ಕಡಬ: ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಮುಂಗ್ಲಿಮಜಲು ನಿವಾಸಿ ಶಾಂತಪ್ಪ ಗೌಡ ಅವರ ಪುತ್ರ ಸಂದೀಪ್ ಗೌಡ (29.ವ) ಕೆಲಸಕ್ಕೆಂದು ಹೋದವರು ಮನೆಗೆ ಹಿಂದಿರುಗದೆ ನಾಪತ್ತೆಯಾಗಿರುವ ಬಗ್ಗೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇದೀಗ ಈ ಪ್ರಕರಣದ ಜಾಡು ಹಿಡಿದ ಪೊಲೀಸರು ಭಾನುವಾರ ರಾತ್ರಿಯೇ ಇಬ್ಬರನ್ನು ವಶಕ್ಕೆ ಪಡೆದು ಹಲವು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಿದ್ದರು. ಕಡಬ ಠಾಣೆಗೆ ಡಿವೈಎಸ್ಪಿ ಆಗಮಿಸಿ ಮಾಹಿತಿ ಕಲೆ ಹಾಕಿದ್ದರು.ನೆಟ್ಟಣ ಬಳಿ ನಾಪತ್ತೆಯಾದ ಯುವಕನ ಕೊಲೆಯಾಗಿದೆ ಎಂಬ ಸುದ್ದಿ ಭಾನುವಾರ ರಾತ್ರಿ ಹಬ್ಬಿತ್ತು. ಪೊಲೀಸರು ಈ ಬಗ್ಗೆ ಯಾವುದೇ ಮಾಹಿತಿ ದೃಢಪಡಿಸಿರಲಿಲ್ಲ.
ಸೋಮವಾರ ಪೊಲೀಸರು ನೆಟ್ಟಣಕ್ಕೆ ಬರುವ ತಯಾರಿ ಮಾಡಿದ್ದು ಈ ಸುದ್ದಿಯ ಹಿನ್ನೆಲೆಯಲ್ಲಿ ನೆಟ್ಟಣ ಮುಖ್ಯ ಪೇಟೆಯಲ್ಲಿ ಅಧಿಕ ಜನರು ಸೇರಿದ್ದಾರೆ. ಕೊಲೆ ಮಾಡಲು ಕಬ್ಬಿಣದ ರಾಡ್ ವೊಂದನ್ನು ಬಳಸಿ ಎಸೆದಿರುವ ಮಾಹಿತಿ ಹಿನ್ನೆಲೆ ಪೊಲೀಸರು ನೆಟ್ಟಣ ಪೇಟೆಯ ತೋಡಿನ ಸಮೀಪ ಹುಡುಕಾಟ ಮಾಡಿದ್ದರು. ಈ ಸುದ್ದಿ ತಿಳಿದ ಗ್ರಾಮಸ್ಥರು ಅಲ್ಲಿಗೆ ತೆರಳಿ ಪೊಲೀಸ್ ಸಿಬ್ಬಂದಿಗಳನ್ನು ತರಾಟೆಗೆ ತೆಗೆದು ಕೊಂಡಿದ್ದಾರೆ.
ನೆಟ್ಟಣ ಪರಿಸರದಲ್ಲೇ ಮೃತ ದೇಹವೊಂದು ಇದೆ ಎನ್ನುವ ಸುದ್ದಿ ಹರಡಿದರೂ ಪೊಲೀಸರು ತನಿಖೆಯ ಸಲುವಾಗಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸಂದೀಪ್ ಮರ್ದಾಳದಲ್ಲಿ ವಿನಯ ಎಂಬವರೊಂದಿಗೆ ಶಾಮಿಯಾನ ಹಾಕುವ ಕೆಲಸ ಮಾಡುತ್ತಿದ್ದು ನ. 27ರಂದು ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೋದವರು ಕೆಲಸ ಮುಗಿಸಿ ಸಂಜೆ ಮನೆಗೆ ವಾಪಸಾಗಿರಲಿಲ್ಲ . ಈ ಬಗ್ಗೆ ವಿನಯ ಅವರಲ್ಲಿ ವಿಚಾರಿಸಿದಾಗ ಸಂದೀಪ್ ನೆಟ್ಟಣ ನಿವಾಸಿ ಪ್ರತೀಕ್ ನೊಂದಿಗೆ ಕಾರಿನಲ್ಲಿ ಹೋಗಿರುವುದಾಗಿ ತಿಳಿಸಿದ್ದರು. ಆ ದಿನ ಮನೆಗೆ ಬಾರದೇ ಇದ್ದಾಗ ನೆರೆ ಕರೆಯವರಲ್ಲಿ ಹಾಗೂ ಸಂಬಂಧಿಕರ ಮನೆಯಲ್ಲಿ ಹುಡುಕಾಡಿದರೂ ಪತ್ತೆಯಾಗದ ಹಿನ್ನೆಲೆಯಲ್ಲಿ ಸರೋಜಾ ಅವರು ಕಡಬ ಠಾಣೆಗೆ ದೂರು ನೀಡಿದ್ದರು.