ಪುತ್ತೂರು: ಕೆಲವು ಸಂಘಟನೆಗಳು ಪ್ರಾರಂಭವಾಗಿ ಕೆಲವೇ ದಿನಗಳಲ್ಲಿ ತನ್ನ ಅಸ್ತಿತ್ವ ಕಳೆದುಕೊಳ್ಳುತ್ತದೆ. ಆದರೆ ನಮ್ಮೂರು ನಮ್ಮವರು ಮೈಂದಡ್ಕ ಸಂಘಟನೆ ತನ್ನ ಹೆಸರೇ ಸೂಚಿಸುವಂತೆ ಎಲ್ಲಾ ಜಾತಿ ಧರ್ಮದವರನ್ನು ಒಗ್ಗೂಡಿಸಿಕೊಂಡು 18 ವರ್ಷಗಳಿಂದ ತನ್ನದೇ ಆದ ಕಾರ್ಯ ಶೈಲಿಯಿಂದ ತನ್ನ ಅಸ್ತಿತ್ವ ಉಳಿಸಿಕೊಂಡು ಬಂದಿರುವುದು ಶ್ಲಾಘನೀಯ ಎಂದು ಉಪ್ಪಿನಂಗಡಿಯ ವೈದ್ಯ ಡಾ. ಸುಪ್ರೀತ್ ಜೆ ಲೋಬೋ ಹೇಳಿದರು.
ಅವರು ನಮ್ಮೂರು ನಮ್ಮವರು ಮೈಂದಡ್ಕ ಸಂಘಟನೆ ಇದರ ವತಿಯಿಂದ 34 ನೆಕ್ಕಿಲಾಡಿಯ ಮೈಂದಡ್ಕ ಮೈದಾನದಲ್ಲಿ ನಡೆದ ಕ್ರೀಡಾಕೂಟ, ನಮ್ಮೂರ ಸನ್ಮಾನ, ವಾರ್ಷಿಕ ಮಹಾಸಭೆ ‘ಪರ್ಬ 2024’ರ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈ ದೀಪ ಪ್ರಜ್ವಲನಗೊಳಿಸಿ ಸಮಾರಂಭ ಉದ್ಘಾಟಿಸಿದರು. ನೆಕ್ಕಿಲಾಡಿಯ ಉದ್ಯಮಿ ಜಾನ್ ಕೆನ್ಯೂಟ್ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಉಪ್ಪಿನಂಗಡಿಯ ಶ್ರೀರಾಮ ಶಾಲೆಯ ಸಂಚಾಲಕ ಯು.ಜಿ. ರಾಧ ಸಂಘಟನೆಯೊಂದಿಗಿನ ತನ್ನ ಒಡನಾಟ ನೆನಪಿಸಿಕೊಂಡರು.
ಗ್ರಾ.ಪಂ. ನಿಕಟಪೂರ್ವಾಧ್ಯಕ್ಷ ಪ್ರಶಾಂತ್ ಶಿವಾಜಿನಗರ, ಉಪಾಧ್ಯಕ್ಷ ಹರೀಶ್ ದರ್ಬೆ, ಸಂಸ್ಥೆಯ ಉಪಾಧ್ಯಕ್ಷ ಹೊನ್ನಪ್ಪ ನಾಯ್ಕ ಮತ್ತು ಕಾರ್ಯದರ್ಶಿ ಪ್ರವೀಣ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ ನಾಯ್ಕ ಅಧ್ಯಕ್ಷತೆ ವಹಿಸಿದ್ದರು.
ಕ್ರೀಡಾ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದ ವಿಜೇತ್ ಕುಮಾರ್ ಜೈನ್ ಹಾಗೂ ವರದರಾಜ್ ಅವರನ್ನು ನಮ್ಮೂರ ಸನ್ಮಾನ ನೀಡಿ ಗೌರವಿಸಲಾಯಿತು.
ಮೂರು ಹೆಣ್ಣು ಮಕ್ಕಳಿಗೆ ಸಂಘಟನೆಯ ವತಿಯಿಂದ ಅಂಚೆ ಇಲಾಖೆಯಲ್ಲಿ ತೆರೆದ ಸುಕನ್ಯಾ ಉಳಿತಾಯ ಖಾತೆಯ ಪಾಸ್ ಪುಸ್ತಕಗಳನ್ನು ಮಕ್ಕಳ ಪೋಷಕರಿಗೆ ಹಸ್ತಾಂತರಿಸಲಾಯತು. ಉಪ್ಪಿನಂಗಡಿ
ಆರೋಗ್ಯ ಇಲಾಖೆಯ ವತಿಯಿಂದ ಮಧುಮೇಹ, ರಕ್ತದೊತ್ತಡ ಹಾಗೂ ಅನೀಮಿಯ ರೋಗದ ತಪಾಸಣೆಯ ಶಿಬಿರ ಆಯೋಜಿಸಲಾಗಿತ್ತು. ಸುಮಾರು 93 ಮಂದಿ ಈ ಶಿಬಿರದ ಪ್ರಯೋಜನ ಪಡೆದುಕೊಂಡರು.
ಊರಿನ ನಾಗರಿಕರಿಗೆ ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಅಂಗನವಾಡಿ ಪುಟಾಣಿಗಳು ಹಾಗೂ ವಿದ್ಯಾರ್ಥಿನಿಯರು ವಿವಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಸಭಾ ಕಾರ್ಯಕ್ರಮದ ನಂತರ ಸಂಸ್ಥೆಯ ನೂತನ ಪದಾಧಿಕಾರಿಗಳ ಆಯ್ಕೆ ನಡೆದು ಮುಂದಿನ ಒಂದು ವರ್ಷದ ಅವಧಿಗೆ ಈ ಹಿಂದಿನ ಸಾಲಿನ ಪದಾಧಿಕಾರಿಗಳನ್ನೇ ಮುಂದುವರಿಸಲು ನಿರ್ಣಯಿಸಲಾಯಿತು. ಬಾಲಕೃಷ್ಣ ತಾಳಹಿತ್ಲು ಸ್ವಾಗತಿಸಿ, ಪ್ರದೀಪ್ ತಾಳೆಹಿತ್ಲು ವಂದಿಸಿದರು. ಕಾರ್ಯದರ್ಶಿ ಪ್ರವೀಣ್ ವರದಿ ವಾಚಿಸಿ, ಕೋಶಾಧಿಕಾರಿ ಮೆಲ್ಕಾಂ ಸಂದೇಶ್ ಲೆಕ್ಕಪತ್ರ ಮಂಡಿಸಿದರು.
ಸತೀಶ್ ದರ್ಬೆ, ವಿನೂತ್, ಸಚಿನ್ ಇಂದಾಜೆ, ದಿನೇಶ್ ದರ್ಬೆ, ಶೋಭಾ ತಾಳೆಹಿತ್ಲು, ಪೂರ್ಣಿಮಾ, ಬೇಬಿ, ಗೀತಾ, ನವೀನ್, ತ್ರಿವಿಕ್ರಮ್ , ಅಶ್ವಿನ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು