ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಶಶಿಕುಮಾರ್ ರೈ ಬಾಲ್ಯೊಟ್ಟು, ಉದಯ ರೈ ಮಾದೋಡಿ, ಅಶ್ವಿನ್ ಎಲ್. ಶೆಟ್ಟಿಯವರಿಗೆ ಸನ್ಮಾನ

0

ಪುತ್ತೂರು: ದ.ಕ, ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲದ ನಿರ್ದೇಶಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ನಿರ್ದೇಶಕ ಉದಯ ರೈ ಮಾದೋಡಿ ಹಾಗೂ ಯುಡೋ ಪ್ರಶಸ್ತಿ ಪುರಸ್ಕೃತರಾದ ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘದ ನಿರ್ದೇಶಕ ಅಶ್ವಿನ್ ಎಲ್. ಶೆಟ್ಟಿಯವರಿಗೆ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಸನ್ಮಾನ ಸಮಾರಂಭವು ನ.29 ರಂದು ಸಂಘದ ಸಭಾಭವನದಲ್ಲಿ ನಡೆಯಿತು. ಶಶಿಕುಮಾರ್ ರೈ ಬಾಲ್ಯೊಟ್ಟು, ಉದಯ ರೈ ಮಾದೋಡಿ, ಅಶ್ವಿನ್ ಎಲ್. ಶೆಟ್ಟಿರವರನ್ನು ಶಾಲು ಹೊದಿಸಿ, ಫಲಪುಷ್ಪ ನೀಡಿ, ಸ್ಮರಣಿಕೆಯಿತ್ತು ಅದ್ದೂರಿಯಾಗಿ ಗೌರವಿಸಿ, ಸನ್ಮಾನಿಸಲಾಯಿತು.


ಅತ್ಯುತ್ತಮ ಆಡಳಿತ, ಸಿಬ್ಬಂದಿಗಳು ಇರುವ ಸಂಘ- ಶಶಿಕುಮಾರ್ ರೈ:
ಸನ್ಮಾನಿತರಾದ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮಾತನಾಡಿ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅತ್ಯುತ್ತಮವಾದ ಆಡಳಿತ ಮಂಡಳಿ ಮತ್ತು ಅನುಭವಿ ಸಿಬ್ಬಂದಿಗಳು ಇದ್ದಾರೆ, ಅಪೆಕ್ಸ್ ಬ್ಯಾಂಕಿನ ಅಧಿಕಾರಿಗಳ ತಂಡ ಸವಣೂರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇಲ್ಲಿನ ಸಿಇಓ ಚಂದ್ರಶೇಖರ್ ಮತ್ತು ಸಿಬ್ಬಂದಿಗಳ ಕಾರ‍್ಯವೈಖರಿಯನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ, ಇಲ್ಲಿ ಯಾವ ಪೈಲ್ ಯಾವ ರೀತಿ ಇರಬೇಕು ಎಂಬುದನ್ನು ಅಚ್ಚುಕಟ್ಟಾಗಿ ಜೋಡಿಸಿರುತ್ತಾರೆ, ಜೊತೆಗೆ ಪ್ರತಿಯೊಂದು ಮಾಹಿತಿಯನ್ನು ತಕ್ಷಣ ನೀಡುತ್ತಾರೆ. ಸಿಇಓ ಚಂದ್ರಶೇಖರ್‌ರವರು ಕರ್ತವ್ಯವನ್ನು ಅತ್ಯಂತ ಪ್ರಾಮಾಣಿಕವಾಗಿ ನಿರ್ವಹಿಸುತ್ತಿದ್ದಾರೆ. ಅಧ್ಯಕ್ಷ ತಾರಾನಾಥ ಕಾಯರ್ಗ ಮತ್ತು ಆಡಳಿತ ಮಂಡಳಿಯಿಂದ ಇಲ್ಲಿ ಉತ್ತಮವಾದ ಸೇವೆ ದೊರೆಯುತ್ತಿದ್ದು, ಮಾದರಿ ಸಂಸ್ಥೆಯಾಗಿದೆ ಎಂದರು. 2023-24 ನೇ ಸಾಲಿನಲ್ಲಿ ಸಂಸ್ಥೆಯು 1,52 ಕೋಟಿ ರೂ. ಲಾಭಗಳಿಸಿರುವುದು ಹೆಮ್ಮೆಯ ವಿಚಾರವಾಗಿದೆ. ಈ ಬ್ಯಾಂಕಿನ ಅಧ್ಯಕ್ಷರಾಗಿ, ಪ್ರಸ್ತುತ ನಿರ್ದೇಶಕರಾಗಿರುವ ಉದಯ ರೈಯವರು ರಾಜ್ಯ ಮಟ್ಟದ ಸಂಸ್ಥೆಯಾಗಿರುವ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲದ ನಿರ್ದೇಶಕರಾಗಿ ಎರಡನೇ ಬಾರಿಗೆ ಆಯ್ಕೆಯಾಗಿರುವುದು ಅತ್ಯಂತ ಖುಷಿಯ ವಿಚಾರವಾಗಿದೆ ಎಂದ ಬಾಲ್ಯೊಟ್ಟು ಜನತಾ ಬಜಾರ್ ಸಂಸ್ಥೆಯು ನಷ್ಟದಲ್ಲಿ ಇದ್ದಾಗ, ಅದರ ಆಡಳಿತ ಚುಕ್ಕಾಣಿ ಹಿಡಿದು, ಅದನ್ನು ಲಾಭದತ್ತ ಕೊಂಡೊಯ್ದ ಕೀರ್ತಿ ಉದಯ ರೈ ಮಾದೋಡಿಯವರಿಗೆ ಸಲ್ಲುತ್ತದೆ. ಅಶ್ವಿನ್ ಎಲ್ ಶೆಟ್ಟಿಯವರಿಗೆ ಮುಂದೆಯೂ ಒಳ್ಳೆಯ ಹೆಸರು ಬರಲಿ ಎಂದು ಹೇಳಿ, ಗ್ರಾಹಕರನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ತನ್ನತ್ತ ಸೆಳೆಯುವ ಮೂಲಕ ಸಹಕಾರ ಸಂಸ್ಥೆಯು ಪರಸ್ಪರ ಸಹಕಾರದಿಂದ ಬೆಳೆಯಲು ಸಾಧ್ಯವಾಗಿದೆ ಎಂದರು.


ಶಶಿಕುಮಾರ್ ರೈ ಬಾಲ್ಯೊಟ್ಟುರವರಿಗೆ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಲ್ಲುವ ಯೋಗ ಬರಲಿ- ಉದಯ ರೈ :
ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲದ ನಿರ್ದೇಶಕ ಉದಯ ರೈ ಮಾದೋಡಿಯವರು ಮಾತನಾಡಿ ನಾನು ಕಾಲೇಜ್ ವಿದ್ಯಾಭ್ಯಾಸ ಮುಗಿಸಿ ಊರಿಗೆ ಬಂದ ಬಳಿಕ ರಾಜಕೀಯವಾಗಿ ಬಿಜೆಪಿ ಸೇರಿದೆ. ಆ ಬಳಿಕ ಸಹಕಾರ ಕ್ಷೇತ್ರ ನನ್ನನು ಸೆಳೆಯಿತು. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಎರಡು ಬಾರಿ ಅಧ್ಯಕ್ಷನಾಗಿ ಬಳಿಕ, ಮಂಗಳೂರಿನ ಜನತಾ ಬಜಾರ್‌ನಲ್ಲಿ ಅಧ್ಯಕ್ಷನಾಗುವ ಯೋಗ ದೊರೆಯಿತು. ಇದೀಗ ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲದಲ್ಲಿ ಎರಡನೇ ಬಾರಿಗೆ ನಿರ್ದೇಶಕನಾಗುವ ಅವಕಾಶ ಒಲಿದು ಬಂತು. ಇದೆಲ್ಲ ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ. ನಮ್ಮ ಮನೆಗೂ ಸಹಕಾರ ಕ್ಷೇತ್ರಕ್ಕೂ ಅವಿನಾಭಾವ ಸಂಬಂಧ ಇದೆ. ನನ್ನ ದೊಡ್ಡಪ್ಪ ಮಾದೋಡಿಯ ತಮ್ಮ ಮನೆಯಲ್ಲಿ ಸಹಕಾರ ಸಂಘವನ್ನು ಪ್ರಾರಂಭ ಮಾಡಿದ್ದರು ಎಂದು ನೆನಪಿಸಿ, ತನ್ನ ಸಹಕಾರ ಕ್ಷೇತ್ರದ ಬೆಳವಣಿಗೆಗೆ ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಶಶಿಕುಮಾರ್ ರೈ ಬಾಲ್ಯೊಟ್ಟುರವರು ಮುಂಬರುವ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ಚುನಾವಣೆಗೆ ನಿಲ್ಲುವ ಯೋಗ ಬರಲಿ ಎಂದು ಶುಭಹಾರೈಸಿದರು.


ಸಂತೋಷ ತಂದಿದೆ- ಅಶ್ವಿನ್ ಶೆಟ್ಟಿ :
ಯುಡೋ ಪ್ರಶಸ್ತಿ ಪುರಸ್ಕೃತ ಅಶ್ವಿನ್ ಎಲ್. ಶೆಟ್ಟಿಯವರು ಮಾತನಾಡಿ ಪ್ರಶಸ್ತಿ ಬಂದಿರುವುದು ತುಂಬಾ ಸಂತೋಷ ತಂದಿದೆ ಎಂದು ಹೇಳಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು

ಸಹಕಾರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆ- ತಾರಾನಾಥ ಕಾಯರ್ಗ:
ಅಧ್ಯಕ್ಷತೆ ವಹಿಸಿದ್ದ ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗರವರು ಸ್ವಾಗತಿಸಿ, ಮಾತನಾಡಿ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಶಶಿಕುಮಾರ್ ರೈಯವರು ಅತ್ಯಂತ ಕ್ರಿಯಾಶೀಲರಾಗಿ ಕೆಲಸವನ್ನು ಮಾಡುವ ಮೂಲಕ, ಸಹಕಾರ ಕ್ಷೇತ್ರಕ್ಕೆ ಬಹುದೊಡ್ಡ ಕೊಡುಗೆಯನ್ನು ನೀಡಿದ್ದಾರೆ. ಎಸ್‌ಸಿಡಿಸಿಸಿ ಬ್ಯಾಂಕ್‌ನಲ್ಲಿ ಕಡತ ವಿಲೇವಾರಿ ಸೇರಿದಂತೆ ಯಾವುದೇ ಕೆಲಸ ಇದ್ದರೂ ಶಶಿಕುಮಾರ್ ರೈಯವರು ಬಹಳಷ್ಟು ಮುತುವರ್ಜಿಯಿಂದ ಕೆಲಸವನ್ನು ಮಾಡುತ್ತಾರೆ. ಕರ್ನಾಟಕ ರಾಜ್ಯ ಸಹಕಾರ ಗ್ರಾಹಕರ ಮಹಾ ಮಂಡಲದ ನಿರ್ದೇಶಕರಾಗಿ ಎರಡನೇ ಬಾರಿಗೆ ಆಯ್ಕೆಯಾದ ಉದಯ ರೈಯವರು ಬ್ಯಾಂಕಿನ ಅಭಿವೃದ್ಧಿಯಲ್ಲಿ ಒಳ್ಳೆಯ ಕೆಲಸವನ್ನು ಮಾಡಿದ್ದಾರೆ, ನಮ್ಮ ಸಂಘದ ಮಾಜಿ ಅಧ್ಯಕ್ಷ ಸಹಕಾರ ರತ್ನ ಸವಣೂರು ಸೀತಾರಾಮ ರೈಯವರ ಅಳಿಯ ಅಶ್ವಿನ್ ಶೆಟ್ಟಿಯವರ ಇಂಜಿನಿಯರಿಂಗ್ ಕ್ಷೇತ್ರದ ಸೇವೆಗೆ ಯುಡೋ ಪ್ರಶಸ್ತಿ ಬಂದಿರುವುದು ಸಂತಸ ತಂದಿದೆ ಎಂದು ಹೇಳಿದರು.


ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ‍್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಪಿ.ರವರು ಕಾರ‍್ಯಕ್ರಮ ನಿರ್ವಹಿಸಿ, ಮಾತನಾಡಿ ಶಶಿಕುಮಾರ್ ರೈ ಬಾಲ್ಯೊಟ್ಟು ಅತ್ಯುತ್ತಮ ಸಂಘಟಕರಾಗಿ, ಎಸ್‌ಸಿಡಿಸಿಸಿ ಬ್ಯಾಂಕಿನ ನಿರ್ದೇಶಕರಾಗಿ ಅಭೂತಪೂರ್ವ ರೀತಿಯಲ್ಲಿ ಕೆಲಸವನ್ನು ಮಾಡುತ್ತಾರೆ, ಸಹಕಾರ ಸಂಸ್ಥೆಯ ಪ್ರತಿಯೊಂದು ವಿಷಯದಲ್ಲೂ ಸ್ವಂದಿಸುವ ಗುಣ ಮೆಚ್ಚುವಂಥದ್ದು ಎಂದು ಹೇಳಿದರು. ಉದಯ ರೈ ಮಾದೋಡಿಯವರು ಎರಡು ಬಾರಿ ಅಧ್ಯಕ್ಷರಾಗಿ ಸಂಸ್ಥೆಯ ಬೆಳವಣಿಗೆ ಕೊಡುಗೆಯನ್ನು ನೀಡಿದ್ದಾರೆ. ಅಶ್ವಿನ್ ಶೆಟ್ಟಿಯವರು ಇಂಜಿನಿಯರಿಂಗ್ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಅರ್ಹವಾಗಿ ಪ್ರಶಸ್ತಿ ಒಲಿದು ಬಂದಿದೆ ಎಂದು ಹೇಳಿದರು.


ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಚೇತನ್ ಕುಮಾರ್ ಕೋಡಿಬೈಲು ವಂದಿಸಿದರು. ಸಂಘದ ಉಪಕಾರ‍್ಯನಿರ್ವಹಣಾಽಕಾರಿ ಜಲಜಾ ಎಚ್ ರೈ ಮತ್ತು ನವೋದಯ ಪ್ರೇರಕಿ ಪ್ರೇಮಾ ಪ್ರಾರ್ಥನೆಗೈದರು. ಸಂಘದ ನಿರ್ದೆಶಕರುಗಳಾದ ಗಣೇಶ್ ನಿಡ್ವಣ್ಣಾಯ ಕುಮಾರಮಂಗಲ, ಚೆನ್ನಪ್ಪ ಗೌಡ ನೂಜಿ, ಪ್ರಕಾಶ್ ರೈ ಸಾರಕರೆ, ಶಿವಪ್ರಸಾದ್ ಎಂ.ಎಸ್, ಕಳುವಾಜೆ, ಜ್ಞಾನೇಶ್ವರಿ, ಸೀತಾಲಕ್ಷ್ಮೀ, ಗಂಗಾಧರ ಪೆರಿಯಡ್ಕ, ತಿಮ್ಮಪ್ಪ ಬನಾರಿ. ಎಸ್‌ಸಿಡಿಸಿಸಿ ಬ್ಯಾಂಕ್‌ನ ಸೂಪರ್‌ವೈಸರ್ ವಸಂತ ಎಸ್, ಸಂಘದ ಬೆಳಂದೂರು ಶಾಖಾ ವ್ಯವಸ್ಥಾಪಕ ಪಕೀರ ಎ, ಮಾಸ್ ಸಂಸ್ಥೆಯ ಸವಣೂರು ಶಾಖಾ ವ್ಯವಸ್ಥಾಪಕ ಯತೀಶ್, ಸಂಘದ ಸಿಬ್ಬಂದಿಗಳು ಉಪಸ್ಥಿತರಿದ್ದರು.

ಸಹಕಾರ ಕ್ಷೇತ್ರದ ಸಾಧಕರಿಗೆ ಗೌರವ
ಇವತ್ತು ಶಶಿಕುಮಾರ್ ರೈ ಮತ್ತು ಉದಯ ರೈಯವರು ಸಹಕಾರ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗೆ ಮತ್ತು ಇಂಜಿನಿಯರ್ ಆಗಿದ್ದು, ಸಹಕಾರ ರಂಗದಲ್ಲಿ ಇರುವ ಅಶ್ವಿನ್ ಶೆಟ್ಟಿಯವರನ್ನು ನಾವು ಗೌರವಿಸಿದ್ದೇವೆ. ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಕೃಷಿ ಅಭಿವೃದ್ಧಿ ಸೇರಿದಂತೆ ಎಲ್ಲರಿಗೂ ಒಳ್ಳೆಯ ಸೇವೆಯನ್ನು ನೀಡುತ್ತಿದ್ದು, ಸಂಘದ ಆಡಳಿತ ಮಂಡಳಿ ಮತ್ತು ಸಿಇಓ ಮತ್ತು ಸಿಬ್ಬಂಧಿಗಳ ಸೇವೆಯಿಂದ ಸಂಘಕ್ಕೆ ಉತ್ತಮ ಹೆಸರು ಬಂದಿದೆ
-ತಾರಾನಾಥ ಕಾಯರ್ಗ
ಅಧ್ಯಕ್ಷರು ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘ
ಸಂಸ್ಥೆಯ ಬೆಳವಣಿಗೆಗೆ ಎಲ್ಲರ ಸಹಕಾರ


ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘವು ಉತ್ತಮ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ಸಹಕಾರ ಹಾಗೂ ಗ್ರಾಹಕ ಸದಸ್ಯರುಗಳ ಪ್ರೋತ್ಸಾಹದಿಂದ ಉತ್ತಮ ರೀತಿಯಿಂದ ಕೆಲಸ ಮಾಡುತ್ತಿದೆ
ಚಂದ್ರಶೇಖರ್ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ
ಸವಣೂರು ಪ್ರಾ.ಕೃ.ಪತ್ತಿನ ಸಹಕಾರ ಸಂಘ

LEAVE A REPLY

Please enter your comment!
Please enter your name here