ವಿದುಷಿ ಮಂಜುಳಾ ಸುಬ್ರಹ್ಮಣ್ಯರವರಿಗೆ ಕರಾವಳಿ ರತ್ನ ಪ್ರಶಸ್ತಿ

0

ಪುತ್ತೂರು: ಆದಿಚುಂಚನಗಿರಿ ಮಹಾಸಂಸ್ಥಾನ ಮಠ – ಮಂಗಳೂರು ಶಾಖ ಮಠದ ರಜತ ಮಹೋತ್ಸವದ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸಾಧಕರಿಗೆ ನೀಡಿ ಗೌರವಿಸುತ್ತಿರುವ ‘ಕರಾವಳಿ ರತ್ನ ಪ್ರಶಸ್ತಿ’ ಗೆ ಪುತ್ತೂರಿನ ನಾಟ್ಯರಂಗ ನೃತ್ಯ ಸಂಸ್ಥೆಯ ನಿರ್ದೇಶಕಿ ವಿದುಷಿ ಮಂಜುಳಾ ಸುಬ್ರಹ್ಮಣ್ಯ ರವರು ಭಾಜನರಾಗಿದ್ದಾರೆ.

ಸಾಂಪ್ರದಾಯಿಕ ಶಾಸ್ತ್ರೀಯ ನೃತ್ಯ ಹಾಗೂ ಆಧುನಿಕ ಸಂವೇದನೆಯ ರಂಗಭೂಮಿ ಕ್ಷೇತ್ರಗಳಲ್ಲಿ ಅನುಸಂಧಾನ ನಡೆಸಿ ಹಲವಾರು ಪ್ರತಿಷ್ಠಿತ ವೇದಿಕೆಗಳಲ್ಲಿ ವೈಯುಕ್ತಿಕ ಹಾಗೂ ತಮ್ಮ ತಂಡದೊಂದಿಗೆ ನೃತ್ಯ, ನೃತ್ಯ ರೂಪಕ, ದೃಶ್ಯ ರೂಪಕ, ನಾಟಕ ಪ್ರದರ್ಶನಗಳನ್ನು ನೀಡುತ್ತಾ ತಮ್ಮ ಸೃಜನಶೀಲತೆಯಿಂದ ರಂಗಭೂಮಿ ಹಾಗೂ ನಾಟ್ಯ ಕ್ಷೇತ್ರವನ್ನು ಬೆಸುಗೆ ಹಾಕುವ ಹತ್ತಾರು ಪ್ರಯೋಗಗಳಿಗೆ ಭಾಷ್ಯ ಬರೆದಿದ್ದಾರೆ. ಕೇರಳದ ಸಮರ ಕಲೆ ಕಳರಿ ಪಯಟ್ಟುವನ್ನು ತಿರುವನಂತಪುರದ ಗೋಪಿನಾಥ್ ಇವರಲ್ಲಿ ಕಲಿತಿರುತ್ತಾರೆ. ಇವರ ಸಂಶೋಧನಾ ಪ್ರವೃತ್ತಿಯನ್ನು ಗುರುತಿಸಿ ಕೇಂದ್ರ ಸರಕಾರದ ಸಂಸ್ಕೃತಿ ಇಲಾಖೆಯ ಸಚಿವಾಲಯವು ಜೂನಿಯರ್ ಫೆಲೋಶಿಪ್ ನೀಡಿ ಪ್ರೋತ್ಸಾಹಿಸಿದೆ.


ಇವರು ದೂರದರ್ಶನದಲ್ಲಿ ಭರತನಾಟ್ಯದ ‘ಬಿ’ ಗ್ರೇಡ್ ಕಲಾವಿದೆ ಹಾಗೂ ನಾಟಕದಲ್ಲಿ ಆಕಾಶವಾಣಿಯ ಬಿ ಗ್ರೇಡ್ ಕಲಾವಿದೆಯಾಗಿದ್ದಾರೆ. ನಟಿಯಾಗಿ, ನಿರ್ದೇಶಕಿಯಾಗಿ, ನೃತ್ಯ ಸಂಯೋಜಕರಾಗಿ, ಸಂಗೀತ ನಿರ್ದೇಶಕಿಯಾಗಿ ಸಕ್ರಿಯವಾಗಿ ತೊಡಗಿಕೊಂಡಿರುವ ಇವರು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸಂಘ ಸಂಸ್ಥೆಗಳ ಹಿರಿ – ಕಿರಿಯ ಕಲಾಸಕ್ತರಿಗೆ ತರಬೇತುಗಳನ್ನು ನೀಡುತ್ತಿದ್ದಾರೆ.

ಹವ್ಯಾಸಿ ಬರಹಗಾರ್ತಿಯಾಗಿ ಗುರುತಿಸಿಕೊಂಡಿರುವ ಇವರ ಬರಹಗಳು ಪ್ರತಿಷ್ಠಿತ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಹೆಸರಾಂತ ಪತ್ರಿಕೆ ಸುಧಾ ಇವರ ಸಾಧನೆಗಳನ್ನು ಗುರುತಿಸಿ ‘ಹೆಮ್ಮೆಯ ಕನ್ನಡತಿ’ ಪ್ರಶಸ್ತಿ ನೀಡಿ ಗೌರವಿಸಿದೆ.

LEAVE A REPLY

Please enter your comment!
Please enter your name here