ಪುತ್ತೂರು; ಪುರಾತನ ಪ್ರಸಿದ್ದ ಕೆಮ್ಮಿಂಜೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ವಾರ್ಷಿಕ ಜಾತ್ರೋತ್ಸವದ ಅಂಗವಾಗಿ ಡಿ.7ರ ಷಷ್ಠಿಯಂದು ದೇವರ ದರ್ಶನ ಬಲಿ, ಬಟ್ಟಲು ಕಾಣಿಕೆ ನಡೆಯಿತು.
ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಬೆಳಿಗ್ಗೆ ದೇವರ ಬಲಿ ಹೊರಟು ಷಷ್ಠಿ ಮಹೋತ್ಸವ, ದೇವರ ಪಲ್ಲಕಿ ಉತ್ಸವ, ದರ್ಶನ ಬಲಿ ನಡೆದು ರಾಜಾಂಗಣದಲ್ಲಿ ಬಟ್ಟಲು ಕಾಣಿಕೆ ನಡೆಯಿತು. ನಂತರ ಕೆಮ್ಮಿಂಜೆ ಗ್ರಾಮ ದೈವ ಶಿರಾಡಿ ದೈವದ ಕಿರುವಾಳು ಬೀಳ್ಕೊಡುಗೆ ನಡೆದು ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಷಷ್ಠಿ ಮಹೋತ್ಸವದಲ್ಲಿ ವಿಶೇಷವಾಗಿ ಷಷ್ಠಿ ವೃತಧಾರಿಗಳಿಗೆ ಮಧ್ಯಾಹ್ನ ಅನ್ನದಾನವು ಪ್ರತ್ಯೇಕವಾಗಿ ವ್ಯವಸ್ಥಿತ ರೀತಿಯಲ್ಲಿ ಕಲ್ಪಿಸಲಾಗಿತ್ತು.
ದೇವಸ್ಥಾನದ ಆಡಳಿತಾಧಿಕಾರಿ ಸುಲೋಚನಾ ಪಿ.ಕೆ., ಉತ್ಸವ ಸಮಿತಿ ಅಧ್ಯಕ್ಷ ಕೇಶವ ಪೂಜಾರಿ ಬೆದ್ರಾಳ, ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಸುಬ್ರಹ್ಮಣ್ಯ ಬಳ್ಳಕ್ಕುರಾಯ, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಧಾರ್ಮಿಕ, ಸಾಮಾಜಿಕ, ರಾಜಕೀಯ ಸಂಘ-ಸಂಸ್ಥೆಗಳ ಮುಖಂಡರುಗಳು ಸೇರಿದಂತೆ ಊರ, ಪರವೂರ ಸಹಸ್ರರಾರು ಮಂದಿ ಭಕ್ತಾದಿಗಳು ಷಷ್ಠಿ ಮಹೋತ್ಸವದಲ್ಲಿ ಭಾಗವಹಿಸಿದರು.
ಸಂಜೆ ದೈವಗಳ ಭಂಡಾರ ತೆಗೆದು ರಂಗಪೂಜೆ ವೈದಿಕ ಮಂತ್ರಾಕ್ಷತೆ ಹಾಗೂ ಕ್ಷೇತ್ರದ ದೈವಗಳಿಗೆ ನೇಮೋತ್ಸವ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಸಂಜೆ ಕರ್ನಾಟಕ ಶಾಸ್ತ್ರೀಯ ಸಂಗೀತಾ ಕಾರ್ಯಕ್ರಮ ನಡೆಯಲಿದೆ. ಹಾಡುಗಾರಿಕೆಯಲ್ಲಿ ಪ್ರಾರ್ಥನಾ ಬಿ., ಸಹಗಾಯನದಲ್ಲಿ ಆರಾಧನಾ ಬಿ., ಪಿಟೀಲು ತನ್ಮಯೀ ಉಪ್ಪಂಗಳ ಹಾಗೂ ಮೃದಂಗದಲ್ಲಿ ಕುಮಾರ ಪ್ರಣವ್ ಸುಬ್ರಹ್ಮಣ್ಯ ಬೆಂಗಳೂರು ಸಹಕರಿಸಲಿದ್ದಾರೆ.