ಹೊರ ಜಿಲ್ಲೆಯ ಜೆಸಿಬಿ ಮಾಲಕರು, ಆಪರೇಟರ್‌ಗಳ ಮೇಲೆ ದಬ್ಬಾಳಿಕೆ, ಊರು ಬಿಟ್ಟು ತೆರಳುವಂತೆ ಬೆದರಿಕೆ ಆರೋಪ :ಜೆಸಿಬಿ, ಹಿಟಾಚಿಗಳ ನೊಂದ ಮಾಲಕರ, ಆಪರೇಟರ್‌ಗಳ ಸಭೆ

0

ದಬ್ಬಾಳಿಕೆ ಪುನರಾವರ್ತನೆಯಾದಲ್ಲಿ ಸುಮ್ಮನಿರಲು ಸಾಧ್ಯವಿಲ್ಲ-ಹೇಮನಾಥ ಶೆಟ್ಟಿ


ಪುತ್ತೂರು: ಪುತ್ತೂರು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಜೆಸಿಬಿ, ಹಿಟಾಚಿ, ಟಿಪ್ಪರ್‌ಗಳಲ್ಲಿ ಕೆಲಸ ಮಾಡುತ್ತಿರುವ ಹೊರ ಜಿಲ್ಲೆಯ ಮಾಲಕರು ಮತ್ತು ಆಪರೇಟರ್‌ಗಳ ಮೇಲೆ ಸ್ಥಳೀಯವಾಗಿ ಕೆಲವೊಂದು ವ್ಯಕ್ತಿಗಳು ದಬ್ಬಾಳಿಕೆ ನಡೆಸುವುದು ಹಾಗೂ ದೌರ್ಜನ್ಯ ಎಸಗಿ ಅವರನ್ನು ಜಿಲ್ಲೆಯಿಂದ ಹೊರ ನಡೆಯುವಂತೆ ಬೆದರಿಕೆ ಹಾಕುವ ಘಟನೆಗಳು ನಡೆಯುತ್ತಿದ್ದು ಇಂತಹ ಘಟನೆಗಳು ಮುಂದಿನ ದಿನಗಳಲ್ಲಿ ಪುನಾರಾವರ್ತನೆಯಾದಲ್ಲಿ ಅಂತವರ ವಿರುದ್ಧ ಗೂಂಡಾ ಕಾಯ್ದೆಯಡಿ ಬಳ್ಳಾರಿ ಜೈಲಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುವುದು ಎಂದು ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.


ಹೊರ ಜಿಲ್ಲೆಗಳಿಂದ ಆಗಮಿಸಿ ಇಲ್ಲಿ ಅನೇಕ ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಜೆಸಿಬಿ, ಹಿಟಾಚಿ ಮಾಲಕರು ಹಾಗೂ ಆಪರೇಟರ್‌ಗಳಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನ.28ರಂದು ಸಂಜೆ ನರಿಮೊಗರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅವರು ಮಾತನಾಡಿದರು.


ಹಲವಾರು ವರ್ಷಗಳಿಂದ ಇಲ್ಲಿಗೆ ಬಂದು ಜೆಸಿಬಿ ಆಪರೇಟರ್ ಆಗಿ ದುಡಿದು ಮಾಲಕರಾಗಿರುವ ಘಟ್ಟ ಪ್ರದೇಶದ ಕೆಲವೊಂದು ಮಂದಿಗೆ ಜಿಲ್ಲೆ ಬಿಟ್ಟು ಹೋಗಬೇಕು ಎಂದು ಸ್ಥಳೀಯರಿಂದ ಬೆದರಿಕೆಯನ್ನು ಹಾಕಲಾಗುತ್ತಿದೆ. ಜೆಸಿಬಿ ಆಪರೇಟರ್‌ಗಳ ಸಂಘಟನೆಯ ಹೆಸರಿನಲ್ಲಿ ಈ ದೌರ್ಜನ್ಯ ನಡೆಯುತ್ತಿರುವುದು ಖಂಡನೀಯವಾಗಿದೆ. ಸಂಘಟನೆಗಳು ಜನರ ಒಳಿತಿಗಾಗಿ ಕೆಲಸ ಮಾಡಬೇಕು ಹೊರತು ಈ ರೀತಿ ದೌರ್ಜನ್ಯ ನಡೆಸುವುದು ಸರಿಯಲ್ಲ. ಇದಕ್ಕೆ ನಾವು ಎಂದಿಗೂ ಆಸ್ಪದ ನೀಡುವುದಿಲ್ಲ. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು. ದೌರ್ಜನ್ಯದಂತಹ ನೈತಿಕ ಪೊಲೀಸ್‌ಗಿರಿ ತೋರಿಸುವ ವ್ಯಕ್ತಿಗಳ ವಿರುದ್ದ ಗೂಂಡಾ ಕಾಯ್ದೆ ದಾಖಲಿಸಬೇಕು ಎಂದು ಆಗ್ರಹಿಸಿದರು.


ಓಡಿಸುವುದು ಸಾಧನೆಯಲ್ಲ, ಷಂಡತನ:
ಜಿಲ್ಲೆಯಲ್ಲಿನ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ, ಸಿಬ್ಬಂದಿಗಳು ಹೊರ ಜಿಲ್ಲೆಗಳಿಂದಲೇ ಬಂದವರು. ಅವರನ್ನು ಜಿಲ್ಲೆಯಿಂದ ಓಡಿಸಲು ಸಾಧ್ಯವಿದೆಯೇ? ನಮ್ಮ ಜಿಲ್ಲೆಯ ಹಲವು ಮಂದಿ ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರನ್ನು ಅಲ್ಲಿಂದ ಓಡಿಸಿದರೆ ನಮ್ಮ ಗತಿ ಏನಾಗಬಹುದು ಎಂಬ ಯೋಚನೆ ಇಂತಹ ದಬ್ಬಾಳಿಕೆ ಎಸಗುವ ಮಂದಿಯಲ್ಲಿ ಮೂಡಬೇಕಾಗಿದೆ. ಸಂವಿಧಾನದಲ್ಲಿ ಇಂತಹ ಕೃತ್ಯಕ್ಕೆ ಅವಕಾಶ ಇದೆಯೇ ಎಂಬುದನ್ನು ಇಂತಹವರು ಅರಿಯಬೇಕಾಗಿದೆ. ಓಡಿಸುವುದು ಸಾಧನೆಯಲ್ಲ ಅದು ಷಂಡತನ. ಅನೈತಿಕ ಪೊಲೀಸ್ ಗಿರಿಯನ್ನು ಸಹಿಸಲು ಸಾಧ್ಯವಿಲ್ಲ. ಈ ಕುರಿತು ಈಗಾಗಲೇ ಪುತ್ತೂರು ಡಿವೈಎಸ್‌ಪಿ ಅವರಿಗೆ ದೂರು ನೀಡಲಾಗಿದೆ. ಜೊತೆಗೆ ಪುತ್ತೂರು ಶಾಸಕರ, ವಿಧಾನ ಸಭಾ ಸ್ಪೀಕರ್, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ, ಗೃಹ ಸಚಿವರ ಗಮನಕ್ಕೆ ತರಲಾಗಿದೆ. ಬೆಳಗಾವಿಯಲ್ಲಿ ನಡೆಯಲಿರುವ ವಿಧಾನಸಭಾ ಅಧಿವೇಶನದಲ್ಲಿ ಶಾಸಕ ಅಶೋಕ್ ರೈ ಅವರು ಈ ಬಗ್ಗೆ ಪ್ರಸ್ತಾಪ ಮಾಡುವಂತೆ ಕೇಳಿಕೊಳ್ಳಲಾಗುವುದು. ಜಿಲ್ಲೆಗೆ ಕಳಂಕ ತರುವ ಕೆಲಸ ಮಾಡುವವರನ್ನು ಸಹಿಸುವ ಪ್ರಶ್ನೆಯೇ ಇಲ್ಲ ಎಂದು ಕಾವು ಹೇಮನಾಥ ಶೆಟ್ಟಿ ಹೇಳಿದರು.
ನಾವು ಮುಂದಕ್ಕೆ ಪುತ್ತೂರಲ್ಲಿ ಜೆಸಿಬಿ ಮೇಳ ಮಾಡುತ್ತೇವೆ, ಅಗತ್ಯ ಬಿದ್ದರೆ ಹೋರಾಟ ಸಮಿತಿಯನ್ನೂ ಮಾಡುತ್ತೇವೆ ಎಂದು ಜೆಸಿಬಿ, ಹಿಟಾಚಿ ಮಾಲಕರಿಗೆ, ಆಪರೇಟರ್‌ಗಳಿಗೆ ಧೈರ್ಯ ನೀಡಿದ ಹೇಮನಾಥ ಶೆಟ್ಟಿಯವರು ನಿಮ್ಮನ್ನು ಇಲ್ಲಿಂದ ಓಡಿಸುವವರು ಹುಟ್ಟಿಲ್ಲ, ನೀವು ಹೆದರಬೇಡಿ ಎಂದು ಹೇಳಿದರು.


ಮತ್ತೊಬ್ಬರ ಜೀವನದಲ್ಲಿ ಆಟ ಆಡಬೇಡಿ-ಜಗದೀಶ್ ಶೆಟ್ಟಿ:
ಪುರಸಭೆಯ ಮಾಜಿ ಅಧ್ಯಕ್ಷ ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ ಮಾತನಾಡಿ, ಪುತ್ತೂರು ಮಹಾಲಿಂಗೇಶ್ವರನ ಸೊತ್ತು, ಇಲ್ಲಿ ಯಾರನ್ನೂ ಹೆದರಿಸಿ, ಬೆದರಿಸಿ ಏನೂ ಮಾಡಲು ಆಗುವುದಿಲ್ಲ, ಮಹಾಲಿಂಗೇಶ್ವರನ ಕ್ಷೇತ್ರದಲ್ಲಿ ಅಂತಹ ಆಟಗಳು ನಡೆಯುವುದಿಲ್ಲ ಎಂದರು. ನೊಂದ ಜೆಸಿಬಿ, ಹಿಟಾಚಿ ಆಪರೇಟರ್‌ಗಳು ಇಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ, ಅವರನ್ನು ಓಡಿಸುವ ಕೆಲಸವನ್ನು ಕೆಲವರು ಮಾಡುತ್ತಿರುವುದು ಸರಿಯಲ್ಲ. ಇನ್ನೊಬ್ಬರ ಬದುಕಿನಲ್ಲಿ ಕೈಹಾಕುವ ಹಕ್ಕು ಯಾರಿಗೂ ಇಲ್ಲ. ಇಂತಹಾ ಕೆಲಸವನ್ನು ಬಿಟ್ಟುಬಿಡಲಿ. ಇಲ್ಲದಿದ್ದಲ್ಲಿ ಅವರಿಗೆ ಉಳಿಗಾಲವಿಲ್ಲ ಎಂದರು.


ಬುದ್ದಿವಂತರ ಜಿಲ್ಲೆಗೆ ಅವಮಾನ-ರವಿಪ್ರಸಾದ್ ಶೆಟ್ಟಿ:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿಪ್ರಸಾದ್ ಶೆಟ್ಟಿ ಮಾತನಾಡಿ ನಮ್ಮ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಸಾಧನೆ ಮಾಡಿದ ಜಿಲ್ಲೆಯಾಗಿದ್ದು, ಇಲ್ಲಿನವರು ವಿಶ್ವದಾದ್ಯಂತ ಕೆಲಸ ಮಾಡುತ್ತಿದ್ದಾರೆ. ಇದು ನಮ್ಮ ಜಿಲ್ಲೆಗೆ ಅವಮಾನ, ಪಕ್ಕದ ಜಿಲ್ಲೆಯವರು ನಮ್ಮ ಜಿಲ್ಲೆಯಲ್ಲಿ ಕೆಲಸ ಮಾಡಬಾರದು ಎನ್ನುವವರು ಅವರ ಕುಟುಂಬಸ್ಥರು ಎಲ್ಲಿದ್ದಾರೆ ಎಂಬುವುದನ್ನು ಅರಿತುಕೊಳ್ಳಬೇಕಾಗಿದೆ. ಅನ್ಯಾಯಕ್ಕೊಳಗಾದವರಿಗೆ ನ್ಯಾಯ ಒದಗಿಸಿ ಕೊಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.


ಇಲ್ಲಿ ಎಲ್ಲರಿಗೂ ದುಡಿಯುವ, ಬದುಕುವ ಹಕ್ಕಿದೆ-ಬಾಬು ಶೆಟ್ಟಿ:
ನರಿಮೊಗರು ಪ್ರಾ.ಕೃ.ಪ.ಸಹಕಾರಿ ಸಂಘದ ನಿರ್ದೇಶಕರಾದ ಬಾಬು ಶೆಟ್ಟಿ ವೀರಮಂಗಲ ಮಾತನಾಡಿ ನಮ್ಮ ತಾಲೂಕಿನಲ್ಲಿ ಕೆಲಸ ಮಾಡುತ್ತಿರುವ ಹೊರ ಜಿಲ್ಲೆಯ ಜೆಸಿಬಿ, ಹಿಟಾಚಿಗಳ ನೊಂದ ಮಾಲಕರು ಮತ್ತು ಆಪರೇಟರ್‌ಗಳು ವಿಷಯ ತಿಳಿಸಿದಾಗ ಹೇಮನಾಥ ಶೆಟ್ಟಿಯವರ ಜೊತೆ ಮಾತನಾಡುವಂತೆ ತಿಳಿಸಿದ್ದೆ. ಅದರಂತೆ ಹೇಮನಾಥ ಶೆಟ್ಟಿಯವರಿಗೆ ಮನವಿ ನೀಡಿದಾಗ ಅವರು ತಕ್ಷಣ ಸ್ಪಂಧಿಸಿದ್ದು ಜೆಸಿಬಿ, ಹಿಟಾಚಿಗಳ ನೊಂದ ಮಾಲಕರು, ಆಪರೇಟರ್‌ಗಳಿಗೆ ನ್ಯಾಯ ದೊರಕಿಸಿಕೊಡಲು ಮುಂದೆ ಬಂದಿದ್ದಾರೆ ಎಂದು ಹೇಳಿದರು.


ಇಲ್ಲಿ ಕೆಲಸ ಮಾಡುತ್ತಿರುವ ಜೆಸಿಬಿ, ಹಿಟಾಚಿಯ ಮಾಲಕರು, ಆಪರೇಟರ್‌ಗಳು ಪಾಕಿಸ್ತಾನ ಅಥವಾ ಬಾಂಗ್ಲಾದೇಶದವರಲ್ಲ, ಎಲ್ಲರೂ ನಮ್ಮ ಭಾರತೀಯರು, ಇಲ್ಲಿ ತೆರಿಗೆ ಕಟ್ಟುವವರು, ಅವರಿಗೆ ಇಲ್ಲಿ ಬದುಕುವ, ನಿರ್ಭೀತಿಯಿಂದ ದುಡಿಯುವ ಹಕ್ಕಿದೆ, ಜೆಸಿಬಿ, ಹಿಟಾಚಿಯವರು ಘಟ್ಟದವರು ಎನ್ನುವ ಕಾರಣಕ್ಕೆ ಇಲ್ಲಿಂದ ಓಡಿಸುವುದಾದರೆ ಇತರ ಇಲಾಖೆಗಳಲ್ಲಿರುವ ಹೊರ ಜಿಲ್ಲೆಯವರನ್ನೂ ಓಡಿಸಿ ನೋಡೋಣ, ಆ ತಾಕತ್ತು ಇವರಿಗಿದೆಯಾ ಎಂದು ಬಾಬು ಶೆಟ್ಟಿ ಸವಾಲೆಸೆದರು.


ನಮ್ಮನ್ನು ಬೆದರಿಸುತ್ತಿದ್ದಾರೆ-ಕುಮಾರ್:
ಜೆಸಿಬಿ ಮಾಲಕ ಕುಮಾರ್ ಮಾತನಾಡಿ ನಾನು ಸುಮಾರು 20 ವರ್ಷಗಳಿಂದ ಇಲ್ಲಿ ಜೆಸಿಬಿ ಮೂಲಕ ಕೆಲಸ ಮಾಡುತ್ತಿದ್ದೇನೆ. ಇದೀಗ ಇಲ್ಲಿ ಕೆಲವರು ನಮಗೆ ಹಿಂಸೆ, ಬೆದರಿಕೆ ನೀಡುತ್ತಿದ್ದು ನಮ್ಮನ್ನು ವಾಪಸ್ ಊರಿಗೆ ಹೋಗಲು ಹೇಳುತ್ತಿದ್ದಾರೆ, ನಾವು ಇಲ್ಲಿ ದುಡಿಯಬಾರದು ಎನ್ನುವುದು ಯಾವ ನ್ಯಾಯ ಎಂದು ಬೇಸರ ವ್ಯಕ್ತಪಡಿಸಿದರು.


ನಮ್ಮನ್ನು ಇಲ್ಲಿಂದ ಓಡಿಸಬೇಕು ಎನ್ನುತ್ತಾರೆ..!:
ಜೆಸಿಬಿ, ಹಿಟಾಚಿಗಳ ಕೆಲಸಗಾರರಾದ ಆನಂದ್, ಕುಮಾರ್ ಹಾಗೂ ಸುಭಾಶ್ಚಂದ್ರ ಮೊದಲಾದವರು ಮಾತನಾಡಿ ನಾವು ಕೆಲಸ ಮಾಡುವ ಸೈಟ್‌ಗೆ ಬಂದು ನಮಗೆ ತೊಂದರೆ ಕೊಡ್ತಾರೆ, ಘಟ್ಟದವರನ್ನು ಓಡಿಸಬೇಕು ಎನ್ನುತ್ತಾರೆ, ನಮಗೆ ಬೆದರಿಕೆ ಹಾಕುತ್ತಾರೆ, ನಮಗೆ ರಕ್ಷಣೆ ಬೇಕು ಎಂದು ಮನವಿ ಮಾಡಿದರು.
ನಾವು ಕೆಲಸ ಮಾಡುವ ಸ್ಥಳಕ್ಕೆ ಬಂದ ಗುಂಪೊಂದು ನಮ್ಮನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ನೀವು ಘಟ್ಟದವರು ಇಲ್ಲಿ ಕೆಲಸ ಮಾಡುವುದು ಬೇಡ. ನಿಮ್ಮ ಊರಿಗೆ ಹೋಗಿ ಎಂದು ದಬಾಯಿಸಿದ್ದಾರೆ. ನಾವು ಇದೀಗ ಜೀವಭಯದಿಂದ ಬದುಕುವಂತಾಗಿದೆ. ಮೊಬೈಲ್‌ನಲ್ಲಿ ಕರೆ ಮಾಡಿ ನೀವು ಇಲ್ಲಿರಬಾರದು ಊರು ಬಿಟ್ಟು ಹೋಗಬೇಕು ಎಂದು ದಬಾಯಿಸುತ್ತಿದ್ದಾರೆ. ನಾವು ನಮ್ಮ ಪಾಡಿಗೆ ಕೆಲಸ ಮಾಡಿ ಬದುಕುತ್ತೇವೆ, ಆದರೂ ನಮ್ಮ ಮೇಲೆ ದಬ್ಬಾಳಿಕೆ ಆಗುತ್ತಿದೆ, ಬೆದರಿಕೆ ಕರೆಗಳು ಬರುತ್ತಿದೆ ಎಂದು ನೋವು ತೋಡಿಕೊಂಡರು.


ವೇದಿಕೆಯಲ್ಲಿ ಜೆಸಿಬಿ ಮಾಲಕ ಕುಮಾರ್, ಮುಂಡೂರು ಸಿ.ಎ.ಬ್ಯಾಂಕ್ ಉಪಾಧ್ಯಕ್ಷ ಯಾಕೂಬ್ ಮುಲಾರ್, ಕೊಳ್ತಿಗೆ ಗ್ರಾ.ಪಂ ಉಪಾಧ್ಯಕ್ಷ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಬಾಬು ಶೆಟ್ಟಿ ಸ್ವಾಗತಿಸಿದರು. ಹೊನ್ನಪ್ಪ ಪೂಜಾರಿ ಕೈಂದಾಡಿ ಕಾರ್ಯಕ್ರಮ ನಿರೂಪಿಸಿದರು.

ನಮಗೆ ರಕ್ಷಣೆ ಕೊಡಿ
ನಾವು ಕುಟುಂಬ ಸಮೇತ ಇಲ್ಲಿ ನೆಲೆಸಿದ್ದೇವೆ, 20 ವರ್ಷಗಳಿಂದಲೂ ಅಧಿಕ ವರ್ಷದಿಂದ ಇಲ್ಲಿದ್ದೇವೆ, ನಮಗೆ ನಮ್ಮ ರಾಜ್ಯದಲ್ಲಿ ದುಡಿಯಲು, ಬದುಕಲು ಅವಕಾಶ ಇಲ್ಲವೇ? ನಮ್ಮನ್ನು ಓಡಿಸಿದರೆ ನಾವು ಎಲ್ಲಿಗೆ ಹೋಗಬೇಕು? ನಾವು ಮಾಡಿರುವ ತಪ್ಪಾದರೂ ಏನು ಎಂದು ಜೆಸಿಬಿ ಹಾಗೂ ಹಿಟಾಚಿಯ ಮಾಲಕರು ಮತ್ತು ಆಪರೇಟರ್‌ಗಳು ಪ್ರಶ್ನೆ ಮಾಡಿದರು. ನಮ್ಮನ್ನು ಓಡಿಸಿದರೆ ಇಲ್ಲಿನವರೂ ಘಟ್ಟದಿಂದ ತರಕಾರಿ ತರಲು ಘಟ್ಟಕ್ಕೆ ಬರ‍್ತಾರೆ, ಅಲ್ಲಿ ನಾವು ಇಲ್ಲಿನವರನ್ನು ತಡೆದರೆ ಆಗುತ್ತಾ? ಅದು ನ್ಯಾಯವಾ? ಇಲ್ಲಿ ಕಾನೂನು ಇಲ್ಲವೇ? ಎಂದು ಪ್ರಶ್ನೆ ಮಾಡಿದರು. ಹೇಮನಾಥ ಶೆಟ್ಟಿಯವರಲ್ಲಿ ನಾವು ಭರವಸೆಯಿಟ್ಟಿದ್ದು, ಅವರು ನಮ್ಮ ಬೇಡಿಕೆ ಈಡೇರಿಸುತ್ತಾರೆ ಮತ್ತು ನಮಗೆ ರಕ್ಷಣೆ ಕೊಡುತ್ತಾರೆ ಎನ್ನುವ ಭರವಸೆ ನಮಗಿದೆ,
ನಮಗೆ ನ್ಯಾಯ ಕೊಡಿ ಎಂದರು.


ದಾದಾಗಿರಿ, ಪುಂಡಾಟಿಕೆ ನಿಲ್ಲಿಸಲೂ ಗೊತ್ತಿದೆ
ಅಮಾಯಕರ ಮೇಲೆ ದೌರ್ಜನ್ಯ ನಡೆಸಲು ನಾವು ಬಿಡುವುದಿಲ್ಲ, ಪುಂಡಾಟಿಕೆ, ದಾದಾಗಿರಿ ನಡೆಸುವುದನ್ನು ನಿಲ್ಲಿಸಲೂ ನಮಗೆ ಗೊತ್ತಿದೆ, ಈ ರೀತಿಯ ದೌರ್ಜನ್ಯ ಮಾಡಲು ಇವರಿಗೆ ಅಽಕಾರ ಕೊಟ್ಟವರು ಯಾರು? ಇಂತಹ ಘಟನೆಗಳೆಲ್ಲವನ್ನೂ ನೋಡಿಕೊಂಡು ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ, ಸರಕಾರವೂ ಕೈಕಟ್ಟಿ ಕುಳಿತಿಲ್ಲ. ಘಟ್ಟದವರು ಇಲ್ಲಿಂದ ಹೋದರೆ ಅನ್ಯಾಯ ಆಗುವುದು ಇಲ್ಲಿನ ಜನತೆಗೆ. ಏಕೆಂದರೆ ಅವರು ಹೋದರೆ ಇಲ್ಲಿನವರು ದರ ಏರಿಕೆ ಮಾಡುತ್ತಾರೆ. ಆಗ ನಷ್ಟ ಇಲ್ಲಿನವರಿಗೆ ಎಂದು ತಿಳಿದುಕೊಳ್ಳಬೇಕಾಗಿದೆ.
-ಹೇಮನಾಥ ಶೆಟ್ಟಿ ಕಾವು, ಕೆಪಿಸಿಸಿ ಸಂಯೋಜಕರು

ಶಾಸಕರ ವರ್ಚಸ್ಸಿಗೆ ಮಸಿ ಬಳಿಯಲು ಪ್ರಯತ್ನ:
ಇಲ್ಲಿ ಯಾರಿಗೂ ತೊಂದರೆಯಾಗಲು ನಾವು ಬಿಡಬಾರದು, ದುಡಿದು ತಿನ್ನುವ ಅಮಾಯಕರ ಮೇಲೆ ದಬ್ಬಾಳಿಕೆ ನಡೆಸುತ್ತಿರುವುದು ಅಕ್ಷಮ್ಯ. ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಶಾಸಕ ಅಶೋಕ್ ಕುಮಾರ್ ರೈ ಅವರ ವರ್ಚಸ್ಸಿಗೆ ಮಸಿ ಬಳಿಯುವ ಕೃತ್ಯ ಮತ್ತು ಪ್ರಯತ್ನ ಇಲ್ಲಿ ನಡೆಯುತ್ತಿದೆ. ಇದರ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.
-ಬಾಬು ಶೆಟ್ಟಿ, ನಿರ್ದೇಶಕರು ಸಿ.ಎ ಬ್ಯಾಂಕ್ ನರಿಮೊಗರು

LEAVE A REPLY

Please enter your comment!
Please enter your name here