ಪುತ್ತೂರು: ನೆಹರುನಗರ ಸುದಾನ ಸಮೂಹ ಶಿಕ್ಷಣ ಸಂಸ್ಥೆಗಳಲ್ಲೊಂದಾದ ಸುದಾನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಬೀಮಲೆಯಲ್ಲಿರುವ ಪ್ರಜ್ಞಾಶ್ರಮ ಮಾನಸಿಕ ವಿಕಲಚೇತನರ ವೃತ್ತಿ ತರಬೇತಿ ಮತ್ತು ಪುನರ್ವಸತಿ ಕೇಂದ್ರಕ್ಕೆ ನ.21ರಂದು ಭೇಟಿ ನೀಡಿದರು.
ಕಾಲೇಜು ವಿದ್ಯಾರ್ಥಿಗಳು ಸಮಾಜಕ್ಕೆ ಸೇವೆ ಮಾಡುವ ಕುರಿತು ಇನ್ನಷ್ಟು ಜಾಗೃತಿ ಹಾಗೂ ಸಾಮಾಜಿಕ ಜವಾಬ್ದಾರಿಯ ಅರಿವಿಗಾಗಿ ಪ್ರಜ್ಞಾಶ್ರಮಕ್ಕೆ ಭೇಟಿ ನೀಡಲಾಗಿದ್ದು, ವಿದ್ಯಾರ್ಥಿಗಳು ಆಶ್ರಮದಲ್ಲಿದ್ದ ದೈಹಿಕವಾಗಿ ಅಸಹಾಯಕ ವಿದ್ಯಾರ್ಥಿಗಳೊಂದಿಗೆ ಸಂವಾದಿಸಿದರು.
ಆಶ್ರಮದ ರೂವಾರಿಯಾಗಿರುವ ಅಣ್ಣಪ್ಪ ಮತ್ತು ಜ್ಯೋತಿ ದಂಪತಿಗಳು ವಿದ್ಯಾರ್ಥಿಗಳನ್ನು ಬರಮಾಡಿಕೊಂಡರು. ವಿದ್ಯಾರ್ಥಿಗಳು ಆಶ್ರಮದ ವಿದ್ಯಾರ್ಥಿಗಳೊಂದಿಗೆ ತಮ್ಮ ಸಮಯವನ್ನು ಮನೋರಂಜನೆಗಳ ಮೂಲಕ ಹಂಚಿಕೊಂಡರು.
ಸುದಾನ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುಪ್ರೀತ್ ಕೆ.ಸಿ ಮಾತನಾಡಿ, ದೇವರು ಪ್ರತಿಯೋರ್ವನಿಗೆ ಸುಂದರ ಬದುಕನ್ನು ಕಲ್ಪಿಸಿರುತ್ತಾನೆ. ಆದರೆ ಕೆಲವೊಂದು ಕಾರಣಗಳಿಗಾಗಿ, ಕೆಲವೊಂದು ಸಂದರ್ಭಗಳಲ್ಲಿ ಕೆಲವರ ಬದುಕು ದುಸ್ತರವೆನಿಸಲ್ಪಡುತ್ತದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾಶ್ರಮ ಅಣ್ಣಪ್ಪ ದಂಪತಿಗಳು ಇಲ್ಲಿನ ವಿಶೇಚ ಚೇತನರನ್ನು ಅವರು ಕೂಡ ನಮ್ಮವರೇ ಎಂಬಂತೆ ಪ್ರೀತಿಯಿಂದ ಸಲಹುತ್ತಿರುವುದು ನಮಗೆ ಹೆಮ್ಮೆ ಎನಿಸುತ್ತದೆ. ನಾವೂ ಕೂಡ ಅಣ್ಣಪ್ಪ ದಂಪತಿಗಳೊಂದಿಗೆ ಕೈಜೋಡಿಸಿದಾಗ ಅವರಿಗೆ ಮತ್ತಷ್ಟು ಧೈರ್ಯವನ್ನು ತುಂಬಿದಂತಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಮುಕುಂದ ಕೃಷ್ಣ ಮತ್ತು ಧನ್ಯಶ್ರೀ ಉಪಸ್ಥಿತರಿದ್ದರು. ಕಾಲೇಜಿನ ಪರವಾಗಿ ಆಶ್ರಮಕ್ಕೆ ಅಕ್ಕಿ ಮತ್ತು ತರಕಾರಿಗಳನ್ನು ನೀಡಲಾಯಿತು.
ಭೇಟಿ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿ..
ನಮ್ಮ ಕಾಲೇಜ್ ಈವತ್ತು ಈ ಪ್ರೋಗ್ರಾಮ್ ಮಾಡಿದಕ್ಕೆ ತುಂಬಾ ಸಂತೋಷವಾಗಿದೆ. ತರಗತಿಯಲ್ಲಿನ ಪಾಠ ಮಾತ್ರವಲ್ಲದೆ ಸಾಮಾಜಿಕವಾಗಿ ಬೆರೆಯುವುದು ಮತ್ತು ಇಂತಹ ದೇವರ ಮಕ್ಕಳೊಂದಿಗೆ ಸಂವಹನ ಮಾಡುವುದು ನಮ್ಮ ವ್ಯಕ್ತಿತ್ವ ನಿರ್ಮಾಣಕ್ಕೆ ಸಹಕಾರಿಯಾಗಿದೆ ಎಂದು ಭಾವಿಸುತ್ತೇನೆ. ಒಟ್ಟಿನಲ್ಲಿ ನಮ್ಮ ಕಾಲೇಜು ಎಲ್ಲಾ ತರದಲ್ಲಿಯೂ ನಮ್ಮನ್ನು ಬೆಳೆಸುತ್ತಿರುವುದರ ಬಗ್ಗೆ ಹೆಮ್ಮೆ ಮೂಡುತಿದೆ.
ಅಲೆನ್ ಮಸ್ಕರೇನ್ಹಸ್, ವಿದ್ಯಾರ್ಥಿ
ಮಾನವೀಯತೆ, ಸಹಾನುಭೂತಿ ಹೆಚ್ಚಿಸಿದೆ..
ನಾವು ಪ್ರಜ್ಞಾ ಆಶ್ರಮ ಕೇಂದ್ರಕ್ಕೆ ಭೇಟಿ ನೀಡಿದಾಗ ಹಲವಾರು ವಿಷಯಗಳನ್ನು ಕಲಿಯುವ ಅವಕಾಶವಾಯಿತು. ನಮಗೆ ದೊರೆತಿರುವ ಬದುಕು ಎಷ್ಟು ಅಮೂಲ್ಯ ಎಂದು ಸಹ ಅರ್ಥಮಾಡಿಕೊಳ್ಳಲು ಈ ಭೇಟಿ ಸಹಾಯ ಮಾಡಿತು. ನಮ್ಮ ದೃಷ್ಟಿಕೋನವನ್ನು ವಿಸ್ತಾರಗೊಳಿಸಿ, ಮಾನವೀಯತೆ ಹಾಗೂ ಸಹಾನುಭೂತಿಯನ್ನು ಈ ಭೇಟಿ ಹೆಚ್ಚಿಸಿದೆ.
ಸ್ವಸ್ತಿ ಶೆಟ್ಟಿ, ವಿದ್ಯಾರ್ಥಿನಿ