ಉಪ್ಪಿನಂಗಡಿ: ಸ.ಪ.ಪೂ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆ

0

ಉಪ್ಪಿನಂಗಡಿ: ಇಲ್ಲಿನ ಸರಕಾರಿ ಬೋರ್ಡ್ ಹೈಸ್ಕೂಲ್ 1957ರಲ್ಲಿ ಸ್ಥಾಪನೆಯಾಗಿದ್ದು, ಇಂದು ಪದವಿ ಪೂರ್ವ ವಿಭಾಗವನ್ನು ಹೊಂದಿ ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿದೆ. ಶೈಕ್ಷಣಿಕ ಸಾಧನೆ, ಕ್ರೀಡೆ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರಮಟ್ಟದಲ್ಲಿ ಮಿಂಚಿದ ಪ್ರತಿಭೆಗಳನ್ನು ಈ ಸಂಸ್ಥೆ ನೀಡಿದೆ. ಶಾಲೆಯ ಸ್ಥಾಪನೆಗೆ ಅಂದು ಭೂ ದಾನ ಮಾಡಿದ ಬೆನಗಲ್ ಸಹೋದರರು, ನೇತೃತ್ವ ವಹಿಸಿದ ವೇಣುಗೋಪಾಲ್ ನಾಯಕ್, ವಿದ್ಯಾಭಿಮಾನಿಗಳ ಕೊಡುಗೆ ಮತ್ತು ಅಧ್ಯಾಪಕ ವೃಂದದ ಶ್ರಮವನ್ನು ಸದಾ ಸ್ಮರಿಸುವ ಅವಶ್ಯಕತೆ ಇದೆಯೆಂದು ಪುತ್ತೂರು ಕ್ಷೇತ್ರದ ಮಾಜಿ ಶಾಸಕರಾದ ಸಂಜೀವ ಮಠಂದೂರು ತಿಳಿಸಿದರು.


ಉಪ್ಪಿನಂಗಡಿಯ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿರಿಯ ವಿದ್ಯಾರ್ಥಿ ಸಂಘದ ರಚನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಸ್ಥೆಯ ಹಿರಿಯ ವಿದ್ಯಾರ್ಥಿಯಾಗಿ ಶಾಲಾ ಅಭಿವೃದ್ಧಿಗೆ ಬದ್ಧತೆಯಿಂದ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದರಲ್ಲದೆ, ಹಿರಿಯ ವಿದ್ಯಾರ್ಥಿ ಸಂಘವು ಸೌಹಾರ್ದತೆಯಿಂದ ಕಾರ್ಯನಿರ್ವಹಿಸಿ ರಾಜ್ಯಕ್ಕೆ ಮಾದರಿಯಾಗಿ ಕೀರ್ತಿಯನ್ನು ತರುವಂತಹ ಸಾಧನೆ ಮಾಡಲಿ ಎಂದು ಹಾರೈಸಿದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಶಾಲೆಯ ನಿವೃತ್ತ ಉಪಪ್ರಾಂಶುಪಾಲ ದಿವಾಕರ ಆಚಾರ್ಯ, ಕರ್ನಾಟಕ ಸರಕಾರದ ಶಾಲಾ ಶಿಕ್ಷಣ ಇಲಾಖೆ ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಲ್ಲಿ ಹಿರಿಯ ವಿದ್ಯಾರ್ಥಿ ಸಂಘವನ್ನು ರಚಿಸುವ ಮೂಲಕ ಸರಕಾರಿ ಶಾಲೆಗಳನ್ನು ಬಲವರ್ಧನೆಗೊಳಿಸುವ ಆಶಯವನ್ನು ಹೊಂದಿದೆ. ಹಿರಿಯ ವಿದ್ಯಾರ್ಥಿಗಳು ಸಂಸ್ಥೆಯ ಆಸ್ತಿಯಾಗಿದ್ದು, ಪ್ರತಿ ವರ್ಷದ ವಿದ್ಯಾರ್ಥಿಗಳನ್ನು ವಾಟ್ಸಪ್ ಗುಂಪುಗಳಲ್ಲಿ ಸೇರಿಸುವ, ಸದಸ್ಯತ್ವ ಅಭಿಯಾನದ ಮೂಲಕ ಸಂಸ್ಥೆಯ ಜೊತೆಗಿನ ಸಂಬಂಧವನ್ನು ಹೆಚ್ಚಿಸಬೇಕೆಂದು ತಿಳಿಸಿದರು.


ಸಭೆಯಲ್ಲಿ ಎಸ್‌ಡಿಎಂಸಿ ಅಧ್ಯಕ್ಷರಾದ ಗುಣವತಿ, ಸದಸ್ಯರಾದ ಜೆ.ಕೆ ಪೂಜಾರಿ, ಜಯಂತಿ, ಅಬ್ದುಲ್ ಮಜೀದ್, ಅಬೂಬಕ್ಕರ್ ಸಿದ್ದಿಕ್, ಅಬ್ದುಲ್ ರಶೀದ್ ಮಠ, ಖಲಂದರ್ ಶಾಫಿ, ಸಾಮಾಜಿಕ ಮುಂದಾಳು ಎನ್.ಉಮೇಶ ಶೆಣೈ ರಾಮನಗರ, ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಬ್ರ್ಯಾಗ್ಸ್, ಝಕಾರಿಯ ಕೋಡಿಪ್ಪಾಡಿ, ಚಂದ್ರಶೇಖರ ಮಡಿವಾಳ, ಅಬೂಬಕ್ಕರ್ ಸಿದ್ದೀಕ್ ಹ್ಯಾಪಿ ಟೈಮ್ಸ್, ರಘುರಾಮ, ರಾಜೇಶ್ ರಾಮನಗರ ಮೊದಲಾದ ಹಿರಿಯ ವಿದ್ಯಾರ್ಥಿಗಳು, ಶಿಕ್ಷಕರು ಉಪಸ್ಥಿತರಿದ್ದರು. ಬಳಿಕ ಸರ್ವಾನುಮತದಿಂದ ಹಿರಿಯ ವಿದ್ಯಾರ್ಥಿ ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಉಪ ಪ್ರಾಂಶುಪಾಲರಾದ ದೇವಕಿ. ಡಿ ಸ್ವಾಗತಿಸಿದರು. ಹಿರಿಯ ಶಿಕ್ಷಕಿ ಪೂರ್ಣಿಮಾ ನಾಯಕ್ ವಂದಿಸಿದರು. ಶಿಕ್ಷಕ ಲಕ್ಷ್ಮೀಶ ನಾಯ್ಕ್ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here