ಪುತ್ತೂರು: ಜುವೆಲ್ಸ್ ಗ್ರೂಪ್ ನೇತೃತ್ವದಲ್ಲಿ, ಪುತ್ತೂರು ಚರ್ಚ್ ಆರೋಗ್ಯ ಆಯೋಗ, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆ ಮಂಗಳೂರು ಮತ್ತು ಇಂಡಿಯನ್ ಕ್ಯಾನ್ಸರ್ ಸೊಸೈಟಿ ಇವರ ಸಹಯೋಗದೊಂದಿಗೆ ಡಿ.1ರಂದು ಬೆಳಿಗ್ಗೆ 8.30ರಿಂದ ಮದ್ಯಾಹ್ನ 2.00ರವರೆಗೆ ಉಚಿತ ಕ್ಯಾನ್ಸರ್ ತಪಾಸಣೆ ಮತ್ತು ಮಾಹಿತಿ ಶಿಬಿರವು ಇಲ್ಲಿನ ಮಾಯಿದೇ ದೇವುಸ್ ಚರ್ಚ್ ಆವರಣದಲ್ಲಿ ನಡೆಯಿತು.
ಸುಮಾರು 238 ಜನರು ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಇದರಲ್ಲಿ 212 ಮಹಿಳೆಯರು ಗರ್ಭಕೋಶದ ಪರೀಕ್ಷೆ, 160 ಮಹಿಳೆಯರು ಸ್ತನ ಪರೀಕ್ಷೆ, 65 ಗಂಡಸರು ಬಾಯಿ ಮತ್ತು ಗಂಟಲು ತಪಾಸಣೆಯನ್ನು ಮಾಡಿಸಿಕೊಳ್ಳೋ ಮೂಲಕ ಶಿಬಿರದ ಸದುಪಯೋಗ ಪಡೆದುಕೊಂಡರು.
ಅಧ್ಯಕ್ಷತೆಯನ್ನು ವಹಿಸಿದ್ದ ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅತೀ ವಂ| ಡಾ|| ಪೀಟರ್ ಪೌಲ್ ಸಲ್ಮಾನ ಮಾತನಾಡಿ, ಅತ್ಯುತ್ತಮ ಕಾರ್ಯಕ್ರಮ ಏರ್ಪಡಿಸುತ್ತಿರುವಂತಹ ಜುವೆಲ್ಸ್ ಗ್ರೂಪ್‌ನ ಬಗ್ಗೆ ಅಭಿಮಾನ ವ್ಯಕ್ತಪಡಿಸಿ , ಸಮಾಜ ಕಾರ್ಯದಲ್ಲಿ ಸಂಘಟನೆಯೂ ಮಾಡುತ್ತಿರುವಂತಹ ನಿಸ್ವಾರ್ಥ ಸೇವೆಯನ್ನು ಪ್ರಶಂಶಿಸಿ, ಅಭಿನಂದನೆ ಸಲ್ಲಿಸಿದರು. ಕ್ಯಾನ್ಸರ್ ಕಾಯಿಲೆಯೂ ಗಂಭೀರ ಕಾಯಿಲೆಯಾಗಿದ್ದು, ಇದರ ಬಗ್ಗೆ ಎಚ್ಚರಿಕೆ ಹಾಗೂ ಮಾಹಿತಿಯನ್ನು ಪಡೆದುಕೊಳ್ಳುವುದು ಪ್ರಜ್ಞಾವಂತ ನಾಗರಿಕರ ಆದ್ಯ ಕರ್ತವ್ಯ ಎಂಬುದನ್ನು ತಿಳಿಸಿ, ಕಾರ್ಯಕ್ರಮದ ಯಶಸ್ಸಿಗೆ ಹಾರೈಸಿದರು.
ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು ಆಸ್ಪತ್ರೆಯ ನುರಿತ ಕಾನ್ಸರ್ ತಜ್ಞ ಡಾ.ರೋಹನ್ ಗಟ್ಟಿ, ಡಾ.ದಿನೇಶ್ ಶೇಟ್ ಹಾಗೂ ಡಾ.ಎಲ್ಲೋಯ್ ಸಲ್ದಾನ ಅವರು ಹಾಜರಿದ್ದು, ಕಾನ್ಸರ್ ಬಗ್ಗೆ ಜಾಗೃತಿ ಮತ್ತು ಮುಖ್ಯವಾಗಿ ಮಹಿಳೆಯರಿಗೆ ಬರುವ ರೋಗಗಳ ಬಗ್ಗೆ ವಿವರಣೆ ನೀಡಿದರು.
ಜುವೆಲ್ಸ್ ಗ್ರೂಪಿನ ಸದಸ್ಯೆ ಗ್ರೇಸಿ ಡಿಸೋಜ ಮಾತನಾಡಿ , ಕಾನ್ಸರ್ ಎಂಬುದು ಮಾರಣಾಂತಿಕ ರೋಗ ಅದರ ಬಗ್ಗೆ ತಿಳುವಳಿಕೆ ಪಡೆದರೆ ಹೇಗೆ ಮುಕ್ತಿ ಪಡೆಯಬಹುದು ಮತ್ತು ಈ ರೋಗ ಬರುವ ಮೊದಲೇ ಇದರ ಬಗ್ಗೆ ತಿಳುವಳಿಕೆ, ಮಾಹಿತಿ ನೀಡುವುದು ಅಗತ್ಯವೆಂದ ಅವರು, ಜುವೆಲ್ಸ್ ಗ್ರೂಪ್ 14 ಶಿಬಿರಗಳನ್ನು ಆಯೋಜಿಸಿಕೊಂಡಿರುತ್ತದೆ. ಸಂಘಟನೆಯ ಕಾರ್ಯ ಸಮಾಜದಲ್ಲಿ ಇತರರಿಗೆ ಪ್ರೇರಣೆಯಾಗಲಿ, ಕಾನ್ಸರ್ ರೋಗದಿಂದ ಬಳುಲುತ್ತಿರುವ ಜನರಿಗೆ ಸಹಾಯವಾಗಲಿ, ಜನರಿಗೆ ಈ ಬಗ್ಗೆ ಮಾಹಿತಿ ಹಾಗೂ ತಿಳುವಳಿಕೆ ನೀಡಿ, ಕಾನ್ಸರ್ ಮುಕ್ತ ಸಮಾಜವನ್ನು ರೂಪಿಸುವುದೇ ಜುವೆಲ್ಸ್ ಗ್ರೂಪಿನ ಧ್ಯೇಯವೆಂದರು.
ಜುವೆಲ್ಸ್ ಗ್ರೂಪಿನ ಸದಸ್ಯೆ ಟೀನಾ ಫೆರ್ನಾಂಡಿಸ್ ಧನ್ಯವಾದ ಸಮರ್ಪಿಸಿ, ಈ ಶಿಬಿರಕ್ಕೆ ಅತೀ ಪ್ರಾಮುಖ್ಯತೆ ನೀಡಿ ಶಿಬಿರವನ್ನು ಆಯೋಜಿಸಲು ಕಾರಣಕರ್ತರಾದ ಕಥೋಲಿಕ್ ಶಿಕ್ಷಣ ಮಂಡಳಿಯ ಕಾರ್ಯದರ್ಶಿ ವಂ| ಪ್ರವೀಣ್ ಲಿಯೋ ಲಸ್ರಾದೊ ಹಾಗೂ ಶಿಬಿರಕ್ಕೆ ಪ್ರೋತ್ಸಾಹ ನೀಡಿದ ಮಾಯ್ ದೆ ದೇವುಸ್ ಚರ್ಚ್‌ನ ಧರ್ಮಗುರುಗಳಾದ ವಂದನೀಯ ಲಾರೆನ್ಸ್ ಮಸ್ಕರೇನಸ್‌ರವರಿಗೆ ಧನ್ಯವಾದ ಅರ್ಪಿಸಿದರು. ಒಲಿವೇರಾ ಕ್ವಾಡ್ರಸ್‌ರವರು ನಿರ್ವಹಿಸಿದರು.