





ಸಂಸ್ಥೆ ಬೆಳೆಯಲು ಎಲ್ಲರ ಸಹಕಾರ ಅಗತ್ಯ-ಶಶಿಕುಮಾರ್ ರೈ ಬಾಲ್ಯೊಟ್ಟು


ಪುತ್ತೂರು: ಬೆಟ್ಟಂಪಾಡಿ ಗ್ರಾಮದ ಕಕ್ಕೂರು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನಿವೇಶನದ ಗುರುತು ಮುಹೂರ್ತ ಕಾರ್ಯಕ್ರಮ ಡಿ.5ರಂದು ಬೆಳಿಗ್ಗೆ ನಡೆಯಿತು. ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು ತೆಂಗಿನ ಕಾಯಿ ಒಡೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.





ಬಳಿಕ ಮಾತನಾಡಿದ ಅವರು ಭಾರತ ಹಾಲು ಉತ್ಪಾದನೆಯಲ್ಲಿ ಪ್ರಥಮ ಸ್ಥಾನ ಪಡೆದಿದೆ. ಕಕ್ಕೂರಿನ ಈ ಪರಿಸರದಲ್ಲಿ ಸ್ಥಳಿಯರ ಸಹಕಾರದಲ್ಲಿ ಸಂಘ ಸ್ಥಾಪನೆ ಆಗಿದೆ. ಹಾಲಿನ ಉತ್ಪಾದನೆ ಕಡಿಮೆ ಆಗುತ್ತಿರುವ ಸಂದರ್ಭದಲ್ಲಿ ಇಲ್ಲಿ ಸಂಘ ಆರಂಭ ಮಾಡಿದ್ದು ಉತ್ತಮ ಬೆಳವಣಿಗೆ. ನಿವೇಶನವನ್ನು ಸಮತಟ್ಟು ಮಾಡುವ ಕೆಲಸಕ್ಕೆ ಇಂದು ಮುಹೂರ್ತ ಮಾಡಲಾಗುತ್ತಿದೆ. ಒಂದು ಸಂಸ್ಥೆ ಬೆಳೆಯಲು ಎಲ್ಲರ ಸಹಕಾರ ಅಗತ್ಯ. ಎಂದು ಹೇಳಿ ಸಂಘಕ್ಕೆ ರೂ.25,000 ದೇಣಿಗೆ ನೀಡುವುದಾಗಿ ಘೋಷಿಸಿದರು. ಸಂಘದ ಕಟ್ಟಡ ಸಮಿತಿ ಸಂಚಾಲಕ ಅಚ್ಯುತ ಭಟ್ ಕಕ್ಕೂರು ಹೂಗುಚ್ಚ ನೀಡಿ ಸ್ವಾಗತಿಸಿದರು.
ಮುಂಡೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ಜಯಪ್ರಕಾಶ್ ರೈ ಚೆಲ್ಯಡ್ಕ, ಕಕ್ಕೂರು ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷೆ ಶ್ರೀದೇವಿ ರೈ, ಉಪಾಧ್ಯಕ್ಷೆ ರಜಿತಾ ಎಲ್. ಗೌಡ, ಕಾರ್ಯದರ್ಶಿ ಶಾರದಾ ಕೆ., ನಿರ್ದೇಶಕರಾದ ಕುಸುಮಾವತಿ, ಪ್ರೇಮಲತಾ ಜೆ.ರೈ, ಪ್ರೀತಿತಾ ರೈ, ನಳಿನಿ ಟಿ, ಅನ್ನಪೂರ್ಣ ಬಿ., ರಾಜೇಶ್ವರಿ ಬಿ., ನವಿನಾ ಡಿ. ರೈ, ಸವಿತಾ, ರವಿಕಲಾ, ಲಲಿತಾ ಹಾಗೂ ಸಂಘದ ಸದಸ್ಯರು, ಸ್ಥಳೀಯರು ಉಪಸ್ಥಿತರಿದ್ದರು. ಸಂಘದ ನಿರ್ದೇಶಕಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಇಬ್ಬರು ದಾನಿಗಳಿಂದ ಸಂಘಕ್ಕೆ ನಿವೇಶನ
ಸಂಘದ ನೂತನ ಕಟ್ಟಡ ನಿರ್ಮಾಣಕ್ಕೆ ಸ್ಥಳೀಯರಾದ ಗಣಪತಿ ಭಟ್ ಕಕ್ಕೂರು ಹಾಗೂ ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಲಿಂಗಪ್ಪ ಗೌಡ ಕಕ್ಕೂರುರವರು ನಿವೇಶನವನ್ನು ದಾನವಾಗಿ ನೀಡಿದ್ದರು.










