*ಶೀನಪ್ಪ ಭಂಡಾರಿಯವರು ಯಕ್ಷಗಾನದ ಕ್ರಾಂತಿ ಪುರುಷ – ಸರಪಾಡಿ
*ಕಲಾವಿದರಿಗೆ ಪ್ರೋತ್ಸಾಹ ಸಿಗಲಿ – ಗಿರೀಶ್ ಮಳಿ
*ಯಕ್ಷಗಾನ ಅಂದರೆ ಒಂದು ಸಂಸ್ಕೃತಿ – ಪಂಜಿಗುಡ್ಡೆ ಈಶ್ವರ ಭಟ್
*ಶೀನಪ್ಪ ಭಂಡಾರಿಯವರ ಕುಟುಂಬ ಯಕ್ಷಗಾನದ ಪೋಷಕ ಕುಟುಂಬ – ದಿನೇಶ್ ಸಾಲ್ಯಾನ್
ಪುತ್ತೂರು: ಯಕ್ಷಭಂಡಾರ ಶೀನಪ್ಪ ಭಂಡಾರಿ ವೇದಿಕೆ ಬನ್ನೂರು ಇದರ ವತಿಯಿಂದ, ಶೀನಪ್ಪ ಭಂಡಾರಿಯವರ ಪುತ್ರ ಗಂಗಾಧರ ಭಂಡಾರಿಯವರ ನೇತೃತ್ವದಲ್ಲಿ ಅಭಿನಂದನಾ ಸಮಾರಂಭ ಮತ್ತು ‘ಕೋಟಿ ಚೆನ್ನಯ’ ತುಳು ಯಕ್ಷಗಾನ ಕಾರ್ಯಕ್ರಮವು ಡಿ. 1ರಂದು ಬನ್ನೂರು ಶನೀಶ್ವರ ಮಂದಿರದ ವಠಾರದಲ್ಲಿ ನಡೆಯಿತು. ದೀಪ ಪ್ರಜ್ವಲಿಸಿ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು.
ಅಭಿನಂದನೆ ಕಾರ್ಯಕ್ರಮದ ಸಲುವಾಗಿ ಯಕ್ಷಗಾನ ಕಲಾವಿದ ಸೀತಾರಾಮ ರೈ ಬನ್ನೂರು, ಮಹಾಲಿಂಗ ನಾಯ್ಕ ಬನ್ನೂರು ನೆಕ್ಕಿಲ, ಯಕ್ಷಗಾನ ಕಲಾವಿದ ಮೋಹನ ಆಚಾರ್ಯ ಪಂಜ, ಮಾಜಿ ಸೈನಿಕ ವಸಂತ ಗೌಡ, ಮಾಜಿ ಸೈನಿಕ ಅಶೋಕ ಬಿ., ಅಂಬು ಶೆಟ್ಟಿಯಾರ್ ಮುಳ್ಳೇರಿಯಾ ರವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಮಾತನಾಡಿದ ಮಾಜಿ ಸೈನಿಕ ವಸಂತ ಗೌಡರವರು ‘ಯಕ್ಷಗಾನ ಕಲಾವಿದನಾಗಬೇಕೆಂಬ ಆಸೆ ನನಗೂ ಇತ್ತು. ಆದರೆ ಪರಿಸ್ಥಿತಿ, ಸನ್ನಿವೇಶ ಅದಕ್ಕೆ ಅವಕಾಶ ಕೊಡದೇ ದೇಶ ಕಾಯುವ ಭಾಗ್ಯ ದೊರೆಯಿತು. ಯಕ್ಷಗಾನ ಕಲೆಯನ್ನು ನಾವೆಲ್ಲ ಉಳಿಸೋಣ’ ಎಂದರು. ಇನ್ನೋರ್ವ ಸನ್ಮಾನಿತರಾದ ಮಹಾಲಿಂಗ ನಾಯ್ಕ್ ಶುಭ ಹಾರೈಸಿದರು.
ಶೀನಪ್ಪ ಭಂಡಾರಿ ಯಕ್ಷಗಾನದ ಕ್ರಾಂತಿ ಪುರುಷ – ಸರಪಾಡಿ
ಶೀನಪ್ಪ ಭಂಡಾರಿಯವರ ಸಂಸ್ಮರಣಾ ಮಾತುಗಳನ್ನಾಡಿದ ಯಕ್ಷಗಾನ ಕಲಾವಿದ ಸರಪಾಡಿ ಅಶೋಕ್ ಶೆಟ್ಟಿಯವರು ಮಾತನಾಡಿ ‘ಶೀನಪ್ಪ ಭಂಡಾರಿಯವರು ಯಕ್ಷಗಾನದ ಕ್ರಾಂತಿ ಪುರುಷರೆನಿಸಿಕೊಂಡವರು. ಯಕ್ಷಗಾನವೆಂದರೆ ತೀರಾ ಸಾಮಾನ್ಯ ಭಾವನೆ ಇದ್ದ ಕಾಲದಲ್ಲಿಯೂ ಮೇಳ ಕಟ್ಟಿ ಬೆಳೆಸಿದವರು ಅವರು. ಕಲಾವಿದರ ರಕ್ಷಕರಾಗಿದ್ದುಕೊಂಡು ಕಲಾವಿದರ ಬದುಕಿಗೆ ಆಧಾರವಾಗಿದ್ದರು. ಮಕ್ಕಳಿಗೂ ತನ್ನ ಯಕ್ಷಗಾನದ ಪರಂಪರೆ ಮುಂದುವರಿಸಿದರು. ಒಂದು ಕಾಲದಲ್ಲಿ ಯಕ್ಷಗಾನದ ಪೋಷಕ ಕುಟುಂಬ ಇದ್ದಿದ್ದರೆ ಅದು ಬನ್ನೂರು ಶೀನಪ್ಪ ಭಂಡಾರಿಯವರ ಕುಟುಂಬ’ ಎಂದರು.
ಕಲಾವಿದರಿಗೆ ಪ್ರೋತ್ಸಾಹ ಸಿಗಲಿ – ಗಿರೀಶ್ ಮಳಿ
ಸಭಾಧ್ಯಕ್ಷತೆ ವಹಿಸಿದ್ದ ನ್ಯಾಯವಾದಿ ಗಿರೀಶ್ ಮಳಿಯವರು ಮಾತನಾಡಿ ಈ ವೇದಿಕೆಯಲ್ಲಿ ನಡೆದಿರುವ ಅಭಿನಂದನೆ ಕಾರ್ಯಕ್ರಮ, ಯಕ್ಷಗಾನ ಪ್ರದರ್ಶನ ಇಂದು ಶೀನಪ್ಪ ಭಂಡಾರಿಯವರಿಗೆ ಅತ್ಯಂತ ಪ್ರೀತಿ ಸಲ್ಲುವಂತಹ ರೀತಿಯಲ್ಲಿ ನಡೆದಿದೆ. ಕಲಾವಿದರಿಗೆ ಇನ್ನಷ್ಟು ಪ್ರೋತ್ಸಾಹ ಸಿಗುವಂತಾಗಲಿ. ಈ ಕ್ಷೇತ್ರ ಇನ್ನಷ್ಟು ಸಾನ್ನಿಧ್ಯ ವೃದ್ಧಿಯಾಗಿ ಲೋಕಕ್ಕೆ ಸನ್ಮಂಗಳ ಉಂಟಾಗಲಿ’ ಎಂದರು.
ನಮ್ಮ ಸಂಸ್ಕೃತಿ ತಿಳಿದುಕೊಳ್ಳಬೇಕು – ಪಂಜಿಗುಡ್ಡೆ
ಮುಖ್ಯ ಅತಿಥಿಯಾಗಿದ್ದ ಈಶ್ವರ ಭಟ್ ಪಂಜಿಗುಡ್ಡೆಯವರು ಮಾತನಾಡಿ ‘ಈ ಕಾರ್ಯಕ್ರಮ ಆಯೋಜಿಸಿದ ಗಂಗಾಧರ ಭಂಡಾರಿಯವರಿಗೆ ನನ್ನ ಅಭಿನಂದನೆ ಇದೆ. ಗಂಗಾಧರ ಭಂಡಾರಿಯವರ ಕಲಾ ಪೋಷಣೆ ಶ್ಲಾಘನೀಯವಾದುದು. ಯಕ್ಷಗಾನಕ್ಕೆ ನಾನು ಪ್ರೋತ್ಸಾಹ ಕೊಡುತ್ತಿದ್ದೇನೆ. ಯಕ್ಷಗಾನ ನಮ್ಮ ಸಂಸ್ಕೃತಿಯಾಗಿದೆ. ಇಂದಿನ ಸಮಾಜಕ್ಕೆ ಸಂಸ್ಕೃತಿಯ ಪಾಠ ಚೆನ್ನಾಗಿ ಬೇಕಾಗಿದೆ’ ಎಂದು ಹೇಳಿ ಗಂಗಾಧರ ಭಂಡಾರಿಯವರ ಪುತ್ರ ದಿ. ಭರತ್ ಭಂಡಾರಿಯವರನ್ನು ಸ್ಮರಿಸಿದರು.
ಶನೀಶ್ವರ ಮಂದಿರದ ಮೊಕ್ತೇಸರ ದಿನೇಶ್ ಸಾಲ್ಯಾನ್ ರವರು ಮಾತನಾಡಿ ‘ಶೀನಪ್ಪ ಭಂಡಾರಿಯವರು ನಮಗೆಲ್ಲಾ ಆದರ್ಶಪ್ರಾಯರಾಗಿದ್ದವರು. ಶನೀಶ್ವರ ದೇವರ ಪೂಜೆಯ ವಾರ್ಷಿಕೋತ್ಸವದ ಆಮಂತ್ರಣವನ್ನು ಪ್ರಥಮವಾಗಿ ಅವರಲ್ಲಿಗೆ ಹೋಗಿ ಆಶೀರ್ವಾದ ಪಡೆದು ಬರುತ್ತಿದ್ದೆ. ಶೀನಪ್ಪ ಭಂಡಾರಿಯವರ ಕುಟುಂಬ ಮತ್ತು ನಮ್ಮ ಕುಟುಂಬ ಅತ್ಯಂತ ಹತ್ತಿರದ ಒಡನಾಟದಲ್ಲಿದ್ದೇವೆ’ ಎಂದರು.
ಶೀನಪ್ಪ ಭಂಡಾರಿಯವರ ಬಗ್ಗೆ ಅವರ ಕುಟುಂಬದವರ ಪರವಾಗಿ ಅವರ ಅಳಿಯ ರಾಮಕೃಷ್ಣ ರೈ ಪೇರಾಲು ಅಜ್ಜಾವರ ಮಾತನಾಡಿ ಸಂಸ್ಮರಣೆ ಮಾಡಿದರು.
ಹಿರಿಯ ಯಕ್ಷಗಾನ ಕಲಾವಿದ ಕೆ.ಎಚ್. ದಾಸಪ್ಪ ರೈ, ದೇವರಾಜ್ ಶೆಟ್ಟಿ ತಲೆಕ, ವಿಜಯಾ ಬ್ಯಾಂಕ್ ನಿವೃತ್ತ ಮ್ಯಾನೇಜರ್ ಕೃಷ್ಣ ಶೆಟ್ಟಿ ಪನಿಯೂರುಗುತ್ತು, ಚಂದ್ರಶೇಖರ ಭಂಡಾರಿ, ಸೀತಾರಾಮ ರೈ, ಬಾಬು ರೈ ಕೈಕಾರ, ಸಂಜೀವ ಶೆಟ್ಟಿ ಪೆರಾಡಿ, ಉದ್ಯಮಿ ಸುರೇಶ್ ಭಟ್ ಬೆಳಾಲು ಉಪಸ್ಥಿತರಿದ್ದರು.
ಶನೀಶ್ವರ ದೇವರ ಭಕ್ತಿಗೀತೆ ಬಿಡುಗಡೆ
ಇದೇ ವೇಳೆ ‘ಬನ್ನೂರು ಕ್ಷೇತ್ರದ ಶನಿದೇವ’ ಎಂಬ ಯುಟ್ಯೂಬ್ ಭಕ್ತಿಗೀತೆಯನ್ನು ಕಾರ್ಯಕ್ರಮದಲ್ಲಿ ಬಿಡುಗಡೆಗೊಳಿಸಲಾಯಿತು. ಶಿವಮಣಿ ಯುಟ್ಯೂಬ್ ನಲ್ಲಿ ಇದು ಬಿಡುಗಡೆಗೊಂಡಿತು.
ಅಘನ್ಯ ಪ್ರಾರ್ಥಿಸಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯೆ ಶ್ರೀಶ ವಾಸವಿ ಸ್ವಾಗತಿಸಿ, ನವನೀತ್ ರೈ ಅರೆಬೆಟ್ಟಗುತ್ತು ವಂದಿಸಿದರು. ಗಂಗಾಧರ ಭಂಡಾರಿಯವರ ಪುತ್ರಿ ಅಕ್ಷತಾ ಪ್ರದೀಪ್ ಆಳ್ವ ಕಾರ್ಯಕ್ರಮ ನಿರೂಪಿಸಿದರು. ಶೀನಪ್ಪ ಭಂಡಾರಿಯವರ ಕುಟುಂಬಿಕರು, ಸಂಬಂಧಿಕರು, ಅಭಿಮಾನಿಗಳು, ಗಂಗಾಧರ ಭಂಡಾರಿಯವರ ಅಭಿಮಾನಿಗಳು, ಕಲಾಭಿಮಾನಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.