ಕಾವು: ಮಾಡ್ನೂರು ಗ್ರಾಮದ ಅಮ್ಚಿನಡ್ಕ ಕೊಚ್ಚಿ ನಿವಾಸಿ, ಕಾವು ಸಹಕಾರ ಸಂಘದ ಮಾಜಿ ಅಧ್ಯಕ್ಷ, ಬಿಜೆಪಿಯ ಮಾಜಿ ಉಪಾಧ್ಯಕ್ಷ, ಮಾಡನ್ನೂರು ಜುಮಾ ಮಸೀದಿಯ ಮಾಜಿ ಅಧ್ಯಕ್ಷ, 81 ವರ್ಷ ಪ್ರಾಯದ ಕೆ.ಕೆ ಅಹಮ್ಮದ್ ಹಾಜಿ ಕೊಚ್ಚಿಯವರು ವಯೋಸಹಜ ಅನಾರೋಗ್ಯದಿಂದ ನ.30ರಂದು ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ಸಿವಿಲ್ ಇಂಜಿನಿಯರ್ ಅಬ್ದುಲ್ ಖಾದರ್, ಪುತ್ತೂರು ಡಯಾಬಿಟಿಸ್ ಸೆಂಟರ್ನ ವೈದ್ಯ ಡಾ. ನಝೀರ್ ಅಹಮ್ಮದ್ ಮತ್ತು ಪುತ್ರಿಯರಾದ ಅಲಿಮಾ, ಕೈರುನ್ನೀಸಾ, ಜಮೀಲಾ ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.
ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಕೆ.ಕೆ ಅಹಮ್ಮದ್ ಕೊಚ್ಚಿರವರು ಭಾರತೀಯ ಜನತಾ ಪಾರ್ಟಿಯಲ್ಲಿ ಅಲ್ಪಸಂಖ್ಯಾತ ಮೋರ್ಛಾದ ನಾಯಕರಾಗಿ ರಾಜ್ಯ ಮಟ್ಟದ ಪದಾಧಿಕಾರಿಯಾಗಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾಗಿ ಸೇರಿದಂತೆ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿ ಗ್ರಾಮೀಣ ಮಟ್ಟದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವಲ್ಲಿ ಪ್ರಮುಖರಾಗಿದ್ದರು. ಸಹಕಾರಿ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸಿದ ಅನುಭವ ಹೊಂದಿರುವ ಕೆ.ಕೆ ಅಹಮ್ಮದ್ರವರು ಕಾವು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಲವು ವರ್ಷಗಳ ಕಾಲ ನಿರ್ದೇಶಕರಾಗಿ 1988ರಿಂದ 1990ರವರೆಗೆ 2 ವರ್ಷಗಳ ಕಾಲ ಅಧ್ಯಕ್ಷರಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ.
ಧಾರ್ಮಿಕ ಸಂಘಟನೆಯಲ್ಲೂ ಮುಂಚೂಣಿಯಲ್ಲಿದ್ದ ಕೆ.ಕೆ ಅಹಮ್ಮದ್ರವರು ಮಾಡನ್ನೂರು ಜುಮಾ ಮಸೀದಿ ಮತ್ತು ಅಮ್ಚಿನಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯಲ್ಲಿ ಹಲವು ವರ್ಷಗಳ ಕಾಲ ಪ್ರಧಾನ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾಮಾಜಿಕ, ಶೈಕ್ಷಣಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿರುವ ಕೆ.ಕೆ ಅಹಮ್ಮದ್ರವರು ಸರ್ವಧರ್ಮದ ಪ್ರೀತಿಪಾತ್ರರಾಗಿದ್ದರು.