ಕಡಬ : ಸವಣೂರಿನ ಪುಣ್ಚಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನದ ಹೊಸ್ತಿಲಲ್ಲಿದೆ. ಪ್ರಸ್ತುತ 97 ಸಂವತ್ಸರಗಳನ್ನು ದಾಟಿ ಸಪ್ತನವತಿ ಸಂಭ್ರಮದ ಆಚರಣೆಗೆ ಸನ್ನದ್ದವಾಗುತ್ತಿದೆ. ಹಳ್ಳಿಯಲ್ಲಿರುವ ಈ ಪುಟ್ಟ ಶಾಲೆಯನ್ನು ಊರಿನ ಜನರು ಕೂಡ ಬಹಳವಾಗಿ ಪ್ರೀತಿಸುತ್ತಿದ್ದಾರೆ. ಊರಿನ ಸರ್ವರ ಅಭಿಮಾನದಿಂದ ಶಾಲೆಯ ಕೆಲಸಗಳು ಚೆನ್ನಾಗಿ ನಡೆಯುತ್ತಿದೆ.ಊರಿನ ಗಣ್ಯರು, ಹಿರಿಯರು, ದಾನಿಗಳು ಶಾಲೆಯನ್ನು ಊರಿನ ಕೇಂದ್ರವಾಗಿ ಅಭಿವೃದ್ಧಿಪಡಿಸುತ್ತಿರುವುದು ಈ ಶಾಲೆಯ ವೈಶಿಷ್ಟ್ಯ ವೆಂದೇ ಹೇಳಬಹುದು.
ಇದೀಗ ಹೊಸತೊಂದು ಮೈಲಿಗಲ್ಲು ಸಾಧಿಸಿ ಪ್ರಗತಿಯ ಪಥದಲ್ಲಿ ಸಾಗುತ್ತಿರುವುದರ ಜೊತೆಗೆ ಹಲವಾರು ವರ್ಷಗಳ ಕನಸು ನನಸಾದ ಖುಷಿ ಈ ಊರಿನವರದು. ಹಗಲಿರುಳೆನ್ನದೆ ಸುಮಾರು ನಾಲ್ಕು ದಿನಗಳ ನಿರಂತರ ಶ್ರಮದ ಫಲವಾಗಿ ಪುಣ್ಚಪ್ಪಾಡಿ ಶಾಲೆಯ ಪದವು ಮೈದಾನದ ಬಳಿಯಿದ್ದ ಖಾಲಿ ಜಾಗವು ಇಂದು ಅಡಿಕೆ ಗಿಡಗಳ ತೋಟವಾಗಿ ಪರಿವರ್ತನೆಯಾಯಿತು.
ಇಂದು ಸುಮಾರು 750 ಅಡಿಕೆ ಗಿಡಗಳನ್ನೊಳಗೊಂಡಂತೆ ವ್ಯವಸ್ಥಿತ ನೀರಾವರಿ ವ್ಯವಸ್ಥೆಯೊಂದಿಗೆ ತೋಟ ಕಂಗೊಳಿಸುತ್ತಿದೆ. ಆದರೆ ಇದರ ಹಿಂದಿನ ಶ್ರಮಿಕ ಕೈಗಳೇ ಈ ತೋಟದ ಹಿಂದಿನ ಶಕ್ತಿಗಳು. ಈ ಶ್ರಮಿಕರೊಂದಿಗೆ ಈ ಅಡಿಕೆ ತೋಟ ನಿರ್ಮಾಣದ ಯಶಸ್ವಿಗೆ ಕೈಜೋಡಿಸಿ ಹಗಲಿರುಳು ಅವಿರತ ಶ್ರಮದಾನದ ಮೂಲಕ ಶ್ರಮಿಸಿದವರು ಗ್ರಾಮ ಪಂಚಾಯತ್ ಸದಸ್ಯರು, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ, ಪೋಷಕರು, ಹಿರಿಯ ವಿದ್ಯಾರ್ಥಿಗಳು,ಗ್ರಾಮಸ್ಥರು, ಎನ್. ಎಸ್. ಎಸ್ ವಿದ್ಯಾರ್ಥಿಗಳು ಮತ್ತು ಶಾಲೆಯ ಮೇಲೆ ಪ್ರೀತಿಯಿಟ್ಟು ಅಡಿಕೆ ತೋಟ ನಿರ್ಮಾಣಕ್ಕೆ ಪರೋಕ್ಷವಾಗಿ ಸಹಕರಿಸಿದ ಅನೇಕ ಕೈಗಳು.
ಎರಡು ಕೈ ಸೇರಿದರೆ ಚಪ್ಪಾಳೆ ಎಂಬಂತೆ ಎಲ್ಲರ ತನು ಮನ ಧನ ದ ಸಹಕಾರದೊಂದಿಗೆ ಈ ಸಾಧನೆಯತ್ತ ಮುಂದಡಿಯಿಡಲು ಸಾಧ್ಯವಾಯಿತು ಎಂಬುದು ಶಾಲೆಯ ಹೆಮ್ಮೆ.