ಬೆಂಗಳೂರು:2022ರಲ್ಲಿ ನಡೆದಿದ್ದ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ(ಎನ್ಐಎ)ದ ಅಧಿಕಾರಿಗಳು, ಕರ್ನಾಟಕ ಮತ್ತು ತಮಿಳುನಾಡಿನ ವಿವಿಧ ಕಡೆಗಳಲ್ಲಿ ದ.5ರ ನಸುಕಿನ ವೇಳೆ ಏಕಕಾಲದಲ್ಲಿ ದಾಳಿ ನಡೆಸಿ, ಶೋಧ ನಡೆಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ತಲೆಮರೆಸಿಕೊಂಡಿರುವ ಆರೋಪಿಗಳು, ಶಂಕಿತರು ಹಾಗೂ ಅವರ ಸಹಚರರ ಮನೆಗಳ ಮೇಲೆ ದಾಳಿ ನಡೆಸಿ ಡಿಜಿಟಲ್ ಉಪಕರಣಗಳು ಸೇರಿದಂತೆ ವಿವಿಧ ದಾಖಲೆ ಜಪ್ತಿ ಮಾಡಲಾಗಿದೆ ಎಂದು ಎನ್ಐಎ ಮೂಲಗಳು ತಿಳಿಸಿವೆ.ನ್ಯಾಯಾಲಯದಿಂದ ಅನುಮತಿ ಪಡೆದುಕೊಂಡು ಬಂದಿದ್ದ ಎನ್ಐಎ ಅಧಿಕಾರಿಗಳು, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಹಾಗೂ ಬೆಳ್ತಂಗಡಿ ತಾಲ್ಲೂಕಿನಲ್ಲಿ ತಪಾಸಣೆ ನಡೆಸಿದರು.ಕೊಡಗು ಜಿಲ್ಲೆಯ ಸೋಮವಾರಪೇಟೆ, ಸುಂಟಿಕೊಪ್ಪ, ಬೆಂಗಳೂರು ನಗರ ಸೇರಿದಂತೆ ರಾಜ್ಯದ 16 ಕಡೆಗಳಲ್ಲಿ ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ಶಂಕಿತರ ಮನೆಗಳ ಮೇಲೆ ದಾಳಿ ನಡೆಸಿ ಶೋಽಸಿದರು ಎಂದು ತಿಳಿದು ಬಂದಿದೆ.ಆರೋಪಿಗಳ ಸಹಚರರನ್ನು ವಿಚಾರಣೆಗೆ ಒಳಪಡಿಸಿ ಮಾಹಿತಿ ಕಲೆ ಹಾಕಲಾಗಿದೆ.ಯಾರನ್ನೂ ವಶಕ್ಕೆ ಪಡೆದಿಲ್ಲ ಎಂದು ಮೂಲಗಳು ತಿಳಿಸಿವೆ.ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಇಬ್ಬರು ಆರೋಪಿಗಳಿಗೆ ಕೊಡಗು ಜಿಲ್ಲೆಯ ಸಂಪರ್ಕವಿರುವ ಮಾಹಿತಿ ಎನ್ಐಎಗೆ ಸಿಕ್ಕಿತ್ತು ಎಂದು ಗೊತ್ತಾಗಿದೆ.
ಏಳು ಆರೋಪಿಗಳಿಗೆ ಶೋಧ:
ಪ್ರಕರಣ ಸಂಬಂಧ ಇದುವರೆಗೆ 19 ಆರೋಪಿಗಳನ್ನು ಬಂಧಿಸಲಾಗಿದೆ.ತಲೆಮರೆಸಿಕೊಂಡಿರುವ ಆರೋಪಿಗಳೂ ಸೇರಿದಂತೆ ಒಟ್ಟು 23 ಮಂದಿ ವಿರುದ್ಧ ಈಗಾಗಲೇ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿದೆ.ತಲೆಮರೆಸಿಕೊಂಡಿರುವ 7 ಆರೋಪಿಗಳ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದೆ.ಆರೋಪಿಗಳ ಸುಳಿವು ನೀಡಿದವರಿಗೆ ಬಹುಮಾನ ಘೋಷಿಸಲಾಗಿದೆ.
ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ 2022ರ ಜುಲೈ 26ರಂದು ಪ್ರವೀಣ್ ನೆಟ್ಟಾರು ಅವರನ್ನು ಹತ್ಯೆ ಮಾಡಲಾಗಿತ್ತು.ಆರಂಭದಲ್ಲಿ ಬೆಳ್ಳಾರೆ ಪೊಲೀಸರು ಪ್ರಕರಣದ ತನಿಖೆ ನಡೆಸಿದ್ದರು.ಬಳಿಕ ಪ್ರಕರಣವನ್ನು ಎನ್ಐಎಗೆ ವಹಿಸಲಾಗಿತ್ತು.2022ರ ಆಗಸ್ಟ್ 4ರಂದು ಎನ್ಐಎ ಪ್ರಕರಣದ ತನಿಖೆಯನ್ನು ವಹಿಸಿಕೊಂಡಿತ್ತು.ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ಉದ್ದೇಶದಿಂದ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರು ಪ್ರವೀಣ್ ಅವರನ್ನು ಹತ್ಯೆ ಮಾಡಿದ್ದರು ಎಂಬುದು ತನಿಖೆಯಿಂದ ಗೊತ್ತಾಗಿತ್ತು ಎಂದು ಎನ್ಐಎ ಹೇಳಿದೆ.
ದೋಷಾರೋಪ ಪಟ್ಟಿ ಸಲ್ಲಿಕೆ:
ಆರೋಪಿಗಳಾದ ಮುಸ್ತಫ ಪೈಚಾರ್ ಹಾಗೂ ಎಚ್.ವೈ.ರಿಯಾಜ್ ವಿರುದ್ಧ ಎನ್ಐಎ ಕಳೆದ ಆಗಸ್ಟ್ 4ರಂದು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.240 ಸಾಕ್ಷಿಗಳ ಹೇಳಿಕೆ ಸೇರಿದಂತೆ 1500 ಪುಟಗಳ ದೋಷಾರೋಪ ಪಟ್ಟಿ ಸಲ್ಲಿಕೆ ಮಾಡಲಾಗಿತ್ತು.ಜನರಲ್ಲಿ ಭಯ ಹುಟ್ಟಿಸುವ ಉದ್ದೇಶದಿಂದ ಪ್ರವೀಣ್ ನೆಟ್ಟಾರು ಅವರನ್ನು ಸಾರ್ವಜನಿಕ ಸ್ಥಳದಲ್ಲಿ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಲಾಗಿತ್ತು ಎಂದೂ ದೋಷಾರೋಪ ಪಟ್ಟಿಯಲ್ಲಿ ಉಲ್ಲೇಖಿಸಲಾಗಿತ್ತು.
ಉಪ್ಪಿನಂಗಡಿಯಲ್ಲಿ ಮನೆ ತಪಾಸಣೆ
ಪ್ರವೀಣ್ ನೆಟ್ಟಾರ್ ಹತ್ಯೆ ಸಹಿತ ಗಂಭೀರ ಪ್ರಕರಣದಲ್ಲಿ ಭಾಗಿಗಳಾಗಿ ತಲೆಮರೆಸಿಕೊಂಡಿರುವ 34 ನೇ ನೆಕ್ಕಿಲಾಡಿ ನಿವಾಸಿ ಮಸೂದ್ ಅಗ್ನಾಡಿ ಹಾಗೂ ಉಪ್ಪಿನಂಗಡಿ ಗ್ರಾಮದ ಮಠದ ಹಿರ್ತಡ್ಕ ಬಳಿಯ ನಿವಾಸಿ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಎಂಬಿಬ್ಬರನ್ನು ಪತ್ತೆ ಹಚ್ಚಲು ಎನ್ಐಎ ತಂಡ ಗುರುವಾರ ನಸುಕಿನಲ್ಲಿ ತಪಾಸಣಾ ಕಾರ್ಯಾಚರಣೆ ನಡೆಸಿತು.ಪ್ರವೀಣ್ ನೆಟ್ಟಾರ್ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಘೋಷಿತ ಆರೋಪಿ ಮಸೂದ್ ಅಗ್ನಾಡಿಯ ಇರುವಿಕೆಯನ್ನು ಅಂದಾಜಿಸಿ ಉಪ್ಪಿನಂಗಡಿ ಲಕ್ಷ್ಮೀನಗರದಲ್ಲಿನ ಆತನ ಅಣ್ಣನ ಮನೆಗೆ ಆಗಮಿಸಿದ ಅಧಿಕಾರಿಗಳ ತಂಡ ಮಸೂದ್ ಅಗ್ನಾಡಿ ಈ ವಿಳಾಸದಲ್ಲಿ ಇರುವ ಬಗ್ಗೆ ವಿಚಾರಣೆ ನಡೆಸಿತು. ಆ ವೇಳೆ ಇದು ಮಸೂದ್ ಮನೆಯಲ್ಲ. ಆತನ ಅಣ್ಣನ ಮನೆ ಎಂದೂ ಆತನ ಮನೆ ನೆಕ್ಕಿಲಾಡಿ ಗ್ರಾಮದಲ್ಲಿರುವುದಾಗಿ ತಿಳಿಸಿದ ಬಳಿಕ 7 ಮಂದಿಯನ್ನು ಒಳಗೊಂಡ ಎನ್ಐಎ ತಂಡ ನಿರ್ಗಮಿಸಿದೆ.
ಇನ್ನೊಂದೆಡೆ ಅಬ್ದುಲ್ ಖಾದರ್ ಯಾನೆ ಮುಸ್ತಾಫ ಕೊಪ್ಪಳ ಎಂಬಾತನನ್ನು ನಿರೀಕ್ಷಿಸಿ ಮಠದ ಹಿರ್ತಡ್ಕ ಬಳಿಯಲ್ಲಿರುವ ಆತನ ಮನೆಗೆ ಉಪ್ಪಿನಂಗಡಿ ಪೊಲೀಸರ ಸಹಾಯದಿಂದ ತಪಾಸಣೆ ನಡೆಸಿದ ಎನ್ಐಎ ತಂಡಕ್ಕೆ ಶಂಕಿತ ಆರೋಪಿಯು ಲಭಿಸದೆ ಇದ್ದ ಕಾರಣ ಅಲ್ಲಿಂದಲೂ ನಿರ್ಗಮಿಸಿದೆ. ಕೊಲೆಯತ್ನ ಪ್ರಕರಣವೊಂದಕ್ಕೆ ಸಂಬಂಧಿಸಿ ಇಲ್ಲಿಗೆ ಎನ್ಐಎ ತಂಡ ಆಗಮಿಸಿದೆ ಎನ್ನಲಾಗಿದೆ.
ಮಸೂದ್ ಅಗ್ನಾಡಿಯ ಪತ್ತೆಗಾಗಿ ಎನ್ಐಎ ಈಗಾಗಲೇ ಹಲವು ಬಾರಿ ಕಾರ್ಯಾಚರಣೆ ನಡೆಸಿದ್ದು, ನೆಕ್ಕಿಲಾಡಿಯಲ್ಲಿರುವ ಆತನ ಮನೆಯನ್ನು ಜಪ್ತಿ ಮಾಡುವ ಸಲುವಾಗಿ ಎರಡು ಬಾರಿ ನೊಟೀಸು ಜಾರಿ ಮಾಡಿತ್ತು. ಮಾತ್ರವಲ್ಲದೆ ಸಾರ್ವಜನಿಕ ಬಿತ್ತಿ ಪತ್ರದ ಮೂಲಕ ಪ್ರಕಟಣೆ ಹೊರಡಿಸಿ ಆತನ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನವನ್ನೂ ಘೋಷಿಸಿತ್ತು.
ಕೆಯ್ಯೂರಿನಲ್ಲೂ ತನಿಖೆ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣದ ಆರೋಪಿಗಳಿಗೆ ಸಹಕಾರ ನೀಡಿದ್ದಾರೆ ಎನ್ನಲಾದ ಅಬೂಬಕ್ಕರ್ ಸಿದ್ದಿಕ್ರವರ ಪತ್ನಿ ವಾಸವಾಗಿರುವ ಕೆಯ್ಯೂರಿನ ಮನೆಗೆ ಎನ್ಐಎ ಅಧಿಕಾರಿಗಳು ಆಗಮಿಸಿ ತನಿಖೆ ನಡೆಸಿದ ಘಟನೆ ದ.5 ರಂದು ಬೆಳಿಗ್ಗೆ ನಡೆದಿದೆ. ಕೆಯ್ಯೂರು ಕೆಪಿಎಸ್ ಶಾಲಾ ಬಳಿಯ ಬಾಡಿಗೆ ಮನೆಯೊಂದರಲ್ಲಿ ಅಬೂಬಕ್ಕರ್ ಸಿದ್ದಿಕ್ರವರ ಪತ್ನಿ ವಾಸವಾಗಿದ್ದಾರೆ ಎನ್ನಲಾಗಿದ್ದು ಅಲ್ಲಿಗೆ ಆಗಮಿಸಿದ ಎನ್ಐಎ ಅಧಿಕಾರಿಗಳು ತನಿಖೆ ನಡೆಸಿದ್ದಾರೆ. ಇದಲ್ಲದೆ ಸಿದ್ದಿಕ್ರವರ ಸಹೋದರನೋರ್ವ ಕೆಯ್ಯೂರಿನ ಅರಿಕ್ಕಿಲದಲ್ಲಿ ವಾಸವಾಗಿದ್ದು ಅಲ್ಲಿಗೂ ಆಗಮಿಸಿದ ಅಧಿಕಾರಿಗಳು ತನಿಖೆ ನಡೆಸಿದ್ದಾರೆ.