ಭ್ರಷ್ಟರ ವಿರುದ್ಧ ತನಿಖೆಗೆ ಆದೇಶ-ಭ್ರಷ್ಟಾಚಾರವನ್ನು ಸಹಿಸುವ ಮಾತೇ ಇಲ್ಲ-ಲಂಚ ಕೇಳಿದರೆ ಖುದ್ದಾಗಿ ದೂರು ಕೊಡಿ: ಅಶೋಕ್ ಕುಮಾರ್ ರೈ

0

ಉಪ್ಪಿನಂಗಡಿ: ಕೆಲವು ಗ್ರಾಮಕರಣಿಕರ ಭ್ರಷ್ಟಾಚಾರದ ವಿಚಾರ ನನಗೆ ಮಾಧ್ಯಮದ ಮೂಲಕ ತಿಳಿದುಬಂದಿದೆ. ಪ್ರತಿಯೊಂದು ಇಲಾಖೆಯಲ್ಲಿಯೂ ಭ್ರಷ್ಟಾಚಾರ ಮುಕ್ತವಾಗಿ ಸಾರ್ವಜನಿಕರ ಕೆಲಸವಾಗಬೇಕೆಂದು ಪಣ ತೊಟ್ಟವನು ನಾನು. ಜನರಿಗೂ ಕೂಡಾ ಅದೇ ರೀತಿ ಭರವಸೆ ನೀಡಿದ್ದೇನೆ. ಭ್ರಷ್ಟರ ವಿರುದ್ಧ ಖಂಡಿತಾ ಕ್ರಮ ಕೈಗೊಳ್ಳುತ್ತೇನೆ. ಭ್ರಷ್ಟಚಾರವನ್ನು ಸಹಿಸುವ ಮಾತೇ ಇಲ್ಲ ಎಂದು ಶಾಸಕ ಅಶೋಕ್ ಕುಮಾರ್ ರೈ ತಿಳಿಸಿದ್ದಾರೆ.


ಉಪ್ಪಿನಂಗಡಿ ಹೋಬಳಿಯ ಅಕ್ರಮ- ಸಕ್ರಮದ (ಎನ್‌ಸಿಆರ್- ಎಸ್‌ಆರ್) ಕೇಸ್ ವರ್ಕರ್ ಹಾಗೂ ಉಪ್ಪಿನಂಗಡಿ ಗ್ರಾಮ ಆಡಳಿತಾಧಿಕಾರಿಯವರು 94ಸಿ ಹಾಗೂ ಅಕ್ರಮ- ಸಕ್ರಮ ವಿಷಯದಲ್ಲಿ ಲಂಚಕ್ಕಾಗಿ ಬಡ ಜನರನ್ನು ಸತಾಯಿಸುವ ಬಗ್ಗೆ ‘ಸುದ್ದಿ ಬಿಡುಗಡೆ’ ದಿನ ಪತ್ರಿಕೆಯಲ್ಲಿ ಪ್ರಕಟವಾದ ವರದಿಗೆ ಸಂಬಂಧಿಸಿ ಸ್ಪಷ್ಟನೆ ನೀಡಿದ ಅವರು, ಸರಕಾರಿ ಅಧಿಕಾರಿಗಳು ಲಂಚಕ್ಕಾಗಿ ಪೀಡಿಸಿದರೆ ನೇರವಾಗಿ ನನಗೆ ದೂರು ನೀಡಿ ಎಂದು ನಾನು ಶಾಸಕನಾದ ಬಳಿಕದಿಂದ ಪದೇ ಪದೇ ಹೇಳಿಕೊಂಡು ಬರುತ್ತಿದ್ದೇನೆ. ಆದರೆ ಕೆಲವರಷ್ಟೇ ನನಗೆ ಅಧಿಕೃತವಾಗಿ ದೂರು ನೀಡಿದ್ದಾರೆ. ಅಂಥಹ ದೂರನ್ನು ಆಧರಿಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮಕ್ಕೆ ಆದೇಶಿಸಿದ್ದೇನೆ. ಲಂಚ ಪಡೆದ ಅಧಿಕಾರಿಗಳಿಂದ ಲಂಚದ ಹಣವನ್ನು ತಿರುಗಿಸಿ ಕೊಡಿಸಿದ್ದೇನೆ. ಆದರೆ ದೂರು ಕೊಡಲು ಯಾರು ಮುಂದೆ ಬಾರದೇ ಇರುವುದು ಈ ಪರಿಯ ಅವ್ಯವಸ್ಥೆಗಳಿಗೆ ಕಾರಣವಾಗುತ್ತಿದೆ. ಈ ವರದಿಯನ್ನು ನಾನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸಿ ವರದಿ ನೀಡುವಂತೆ ಮೇಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ತಪ್ಪು ಮಾಡಿದ್ದಲ್ಲಿ ಈ ಬಗ್ಗೆ ತಪ್ಪಿತಸ್ಥರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುವುದು. ಇನ್ನಾದರೂ ಜನರು ಲಂಚಕ್ಕಾಗಿ ಸತಾಯಿಸುವ ಅಧಿಕಾರಿಗಳ ವಿರುದ್ಧ ಧೈರ್ಯವಾಗಿ ನನ್ನಲ್ಲಿ ದೂರು ನೀಡಿ. ನಿಮ್ಮ ನೆರವಿಗೆ ನಾನಿದ್ದೇನೆ. ಭ್ರಷ್ಟಾಚಾರವನ್ನು ಸಹಿಸುವ ಮಾತೇ ಇಲ್ಲ ಎಂದು ಶಾಸಕ ಅಶೋಕ್‌ ರೈ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here