ಪುತ್ತೂರು : ವಿದ್ಯಾರ್ಥಿಗಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನ. 30 ರಂದು, 2024 – 25ನೇ ಶೈಕ್ಷಣಿಕ ವರ್ಷದ ಶಾಲಾ ವಾರ್ಷಿಕೋತ್ಸವನ್ನು ನೆಹರು ನಗರದಲ್ಲಿರುವ ವಿವೇಕಾನಂದ ಸೆಂಟ್ರಲ್ ಸ್ಕೂಲಿನಲ್ಲಿ ಆಚರಿಸಲಾಯಿತು.
ಧಾರ್ಮಿಕ ಶಿಕ್ಷಣ ತರಬೇತುದಾರರಾದ ಶಂಕರಿ ಶರ್ಮ ಮತ್ತು ಕೃಷ್ಣವೇಣಿ ಮುಳಿಯ ಇವರು ದೀಪ ಬೆಳಗಿಸುವುದರ ಮೂಲಕ ವಿದ್ಯಾರ್ಥಿಗಳ ಧಾರ್ಮಿಕ ಶಿಕ್ಷಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಕೆ. ಎಂ. ಕೃಷ್ಣ ಭಟ್ ಅವರು ವಹಿಸಿ ಮಾತನಾಡಿ, “ಇಂದಿನ ಶಿಕ್ಷಣದಲ್ಲಿ ಮಕ್ಕಳಿಗೆ ದೇಶದ ಸಂಸ್ಕೃತಿ ಮತ್ತು ಪರಂಪರೆಯನ್ನು ತಿಳಿಸುವ ಸಂಸ್ಕಾರಯುತ ಶಿಕ್ಷಣದ ಅಗತ್ಯವಿದೆ. ಈ ನಿಟ್ಟಿನಲ್ಲಿ, ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿರುವ ಎಲ್ಲಾ ಶಿಕ್ಷಣ
ಸಂಸ್ಥೆಗಳಲ್ಲೂ ಇಂತಹ ಮೌಲ್ಯಯುತ ಕಲಿಕೆಗೆ ಹೆಚ್ಚು ಒತ್ತು ನೀಡಲಾಗಿದೆ. ” ಎಂದರು. ಬಳಿಕ ಅವರು ಶಾಲೆಯ “ಪ್ರೇರಣಾ” ವಾರ್ಷಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಅಡ್ಯನಡ್ಕ ವಿ.ಎ.ಎಸ್.ಟಿ ಸೆಂಟರ್ ನ ಮಾಲೀಕರು ಹಾಗೂ ವಾರಣಾಶಿ ಡೆವಲಪ್ ಮೆಂಟ್ ಮತ್ತು ರಿಸರ್ಚ್ ಫೌಂಡೇಶನ್ ನ ಟ್ರಸ್ಟಿ ಅಶ್ವಿನಿ ಕೃಷ್ಣಮೂರ್ತಿ ಅವರು ಮಾತನಾಡಿ, ” ವಿದ್ಯಾರ್ಥಿಗಳಿಗೆ ಶಿಕ್ಷಕರೇ ದಾರಿದೀಪ. ಪೋಷಕರು ಮಕ್ಕಳ ಮುಂದೆ ಶಿಕ್ಷಕರನ್ನು ಎಂದಿಗೂ ನಿಂದಿಸಬಾರದು. ಮಕ್ಕಳ ಗೆಲುವನ್ನು ಪ್ರೋತ್ಸಾಹಿಸುವುದರ ಜೊತೆಗೆ, ಸೋಲನ್ನು ಎದುರಿಸುವ ಮನಃಸ್ಥೈರ್ಯವನ್ನು ಅವರಲ್ಲಿ ತುಂಬಬೇಕು” ಎಂದರು.
ವೇದಿಕೆಯಲ್ಲಿದ್ದ ವಿವೇಕಾನಂದ ವಿದ್ಯಾವರ್ಧಕ ಸಂಘದ ಉಪಾಧ್ಯಕ್ಷ ಸತೀಶ್ ರಾವ್, ಶಾಲಾ ಸಂಚಾಲಕ ಭರತ್ ಪೈ, ಪೋಷಕ ಸಂಘದ ಅಧ್ಯಕ್ಷರಾದ ಶ್ರೀಲತಾ, ಶೈಕ್ಷಣಿಕ ಸಲಹೆಗಾರರಾದ ಅನುರಾಧ ಶಿವರಾಮ್ ಶುಭನುಡಿಗಳನ್ನಾಡಿದರು.
ಶಾಲೆಗೆ ಉದಾರ ದೇಣಿಗೆಯನ್ನಿತ್ತು ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು. ಶಾಲಾ ಪ್ರಾಂಶುಪಾಲರಾದ ಸಿಂಧು ವಿ.ಜಿ ಶೈಕ್ಷಣಿಕ ವರ್ಷದ ವರದಿಯನ್ನು ಓದಿದರು.
ಕಾರ್ಯಕ್ರಮದಲ್ಲಿ, ಆಡಳಿತ ಮಂಡಳಿಯ ವತಿಯಿಂದ ಶಿಕ್ಷಕ – ಶಿಕ್ಷಕೇತರ ಸಿಬ್ಬಂದಿಗಳನ್ನು ಗೌರವಿಸಲಾಯಿತು.
ಕಳೆದ ವರ್ಷ ವಿಜ್ಞಾನ ಮಾದರಿಯಲ್ಲಿ ಸಾಧನೆ ಮಾಡಿದ 9ನೇ ತರಗತಿಯ ಆಪ್ತ ಚಂದ್ರಮತಿ ಮುಳಿಯ ಇವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಇವರು, ಟ್ಯುನೀಶಿಯಕ್ಕೆ ಹೋದ ತಮ್ಮ ಅನುಭವಗಳನ್ನು ಹಂಚಿಕೊಂಡರು. ನಂತರ ಈ ವರ್ಷದ ರಾಷ್ಟಮಟ್ಟದ ಸಾಧಕರನ್ನು ಹಾಗೂ ಕಲಿಕೆಯಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಮತ್ತು ಕ್ರೀಡೆಯಲ್ಲಿ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ವಸಂತಿ ಕೆ., ಶಾಲಾ ವಿದ್ಯಾರ್ಥಿ ನಾಯಕ ಪವನ್ ಕುಮಾರ್ ಉಪಸ್ಥಿತರಿದ್ದರು.
ಶಾಲಾ ಶಿಕ್ಷಕಿ ಶ್ರೀದೇವಿ ಹೆಗ್ಡೆ ಸ್ವಾಗತಿಸಿ, ಶಾಲಾ ವಿದ್ಯಾರ್ಥಿ ನಾಯಕಿ ಶ್ರೀಲಕ್ಷ್ಮಿ ವಂದಿಸಿದರು. 9ನೇ ತರಗತಿಯ ಮಿಹಿರ್ ಭಟ್,10ನೇ ತರಗತಿಯ ಧನ್ಯ ಶ್ರೀ, 8ನೇ ತರಗತಿಯ ಖುಷಿ ಅನೀಶ್, ಶಿಕ್ಷಕಿಯರಾದ ಲತಾ ಶಂಕರಿ ಮತ್ತು ಗೀತಾ ಇವರು ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿದ್ಯಾರ್ಥಿಗಳು ಪ್ರದರ್ಶಿಸಿದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.