಾಟದ ಮೊದಲಿಗೆ ಚೌಕಿ ಪೂಜೆ ನಡೆದು ಈ ವರ್ಷದ ತಿರುಗಾಟದ ಉದ್ಘಾಟನೆ ನಡೆಯಿತು. ವೇ.ಮೂ.ಪರಕ್ಕಜೆ ಗಣಪತಿ ಭಟ್ ದೀಪ ಪ್ರಜ್ವಲಿಸುವ ಮೂಲಕ ತಿರುಗಾಟಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿ ಶುಭಹಾರೈಸಿದರು. ಯಕ್ಷಗಾನಕ್ಕೆ ಪ್ರೋತ್ಸಾಹ ನೀಡುತ್ತಿರುವ ಗಣ್ಯರನ್ನು ಶಾಲು ಹೊದಿಸಿ ಗೌರವಿಸಲಾಯಿತು.
ಹನುಮಗಿರಿ ಕ್ಷೇತ್ರದ ಆಡಳಿತ ಧರ್ಮದರ್ಶಿ ನನ್ಯ ಅಚ್ಯುತ ಮೂಡೆತ್ತಾಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಗಾನ ತಾಳಮದ್ದಲೆ ಕಲಾವಿದ ಹಿರಣ್ಯ ವೆಂಕಟೇಶ್ವರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಮೆಳದ ಪ್ರಬಂಧಕ ಹರೀಶ್ ಬೊಳಂತಿಮೊಗರು ಗೌರವಾರ್ಪಣೆ ಕಾರ್ಯಕ್ರಮ ನಿರ್ವಹಿಸಿದರು. ಮೇಳದ ಯಜಮಾನ ಹಾಗೂ ಯಕ್ಷಗಾನ ಕಲಾಪೋಷಕ ಟಿ.ಶ್ಯಾಮ ಭಟ್, ಮ್ಯಾನೇಜರ್ ದಿವಾಕರ ಕಾರಂತ್, ನಾಗರಾಜ್ ನಡುವಡ್ಕ ಹಾಗೂ ಹಲವು ಗಣ್ಯರು ಉಪಸ್ಥಿತರಿದ್ದರು. ಉದ್ಘಾಟನೆ ಬಳಿಕ ಅಶ್ವಮೇಧ ಯಕ್ಷಗಾನ ನಡೆಯಿತು.
ಈ ವರ್ಷದ ನೂತನ ಪ್ರಸಂಗ “ಸಾಕೇತ ಸಾಮ್ರಾಜ್ಞಿ”
ಮೇಳದ ಈ ವರ್ಷದ ತಿರುಗಾಟದಲ್ಲಿ ನೂತನ ಪ್ರಸಂಗವಾಗಿ ವಾಸುದೇವ ರಂಗಾ ಭಟ್ ಕಥಾ ಸಂಯೋಜನೆಯಲ್ಲಿ ಪ್ರಸಾದ್ ಮೊಗೆಬೆಟ್ಟು ಪದ್ಯ ರಚನೆಯ “ಸಾಕೇತ ಸಾಮ್ರಾಜ್ಞೆ” ರಂಗದಲ್ಲಿ ವೈಭವೀಕರಿಸಲಿದೆ. ಮೇಳದ ಪ್ರದರ್ಶನಗಳನ್ನು ಅಪೇಕ್ಷಿಸುವವರು ಮೇಳದ ಪ್ರಬಂಧಕ ಹರೀಶ್ ಬೊಳಂತಿಮೊಗರು 9480574353, 9480643157ರವರನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.