ಪುತ್ತೂರು: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮದ ಕಾಪಿನ ಬಾಗಿಲು ಎಂಬಲ್ಲಿ 2013ರಿಂದ ವಾಸವಿದ್ದ ವೃದ್ಧ ದಲಿತ ರಾಧಮ್ಮ ದಂಪತಿಯ ವಾಸದ ಮನೆಯನ್ನು ಅಕ್ರಮವಾಗಿ ಕಡಬ ತಹಶೀಲ್ದಾರ್ ದ್ವಂಸ ಮಾಡಿರುವ ಮತ್ತು ರಾಧಮ್ಮನ ಗಂಡನ ಮೇಲೆ ಸುಳ್ಳು ದೂರು ನೀಡಿ ದೌರ್ಜನ್ಯ ಎಸಗುತ್ತಿರುವ ತಹಶೀಲ್ದಾರ್ ನಡೆಯನ್ನು ಖಂಡಿಸಿ ಹೋರಾಟ ನಡೆಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ ಡಿ.13ರಂದು ಪುತ್ತೂರು ಎ.ಸಿ ಕಚೇರಿಯ ಬಳಿ ದಲಿತ ಸಂಘಟನೆಗಳ ಪ್ರತಿಭಟನೆ ನಡೆಯಲಿದೆ ಎಂದು ದಲಿತ ಹಕ್ಕುಗಳ ದ.ಕ. ಜಿಲ್ಲಾ ಉಪಾಧ್ಯಕ್ಷೆ ಈಶ್ವರಿ ಶಂಕರ್ ಹೇಳಿದ್ದಾರೆ.
ದಲಿತ ದಂಪತಿಗೆ ಮತ್ತೆ ಮನೆ ನಿರ್ಮಿಸಿಕೊಡಲು ಆಗ್ರಹಿಸಿ ಮತ್ತು ತಹಶೀಲ್ದಾರ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ದಲಿತ ಸಮುದಾಯಕ್ಕೆ ನ್ಯಾಯ ಒದಗಿಸಲು ಆಗ್ರಹಿಸಿ, ಮತ್ತು ತಹಶೀಲ್ದಾರ್ ವಿರುದ್ಧ ಪ್ರಕರಣ ದಾಖಲಿಸದ ಪೊಲೀಸರ ನಡೆಯನ್ನೂ ಖಂಡಿಸಿ ಪ್ರತಿಭಟನೆ ನಡೆಯಲಿದೆ. ಬೆಳಿಗ್ಗೆ ಗಂಟೆ 10ಕ್ಕೆ ಪುತ್ತೂರು ವಿಭಾಗ ಮಟ್ಟದ ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಲಿದೆ ಎಂದು ಈಶ್ವರಿ ಶಂಕರ್ ತಿಳಿಸಿದ್ದಾರೆ.