ಪುತ್ತೂರು: ದಕ್ಷಿಣ ಕನ್ನಡ, ಉಡುಪಿ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳ ಕಾರ್ಯವ್ಯಾಪ್ತಿಯನ್ನು ಹೊಂದಿರುವ ಪುತ್ತೂರಿನ ಕುಂಬಾರರ ಗುಡಿ ಕೈಗಾರಿಕಾ ಸಹಕಾರ ಸಂಘದ 16ನೇ ಶಾಖೆಯು ಉಳ್ಳಾಲದ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಮಾಡೂರಿನಲ್ಲಿ ನ.24ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಜನಾರ್ದನ್ ಮೂಲ್ಯ ಅವರು ತಿಳಿಸಿದ್ದಾರೆ.
ಉಳ್ಳಾಲದಲ್ಲಿ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ ಅವರು ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದರ್ ನೂತನ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಶ್ರೀ ವೀರ ನಾರಾಯಣ ಸೇವಾ ಟ್ರಸ್ಟ್ನ ಅಧ್ಯಕ್ಷ ಪ್ರೇಮಾನಂದ್ ಕುಲಾಲ್ ದೀಪ ಪ್ರಜ್ವಲನೆ ಮಾಡಲಿದ್ದಾರೆ. ಕೋಟೆಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷೆ ದಿವ್ಯ ಸತೀಶ್ ಶೆಟ್ಟಿ ಭದ್ರತಾ ಕೊಠಡಿಯನ್ನು ಉದ್ಘಾಟಿಸಲಿದ್ದಾರೆ. ಹಿರಿಯ ನ್ಯಾಯವಾದಿ ಲಕ್ಷ್ಮಣ ಕುಂದರ್, ಕೊಲ್ಯ ಕುಲಾಲ ಸಂಘದ ಅಧ್ಯಕ್ಷ ಭಾಸ್ಕರ್ ಕುತ್ತಾರ್, ಮುಡಿಪು ಕುಲಾಲ ಸಂಘದ ಅಧ್ಯಕ್ಷ ಪುಂಡರೀಕಾಕ್ಷ ಯು ಮತ್ತಿತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ದಾಮೋದರ್ ಎ, ಕಾರ್ಯನಿರ್ವಹಣಾ ಪ್ರಬಂಧಕಿ ಸುಜಾತ, ಮ್ಯಾನೇಜರ್ ಸುಕನ್ಯ ಉಪಸ್ಥಿತರಿದ್ದರು.
66ವರ್ಷಗಳ ನಿರಂತರ ಸೇವೆ
1958ರಲ್ಲಿ ಗ್ರಾಮೀಣ ಕುಂಬಾರಿಕೆ ಮತ್ತು ಗುಡಿ ಕೈಗಾರಿಕೆಯ ಅಭಿವೃದ್ಧಿಗಾಗಿ ಗ್ರಾಮೀಣ ಕುಂಬಾರ ಕುಶಲ ಕರ್ಮಿಗಳನ್ನು ಸದಸ್ಯರನ್ನಾಗಿಸಿ ಪುತ್ತೂರಿನ ಅರಿಯಡ್ಕ ಮತ್ತು ಮಾಡ್ನೂರು ಗ್ರಾಮಗಳಿಗೆ ಕಾರ್ಯವ್ಯಾಪ್ತಿ ಹೊಂದಿ ಅಂದಿನ ಮದ್ರಾಸ್ ಸರಕಾರದಡಿಯಲ್ಲಿ ರಚಿತವಾದ ಸಹಕಾರ ಸಂಘ ಇಂದು ಅವಿಭಜಿತ ದಕ್ಷಿಣ ಕನ್ನಡ, ಉಡುಪಿ, ಕೊಡಗು, ಮೈಸೂರು ಜಿಲ್ಲಾ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಒಟ್ಟು 15 ಕಡೆಗಳಲ್ಲಿ ಬ್ಯಾಂಕಿಂಗ್ ಮತ್ತು ಮಾರಾಟ ಮಳಿಗೆಗಳು, ಪುತ್ತೂರು ಮತ್ತು ಬಿ.ಸಿ.ರೋಡ್ನಲ್ಲಿ ಕುಂಬಾರ ಕೈಗಾರಿಕೆಯ ಪ್ರದರ್ಶನ ಮಳಿಗೆ ಮತ್ತು ಒಂದು ಕುಂಬಾರಿಕೆಯ ಉತ್ಫಾದನ ತರಬೇತಿ ಕೇಂದ್ರದ ಮುಖಾಂತರ ತನ್ನ ಸದಸ್ಯರಿಗೆ ಸಹಾಯವನ್ನು ನೀಡುವ ರಾಜ್ಯದ ಏಕೈಕ ಸಹಕಾರ ಸಂಘವಾಗಿದೆ.
ಎಸ್. ಜನಾರ್ದನ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ