(ಜ.4-5) ಮಂಗಳೂರಿನ ಸಂಘನಿಕೇತನದಲ್ಲಿ ಅಂತರ್‌ರಾಜ್ಯ ಮಟ್ಟದ ‘ಕಂದಮೂಲ’ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳ-ಆಮಂತ್ರಣ ಪತ್ರ ಬಿಡುಗಡೆ

0

ಪುತ್ತೂರು: ಪ್ರಾಚೀನ ಕಾಲದಲ್ಲಿ ಋಷಿಮುನಿಗಳು ಕಂದಮೂಲಗಳನ್ನು ಸೇವಿಸಿ ಆರೋಗ್ಯಕರ ಜೀವನ ಸಾಗಿಸುತ್ತಿದ್ದರು. ಇಂದಿನ ದಿನಗಳಲ್ಲೂ ಕಂದಮೂಲ, ಗೆಡ್ಡೆಗೆಣಸುಗಳನ್ನು ಆಹಾರದಲ್ಲಿ ಬಳಕೆ ಮಾಡುವುದು ಉತ್ತಮ ಬದುಕಿಗೆ ಪೂರಕವಾಗಿದೆ ಎಂದು ಕಂದಮೂಲ ಮೇಳದ ಕಾರ್ಯಾಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಹೇಳಿದ್ದಾರೆ.

ಮಂಗಳೂರಿನ ಸಾವಯವ ಕೃಷಿಕ ಗ್ರಾಹಕ ಬಳಗದ ಆಶ್ರಯದಲ್ಲಿ ಕೇಶವ ಸ್ಮೃತಿ ಸಂವರ್ಧನ ಸಮಿತಿ, ಶ್ರೀಸರಸ್ವತಿ ಚಾರಿಟೇಬಲ್‌ ಟ್ರಸ್ಟ್‌ ಸೇರಿದಂತೆ ವಿವಿಧ ಸಂಘಸಂಸ್ಥೆಗಳ ಸಹಕಾರದಲ್ಲಿ ಮಂಗಳೂರಿನ ಸಂಘನಿಕೇತನದಲ್ಲಿ ಜನವರಿ 4 ಮತ್ತು 5 ರಂದು ನಡೆಯುವ ಅಂತರ್‌ರಾಜ್ಯ ಮಟ್ಟದ ‘ಕಂದಮೂಲ’ ಗೆಡ್ಡೆ ಗೆಣಸು ಮತ್ತು ಸೊಪ್ಪು ಮೇಳ-2025 ಇದರ ಆಮಂತ್ರಣ ಪತ್ರ ಹಾಗೂ ಪ್ರಚಾರ ಸಾಮಗ್ರಿಯನ್ನು ಭಾನುವಾರ ಇಲ್ಲಿನ ಮೇಳದ ಕಚೇರಿಯಲ್ಲಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಾನವರ ಜೀವನ ಈಗ ಆಧುನಿಕತೆಗೆ ಒಗ್ಗಿ ಹೋಗಿದೆ. ಫೈವ್‌ಸ್ಟಾರ್‌ ಸಂಸ್ಕೃತಿಯಿಂದಾಗಿ ಹೊರಗಡೆಯ ಆಹಾರವೇ ಶ್ರೇಯಸ್ಕರ ಎಂಬಂತಾಗಿದೆ. ಪೇಪರ್‌ ಲೋಟಗಳಲ್ಲಿ ಬಿಸಿಯಾದ ಪಾನೀಯಗಳನ್ನು ಸೇವಿಸುವ ಮೂಲಕ ಅನಾರೋಗ್ಯಕ್ಕೆ ಕಾರಣವಾಗುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಮಾನವನಿಗೆ ನೆಮ್ಮದಿಯ, ವಿಷರಹಿತ ಆಹಾರವನ್ನು ಕೊಟ್ಟ ಕಂದಮೂಲ, ಗೆಡ್ಡೆಗೆಣಸುಗಳ ಬಗ್ಗೆ ನಿರ್ಲಕ್ಷ್ಯ ತಾಳುತ್ತಿರುವುದು ಖೇದಕರ. ಆಧುನಿಕ ಆಹಾರ ಪದ್ಧತಿಯ ಅತಿಯಾದ ಬಳ‍ಕೆಯಿಂದ ಅನಾರೋಗ್ಯವನ್ನು ಆಹ್ವಾನಿಸುತ್ತಿದ್ದೇವೆ. ಮನೆಯಂಗಳದ ಸೊಪ್ಪು ತರಕಾರಿಯಿಂದ ದೂರವಾಗಿ ವಿಷಯುಕ್ತ ತರಕಾರಿಗಳತ್ತ ಮನಮಾಡುತ್ತಿರುವುದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತಿದೆ. ಇದರ ಬಗ್ಗೆ ಅರಿವು ಮೂಡಿಸಿ ಕಂದಮೂಲಗಳ ಬಳಕೆಯನ್ನು ಹೆಚ್ಚು ಹೆಚ್ಚು ಉತ್ತೇಜಿಸುವ ಸಲುವಾಗಿ ಈ ಮೇಳ ಹಮ್ಮಿಕೊಳ್ಳಲಾಗುತ್ತಿದೆ ಎಂದರು.

ಕಂದಮೂಲ ಮೇಳದ ಅಧ್ಯಕ್ಷ ಪ್ರಭಾಕರ ಶರ್ಮಾ ಅವರು ಆಮಂತ್ರಣ ಪತ್ರ ಹಾಗೂ ಪ್ರಚಾರ ಸಾಮಗ್ರಿಯನ್ನು ಬಿಡುಗಡೆಗೊಳಿಸಿ, ಈ ಮೇಳದ ಬಗ್ಗೆ ಕರಾವಳಿಯಲ್ಲಿ ದೊಡ್ಡ ಸಂಚಲನ ಮೂಡಿದೆ. ನಿತ್ಯದ ಆಹಾರದಲ್ಲಿ ಕಂದಮೂಲ ಹಾಗೂ ಸೊಪ್ಪುಗಳ ಬಳಕೆ ಬಗ್ಗೆ ಎಲ್ಲರಲ್ಲಿ ತಿಳುವಳಿಕೆ ಮೂಡಬೇಕು ಎಂದರು.

ಎರಡು ದಿನ ಕಂದಮೂಲಗಳ ಹವಾ:

ಪ್ರಧಾನ ಕಾರ್ಯದರ್ಶಿ ಕೆ.ರತ್ನಾಕರ ಕುಳಾಯಿ ಪ್ರಾಸ್ತಾವಿಕದಲ್ಲಿ, ಎರಡು ದಿನಗಳ ಕಾಲ ನಡೆಯುವ ಈ ಗೆಡ್ಡೆಗೆಣಸು ಮೇಳದಲ್ಲಿ ಗೆಡ್ಡೆ ಗೆಣಸಿನ ಮತ್ತು ವಿವಿಧ ಸೊಪ್ಪಿನ
ಪ್ರದರ್ಶನ, ಮಾಹಿತಿ ಮತ್ತು ಮಾರಾಟ. ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಗೋಷ್ಠಿ, ಪ್ರದರ್ಶನ ವೀಕ್ಷಿಸಲು ಆಗಮಿಸುವವರಿಗೆ ವಿವಿಧ ಆಶು ಪ್ರಶ್ನೆ, ಮನೋರಂಜನಾ ಸ್ಪರ್ಧೆ ನಡೆಯಲಿದೆ. ಈ ಮೇಳದಲ್ಲಿ ತಿರುವನಂತಪುರದ ಸಿಟಿಆರ್‌ಐ (ಕೇಂದ್ರೀಯ ಗೆಡ್ಡೆಗೆಣಸು ಬೆಳೆಗಳ ಸಂಶೋಧನಾ ಸಂಸ್ಥೆ), ಪಶ್ಚಿಮ ಬಂಗಾಳ, ಒಡಿಶಾ, ಮಹಾರಾಷ್ಟ್ರ, ವಿಜಯವಾಡ, ಕೇರಳ ಮತ್ತಿತರ ರಾಜ್ಯಗಳಿಂದಲೂ ರೈತರು ತಮ್ಮ ಉತ್ಪನ್ನಗಳೊಂದಿಗೆ ಪಾಲ್ಗೊಳ್ಳಲಿದ್ದಾರೆ.

ವಿವಿಧ ಗೆಡ್ಡೆಗೆಣಸು, ಸೊಪ್ಪುಗಳ ಬಗೆಬಗೆಯ ಖಾದ್ಯಗಳು ಇರಲಿದೆ. ಅಲ್ಲದೆ ವಿವಿಧ ಆಯುರ್ವೇದ ಗಿಡಗಳ ಮತ್ತು ಸೊಪ್ಪಿನ ಚಿತ್ರಗಳ ಮಾಹಿತಿ. ವಿವಿಧ ಸೊಪ್ಪು ಬೆಳೆಸಿ ಬಹುಮಾನ ಗೆಲ್ಲುವ ಸ್ಪರ್ಧೆ ನಡೆಯಲಿದೆ. ಸೊಪ್ಪು ಮತ್ತು ಗೆಡ್ಡೆ ಗೆಣಸುಗಳಲ್ಲಿ ಇರುವ ಪೌಷ್ಠಿಕಾಂಶ ಮತ್ತು ಔಷಧೀಯ ಗುಣಗಳ ಬಗ್ಗೆ ಜಾಗೃತಿ ಮೂಡಿಸುವುದು ಈ ಮೇಳದ ಮುಖ್ಯ ಉದ್ದೇಶ ಎಂದರು.

ಸಾವಯವ ಕೃಷಿ ಜಾಗೃತಿ ಬಳಗ ಅಧ್ಯಕ್ಷ ಜಿ.ಆರ್‌.ಪ್ರಸಾದ್‌, ಕಾರ್ಯದರ್ಶಿ ಡಾ.ಕೇಶವರಾಜ್‌, ಗೌರವ ಸಲಹೆಗಾರ ಅಡ್ಡೂರು ಕೃಷ್ಣರಾವ್‌ ಇದ್ದರು.

2 ದಿನಗಳ ಕಾಲ ಏನೇನು ಕಾರ್ಯಕ್ರಮ?

ನಗರದ ಸಂಘನಿಕೇತನದಲ್ಲಿ ಜನವರಿ 4ರಂದು ಬೆಳಗ್ಗೆ 9.30ಕ್ಕೆ ಆರ್‌ಎಸ್‌ಎಸ್‌ ದಕ್ಷಿಣ ಮಧ್ಯಕ್ಷೇತ್ರೀಯ ಸಂಘಚಾಲಕ ಡಾ.ವಾಮನ ಶೆಣೈ ಧ್ವಜಾರೋಹಣ ನೆರವೇರಿಸುವರು. ಕೊಂಡೆವೂರಿನ ಶ್ರೀಯೋಗಾನಂದ ಸರಸ್ವತಿ ಸ್ವಾಮೀಜಿ ಅವರು ಮೇಳಕ್ಕೆ ಚಾಲನೆ ನೀಡಿ ಆಶೀರ್ವದಿಸುವರು. ಸ್ಪೀಕರ್‌ ಯು.ಟಿ.ಖಾದರ್‌ ಉಪಸ್ಥಿತಿ, ಸಂಸದ ಕ್ಯಾ.ಬ್ರಿಜೇಶ್‌ ಚೌಟ ಅಧ್ಯಕ್ಷತೆಯಲ್ಲಿ ಪಾಲಿಕೆ ಮೇಯರ್‌ ಮನೋಜ್ ಕುಮಾರ್‌ ಕೈಪಿಡಿ ಬಿಡುಗಡೆಗೊಳಿಸುವರು. ಮರುದಿನ ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಒಡಿಯೂರಿನ ಶ್ರೀಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.

ಜನವರಿ 4ರಂದು ಬೆಳಗ್ಗೆ 11ರಿಂದ ‘ಕಂದಮೂಲ ಜ್ಞಾನ ಸಂಪತ್ತು ಆರೋಗ್ಯದ ಕರಾಮತ್ತು’ ಕುರಿತು ಅಡ್ಡೂರು ಕೃಷ್ಣರಾವ್‌ ಅಧ್ಯಕ್ಷತೆಯಲ್ಲಿ ಸಂದೀಪ್‌ ಹುಣಸೂರು ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುವರು. ಸಂಜೆ 3.30ರಿಂದ ‘ಹಿತ್ತಲ ಗಿಡ ಮದ್ದೇ?’ ವಿಚಾರದಲ್ಲಿ ಪ್ರಮೀಳ ಹರ್ಷ ಅಧ್ಯಕ್ಷತೆಯಲ್ಲಿ ಆಶಾ ನಾಗರಹೊಳೆ ಮಾತನಾಡುವರು. ಜನವರಿ 5ರಂದು ಬೆಳಗ್ಗೆ 10ರಿಂದ ‘ಭೂಮಿಯೇ ಬ್ಯಾಂಕ್‌-ಗೆಡ್ಡೆ ಗೆಣಸುಗಳೇ ಠೇವಣಿ’ ಕುರಿತು ಡಾ.ಉದಯ ಕುಮಾರ್ ಪಿಲಿಕುಳ ಅಧ್ಯಕ್ಷತೆಯಲ್ಲಿ ವಸಂತ ಕಜೆ ಮಾತನಾಡಲಿದ್ದಾರೆ. ಎರಡು ದಿನಗಳ ಕಾಲ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.

LEAVE A REPLY

Please enter your comment!
Please enter your name here