ಹಣ ಹೂಡಿಕೆ ಯೋಜನೆ ಮೂಲಕ ಲಕ್ಷಾಂತರ ರೂ.ವಂಚನೆ, ಜೀವ ಬೆದರಿಕೆ ಪ್ರಕರಣ-ತಲೆ ಮರೆಸಿಕೊಂಡ ವಾರಂಟ್ ಆರೋಪಿಗಳ ಪೈಕಿ ಓರ್ವನ ಬಂಧನ

0

ಪುತ್ತೂರು:ಹಣ ಹೂಡಿಕೆಯ ಯೋಜನೆಯ ಮೂಲಕ ಬೆಳ್ತಂಗಡಿಯ ಕಲ್ಲುಗುಡ್ಡೆಯ ವ್ಯಕ್ತಿಯೊಬ್ಬರಿಗೆ ಲಕ್ಷಾಂತರ ರೂಪಾಯಿ ವಂಚನೆ ಮಾಡಿ ಜೀವ ಬೆದರಿಕೆಯೊಡ್ಡಿರುವ ಕುರಿತು ವರ್ಷಗಳ ಹಿಂದೆ ನಡೆದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯದಲ್ಲಿ ವಿಚಾರಣೆಗೆ ಕಳೆದ 5 ವರ್ಷದಿಂದ ತಲೆಮರೆಸಿಕೊಂಡಿದ್ದ ಆರೋಪಿಗಳ ಪೈಕಿ ಓರ್ವನನ್ನು ಪುತ್ತೂರು ಪೊಲೀಸರು ಬಂಧಿಸಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಧರ್ಮಪುರ ಗ್ರಾಮದ ಸಕ್ಕಾರ ನಿವಾಸಿ ಸೋಮೇಶ್ವರ(38.ವ) ಬಂಧಿತ ಆರೋಪಿ.ಬೆಳ್ತಂಗಡಿ ತಾಲೂಕಿನ ಕಲ್ಲಗುಡ್ಡೆ ನಿವಾಸಿ ಗಣೇಶ್ ಅವರು ಕುಶಾಲನಗರದಲ್ಲಿ ಹಿಂದುಸ್ತಾನ್ ಇಸ್ಕಾನ್ ಇಂಡಿಯಾ ಪ್ರೈವೆಟ್ ಲಿಮಿಟೆಡ್ ನಲ್ಲಿ ಪ್ರತಿನಿಧಿಯಾಗಿರುವ ಸಂದರ್ಭ ಅವರು ಆರೋಪಿ ಸೋಮೇಶ್ವರ ಸಹಿತ 13 ಮಂದಿ ತಿಳಿಸಿದ ಆರ್.ಟಿ ಯೋಜನೆಯಲ್ಲಿ ಇತರ ಗ್ರಾಹರನ್ನು ಸೇರಿಸಿ ರೂ.15 ಲಕ್ಷವನ್ನು 3 ವರ್ಷಗಳಿಗೆಂದು ಪಾವತಿ ಮಾಡಿದ್ದರು. ಆದರೆ ಆರೋಪಿಗಳು ಬಳಿಕ ಬಡ್ಡಿ, ಅಸಲನ್ನು ವಾಪಸ್ ಮಾಡದೆ ವಂಚನೆ ಮಾಡಿದ್ದರು. ಈ ಕುರಿತು ಪ್ರಶ್ನಿಸಿದಾಗ ಆರೋಪಿಗಳು ಜೀವ ಬೆದರಿಕೆಯೊಡ್ಡಿದ್ದರು.

ಘಟನೆಯ ಕುರಿತು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಮತ್ತು ಜೀವ ಬೆದರಿಕೆ ಆರೋಪದ ಪ್ರಕರಣ ದಾಖಲಾಗಿತ್ತು.ಆರೋಪಿಗಳು ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದರಿಂದ ನ್ಯಾಯಾಲಯ ಅವರ ಬಂಧನಕ್ಕೆ ವಾರಂಟ್ ಜಾರಿ ಮಾಡಿತ್ತು. ಇದೀಗ 11ನೇ ಆರೋಪಿ ಸೋಮೇಶ್ವರ ಎಂಬಾತನನ್ನು ಚಿತ್ರದುರ್ಗ ಜಿಲ್ಲೆಯಿಂದ ಪೊಲೀಸರು ಬಂಧಿಸಿ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

ದ.ಕ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಯತೀಶ್ ಎನ್ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್. ರವರ ನಿರ್ದೇಶನದಲ್ಲಿ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಅರುಣ್ ನಾಗೇಗೌಡರವರ ಮಾರ್ಗದರ್ಶನದಲ್ಲಿ ಪುತ್ತೂರು ನಗರ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ಜಾನ್ಸನ್ ಡಿ’ಸೋಜ ಅವರ ನೇತೃತ್ವದಲ್ಲಿ ಎ.ಎಸ್.ಐ ಚಂದ್ರ ಕೆ ಮತ್ತು ಹೆಡ್ ಕಾನ್ ಸ್ಟೇಬಲ್ ವಸಂತ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here