ಶ್ರೀ ಮಲರಾಯ, ಬಂಟ ಮಹಿಷಂತಾಯ, ಪರಿವಾರ ದೈವಗಳ ನೇಮೋತ್ಸವ, ಅನ್ನಸಂತರ್ಪಣೆ
ಪುತ್ತೂರು: ತುಳುನಾಡಿನ ಅತ್ಯಂತ ಕಾರಣಿಕತೆಯ ದೈವಸ್ಥಾನಗಳಲ್ಲಿ ಒಂದಾಗಿರುವ ಆರ್ಯಾಪು ಗ್ರಾಮದ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಶ್ರೀ ಮಲರಾಯ, ಮಲರಾಯ ಬಂಟ ಮಹಿಷಂತಾಯ ಹಾಗೂ ಪರಿವಾರ ದೈವಗಳ 18 ನೇ ವರ್ಷದ ನೇಮೋತ್ಸವವು ನ.19 ಮತ್ತು 20 ರಂದು ವಿಜೃಂಭಣೆಯಿಂದ ಜರಗಿತು.
ಸುಮಾರು 22 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕೆಲಸಗಳೊಂದಿಗೆ ಸೆ.12 ರಂದು ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಬಹಳ ಅದ್ದೂರಿಯಿಂದ ನಡೆದು ಅಷ್ಠದಶ ನೇಮೋತ್ಸವವು ಕೂಡ ಬಹಳ ವಿಜೃಂಭಣೆಯಿಂದ ಜರಗಿತು. ವಿಶೇಷವಾಗಿ ಈ ವರ್ಷ ದೈವಸ್ಥಾನದ ಕಾರಣಿಕ ಶಕ್ತಿಗಳಾದ ಶ್ರೀ ಮಲರಾಯ, ಮಲರಾಯ ಬಂಟ ಮಹಿಷಂತಾಯ ಹಾಗೂ ಪರಿವಾರ ದೈವಗಳಿಗೂ ನೇಮೋತ್ಸವ ನಡೆದಿದೆ.
ಎರಡು ದಿನಗಳ ಕಾಲ ನಡೆದ ನೇಮೋತ್ಸವದಲ್ಲಿ ನೂರಾರು ಮಂದಿ ಭಕ್ತರಿಗೆ ಅನ್ನಸಂತರ್ಪಣೆಯೂ ನಡೆದಿದೆ. ಶ್ರೀ ದೈವಸ್ಥಾನದ ಆಡಳಿತ ಮುಖ್ಯಸ್ಥರಾದ ಕೆ.ಸಂಜೀವ ಪೂಜಾರಿ ಕೂರೇಲುರವರ ನೇತೃತ್ವದಲ್ಲಿ ಕೂರೇಲು ತರವಾಡು ಕುಟುಂಬದ ಸರ್ವರ ಸಹಕಾರದೊಂದಿಗೆ ಊರಪರವೂರ ಭಕ್ತಾಧಿಗಳ ಸೇರುವಿಕೆಯೊಂದಿಗೆ ನೇಮೋತ್ಸವ ನಡೆದಿದೆ.
ಶ್ರೀ ದೈವಗಳ ನೇಮೋತ್ಸವ ಸಂಭ್ರಮ
ನ.19 ರಂದು ಸಂಜೆ ದೈವಗಳ ಭಂಡಾರ ಇಳಿದು ರಾತ್ರಿ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು ಬಳಿಕ ಕಳಲ್ತಾ ಗುಳಿಗ ನೇಮೋತ್ಸವ (ಕುಟುಂಬದಲ್ಲಿ ಅಗಲಿದ ಹಿರಿಯರಿಗೆ ಪ್ರಾರ್ಥನೆ-ಬಡಿಸುವುದು) ನಡೆದು ಬಳಿಕ ಶ್ರೀ ಮಲರಾಯ ಮತ್ತು ಶ್ರೀ ಮಲರಾಯ ಬಂಟ ಮಹಿಶಾಂತಾಯ ದೈವಗಳ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ನ.20 ರಂದು ಬೆಳಿಗ್ಗೆ ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಸಂಜೆ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ಮತ್ತು ಕೊರತಿ ದೈವಗಳ ನೇಮೋತ್ಸವ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳಿಗೆ ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ, ಹರ್ಷಿತ್ ಕುಮಾರ್ ಕೂರೇಲು ಉಪಸ್ಥಿತರಿದ್ದರು.
ಇಷ್ಟಾರ್ಥ ಸಿದ್ಧಿದಾಯಕ ಶ್ರೀ ದೈವಗಳು
ಕೂರೇಲು ದೈವಸ್ಥಾನದಲ್ಲಿ ನೆಲೆಯಾಗಿರುವ ದೈವಗಳು ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಕಾರಣಿಕ ಶಕ್ತಿಗಳಾಗಿವೆ. ಇಲ್ಲಿ ಬಂದು ಭಕ್ತಿಯಿಂದ ಕೈಮುಗಿದು ತಮ್ಮ ಹರಕೆ, ಬಯಕೆಗಳನ್ನು ಹೇಳಿಕೊಂಡರೆ ಅದು ಪ್ರಾಪ್ತಿಯಾಗುತ್ತದೆ. ಇದಕ್ಕೆ ಬಹಳಷ್ಟು ನಿದರ್ಶನಗಳನ್ನು ಕಾಣಬಹುದಾಗಿದ್ದು ಪ್ರತಿ ಸಂಕ್ರಮಣ ದಿವಸ ಇಲ್ಲಿಗೆ ಬರುವ ಭಕ್ತರ ಸಂಕ್ರಮಣ ಸೇವೆಗಳೇ ಸಾಕ್ಷಿಗಳಾಗಿವೆ.ನೆಲ,ಜಲ,ಅಲಫಲ ಸೇರಿದಂತೆ ಭಕ್ತರ ಇಷ್ಟಾರ್ಥ ಸಿದ್ದಿದಾಯಕನಾಗಿ ಶ್ರೀ ಮಲರಾಯ ಇಲ್ಲಿ ನೆಲೆಸಿದ್ದಾನೆ.
ಕೂರೇಲು ಧರ್ಮದೈವ ಮಲರಾಯ ಭಕ್ತಿ ಸುಗಿಪು ಬಿಡುಗಡೆ
ದೈವಸ್ಥಾನದ ಧರ್ಮದರ್ಶಿಗಳಾದ ಕೆ.ಸಂಜೀವ ಪೂಜಾರಿ ಕೂರೇಲುರವರ ಶುಭಾಶೀರ್ವಾದದೊಂದಿಗೆ ಸಚಿನ್ ಸುವರ್ಣ ನಿರ್ಮಾಣದಲ್ಲಿ ಮೂಡಿಬಂದಿರುವ ‘ಕೂರೇಲು ಧರ್ಮದೈವ ಮಲರಾಯ’ ಎನ್ನುವ ತುಳು ಭಕ್ತಿ ಸುಗಿಪು ನ.19 ರಂದು ರಾತ್ರಿ ಬಿಡುಗಡೆಗೊಂಡಿತು. ಪದ್ಮರಾಜ್ ಬಿ.ಸಿ ಚಾರ್ವಾಕರವರ ಸಾಹಿತ್ಯ,ಸಂಗೀತ ನಿರ್ದೇಶನದಲ್ಲಿ ಅಭಿಜ್ಞಾ ಭಟ್ ನಾಟಿಕೇರಿಯವರ ಗಾಯನದಲ್ಲಿರುವ ಈ ಹಾಡನ್ನು ಮಿಥುನ್ರಾಜ್ ವಿದ್ಯಾಪುರರವರ ಶ್ರೀರಾಜ್ ಮ್ಯೂಸಿಕ್ ವಲ್ಡ್ನ ಶ್ರೀರಾಜ್ ಕ್ರೀಯೇಷನ್ಸ್ ಯೂಟ್ಯೂಬ್ನಲ್ಲಿ ವೀಕ್ಷಿಸಬಹುದಾಗಿದೆ.