ಉಪ್ಪಿನಂಗಡಿ: ಚತುಷ್ಪಥ ಹೆದ್ದಾರಿಯನ್ನು ದಾಟುವ ಸಂಕಷ್ಟದಿಂದ ನಾಗರಿಕರನ್ನು ಪಾರು ಮಾಡಲು 34 ನೇ ನೆಕ್ಕಿಲಾಡಿಯ ಜಂಕ್ಷನ್ ಪ್ರದೇಶದಲ್ಲಿ ಜನರು ನಡೆದುಕೊಂಡು ಹೋಗಬಹುದಾದ ಅಂಡರ್ ಪಾಸ್ ರಚಿಸಬೇಕೆಂದು ಮಾಜಿ ಶಾಸಕ ಸಂಜೀವ ಮಠಂದೂರು ಹೆದ್ದಾರಿ ಇಲಾಖಾಧಿಕಾರಿಗಳಿಗೆ ಆಗ್ರಹಿಸಿದರು.
ನೆಕ್ಕಿಲಾಡಿಯ ಪಂಚಾಯತ್ ಕಚೇರಿ, ಅಂಚೆ ಕಚೇರಿ, ಧಾರ್ಮಿಕ ಕೇಂದ್ರಗಳಿರುವ ಪ್ರದೇಶದಲ್ಲಿ ಚತುಷ್ಪಥ ರಸ್ತೆಯನ್ನು ದಾಟಲು ನಾಗರಿಕರಿಗೆ ಸಮಸ್ಯೆಯಾಗಬಹುದೆಂದು ಅಂದಾಜಿಸಿ ಪಂಚಾಯತ್ ಆಡಳಿತದ ಮನವಿಯ ಮೇರೆಗೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಮಾಜಿ ಶಾಸಕರು, ಈಗಾಗಲೇ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಇದೇ ಸಂಧರ್ಭದಲ್ಲಿ ಜನರು ನಿರಾತಂಕವಾಗಿ ಆಡಳಿತ ಕಚೇರಿಗೆ ಭೇಟಿ ನೀಡುವಂತಾಗಲು ಪಂಚಾಯತ್ ಕಚೇರಿ ಮುಂಭಾಗದ ಜಂಕ್ಷನ್‌ನಲ್ಲಿ ನಡೆದಾಡಲು ಯೋಗ್ಯವಾದ ಅಂಡರ್ ಪಾಸ್ ರಚಿಸಲು ಸಾಧ್ಯವೇ ಎಂದು ವಿಚಾರ ವಿಮರ್ಶೆ ನಡೆಸಿದರು. ಜನರ ಅನುಕೂಲತೆಗಾಗಿ ಅಂಡರ್ ಪಾಸ್ ರಚಿಸುವಂತೆ ಕೋರಿಕೊಂಡರು.
ಅಂಡರ್ ಪಾಸ್ ಅಸಾಧ್ಯವೆಂದ ಅಧಿಕಾರಿಗಳು:
ಹೆದ್ದಾರಿ ಇಲಾಖೆ ಅನುಮೋದಿಸಿದ ಯೋಜನಾ ನಕ್ಷೆಯಂತೆ ಕಾಮಗಾರಿ ನಡೆಸಲಾಗುತ್ತಿದೆ. ಮೇಲಿಂದಲೇ ಯೋಜನೆಯ ಪರಿಷ್ಕರಣೆ ಮಾಡಿದರೆ ಅಂಡರ್ ಪಾಸ್ ನಿರ್ಮಿಸಬಹುದು. ಅದರ ಹೊರತಾಗಿ ಅಂಡರ್ ಪಾಸ್ ನಿರ್ಮಾಣ ಅಸಾಧ್ಯ. ಹೆದ್ದಾರಿ ವಿಸ್ತರಣಾ ಕಾಮಗಾರಿಯು ಕೊನೆ ಹಂತ ಪ್ರವೇಶಿಸಿದಾಗ ಹೊಸ ಹೊಸ ಬೇಡಿಕೆ ಮುಂದಿರಿಸಿದರೆ ಅದನ್ನು ಅನುಷ್ಠಾನಿಸಲು ಕಷ್ಟಸಾಧ್ಯವೆಂದು ಕೆ ಎನ್ ಆರ್ ಸಂಸ್ಥೆಯ ಎಂಜಿನಿಯರ್ ರಘುನಾಥ ರೆಡ್ಡಿ ಹಾಗೂ ಹೆದ್ದಾರಿ ಇಲಾಖೆಯ ಎಂಜಿನಿಯರ್ ವಿವೇಕಾನಂದ ಚಲಪತಿ ಸ್ಪಷ್ಟಪಡಿಸಿದರು.
ಈ ಸಂಧರ್ಭದಲ್ಲಿ 34 ನೆಕ್ಕಿಲಾಡಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್, ಸದಸ್ಯರಾದ ಪ್ರಶಾಂತ್ ಎನ್., ಗೀತಾ ವಾಸುಗೌಡ, ಬಿಜೆಪಿ ಮುಖಂಡರಾದ ಸುನೀಲ್ ಕುಮಾರ್ ದಡ್ಡು, ಸದಾನಂದ ಪೂಜಾರಿ, ವಿಜೇತ್, ಪ್ರಸಾದ್, ಪ್ರದೀಪ್ ದರ್ಬೆ, ಲಿಖಿತ್ ಉಪಸ್ಥಿತರಿದ್ದರು.