ಪುತ್ತೂರು: ಊರಮಾಲು ಎಂಬಲ್ಲಿ ಅಡಿಕೆ ತೋಟಕ್ಕೆ ಅಕ್ರಮ ಪ್ರವೇಶ ಮಾಡಿ ಅಡಿಕೆಯನ್ನು ಕಳವು ಮಾಡಿಕೊಂಡು ಹೋಗಿರುವ ಆರೋಪದಲ್ಲಿ ಇಬ್ಬರು ಮಹಿಳೆಯರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಊರಮಾಲು ಹೊಸಮಾರು ನಿವಾಸಿ ಅಬ್ದುಲ್ ರಜಾಕ್ ಊರಮಾಲ್ ಎಂಬವರು ನಗರ ಪೊಲೀಸ್ ಠಾಣೆಗೆ ಈ ಕುರಿತು ದೂರು ನೀಡಿದ್ದರು. ವೃತ್ತಿಪರ ಕೃಷಿಕನಾಗಿದ್ದು ವೃತ್ತಿಯಲ್ಲಿ ನಾಟಿ ವೈದ್ಯನೂ ಆಗಿರುತ್ತೇನೆ. ನಾವು ಚಿಕ್ಕಮುಡ್ನೂರು ಗ್ರಾಮದ ಊರಮಾಲು ಹೊಸ ಮಾರುಮನೆ ಎಂಬಲ್ಲಿ ಕೃಷಿ ಭೂಮಿಯನ್ನು ಹೊಂದಿದ್ದು, ಈ ಆಸ್ತಿಯು ತಾಯಿ ಐಸಮ್ಮ ಮತ್ತು ಮಕ್ಕಳಾದ ಅಬ್ದುಲ್ ರಜಾಕ್ ಊರಮಾಲ್, ಹಾಜಿರಾ, ಮುಸ್ತ, ಸಂಸುದ್ದಿನ್ ಸಾಲ್ಮರ, ಅನ್ವರ್, ತಾಹೀರಾ, ಆಮಿನಾ ಅವರೆಲ್ಲರ ಜಂಟಿ ಹೆಸರಿನಲ್ಲಿದೆ. ಡಿಸೆಂಬರ್ 7 ರಂದು ಬೆಳಿಗ್ಗೆ ಜಾಗಕ್ಕೆ ಅಕ್ರಮ ಪ್ರವೇಶ ಮಾಡಿ, ತೋಟದಲ್ಲಿದ್ದ ಸುಮಾರು 6 ಗೋಣಿ 5 ಕ್ವಿಂಟಾಲ್ ಹಣ್ಣು ಅಡಿಕೆಯನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಇದರ ಮೌಲ್ಯ ರೂ. 25 ಸಾವಿರ ಎಂದು ಅಂದಾಜಿಸಲಾಗಿದೆ.
ಅನಿತಾ ಮತ್ತು ಅಮಿತಾ ಎಂಬವರ ವಿರುದ್ಧ ಅಬ್ದುಲ್ ರಝಾಕ್ ಅವರು ದೂರು ನೀಡಿದ್ದು ಪೊಲೀಸರು ಆರೋಪಿಗಳ ವಿರುದ್ಧ ಕಲಂ 329 (3), 303 (2), 3(5)ಬಿಎನ್‌ಎಸ್ ಕಾಯ್ದೆಯಂತೆ ಪ್ರಕರಣ (0114/2024)ದಾಖಲಿಸಿಕೊಂಡಿದ್ದಾರೆ.