ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವ: ನೆಲ್ಯಾಡಿ ವಲಯದಲ್ಲಿ 50ವರ್ಷ ದಾಂಪತ್ಯ ಜೀವನ ಪೂರೈಸಿದ ಮಾದರಿ ದಂಪತಿಗೆ ಸನ್ಮಾನ

0

ನೆಲ್ಯಾಡಿ: ಒಕ್ಕಲಿಗ ಸ್ವಸಹಾಯ ಟ್ರಸ್ಟ್‌ನ ದಶಮಾನೋತ್ಸವ ಸಲುವಾಗಿ 50 ವರ್ಷ ದಾಂಪತ್ಯ ಜೀವನ ಪೂರೈಸಿದ ನೆಲ್ಯಾಡಿ ವಲಯದ ಆರು ಗ್ರಾಮಗಳ 17 ದಂಪತಿಗಳಿಗೆ ಸನ್ಮಾನ ಕಾರ್ಯಕ್ರಮ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನದ ಗೋಳಿತ್ತೊಟ್ಟು ಉಪಶಾಖಾ ಮಠದಲ್ಲಿ ಡಿ.7ರಂದು ಸಂಜೆ ನಡೆಯಿತು.


ಒಕ್ಕೂಟದ ಅಧ್ಯಕ್ಷ ಕುಶಾಲಪ್ಪ ಗೌಡ ಅನಿಲ ಅಧ್ಯಕ್ಷತೆ ವಹಿಸಿದ್ದರು. ಊರ ಗೌಡರಾದ ವಿಶ್ವನಾಥ ಗೌಡ ಪೆರಣ ದೀಪ ಪ್ರಜ್ವಲಿಸಿದರು. ಟ್ರಸ್ಟಿನ ಅಧ್ಯಕ್ಷ ಡಿ.ವಿ ಮನೋಹರ ಗೌಡರವರು ಪ್ರಾಸ್ತಾವಿಕವಾಗಿ ಮಾತನಾಡಿದರು.

ದಶಮಾನೋತ್ಸವ ಸಮಿತಿಯ ಅಧ್ಯಕ್ಷ ಪಟೇಲ್ ಗೋಪಾಲಕೃಷ್ಣ ಗೌಡ ಚಾರ್ವಾಕ ಅವರು ದಂಪತಿಗಳನ್ನು ಸನ್ಮಾನಿಸಿ ಮಾತನಾಡಿ, ಟ್ರಸ್ಟ್‌ನ ವ್ಯಾಪ್ತಿಯಲ್ಲಿ ಬರುವ 66 ಗ್ರಾಮಗಳಲ್ಲಿ ಎಲ್ಲಿಯೂ ಕೂಡ 17 ದಂಪತಿಗಳಿಗೆ ಒಂದೇ ಕಡೆ ಸನ್ಮಾನ ನಡೆದಿಲ್ಲ. ನೆಲ್ಯಾಡಿ ವಲಯದ ಆರು ಗ್ರಾಮಗಳ 17 ದಂಪತಿಗಳನ್ನು ಒಂದೇ ಕಡೆ ಸನ್ಮಾನಿಸಿದ ಹೆಗ್ಗಳಿಕೆ ನಲ್ಯಾಡಿ ವಲಯಕ್ಕೆ ಸಲ್ಲುತ್ತದೆ. ಶ್ರೀ ಮಠದ ಶಾಖಾಮಠದಲ್ಲಿ ಸನ್ಮಾನ ಕಾರ್ಯ ನಡೆದಿರುವುದರಿಂದ ಸನ್ಮಾನ ಸ್ವೀಕರಿಸಿದ ದಂಪತಿಗಳಿಗೆ ಮತ್ತು ಸಮಾಜ ಬಾಂಧವರಿಗೆ ಸ್ವಾಮೀಜಿಯವರ ಪೂರ್ಣ ಆಶೀರ್ವಾದವಿದೆ ಎಂದು ಹೇಳಿದರು.


ಒಕ್ಕಲಿಗ ವಿವಾಹ ವೇದಿಕೆಯ ಸಂಚಾಲಕ ಸುರೇಶ್ ಗೌಡ, ಒಕ್ಕಲಿಗ ಗೌಡ ಜಿಲ್ಲಾ ಸಂಘದ ಸದಸ್ಯ ಸುಂದರ ಗೌಡ ಅತ್ರಿಜಾಲು, ಟ್ರಸ್ಟ್‌ನ ವಲಯ ನಿರ್ದೇಶಕ ರವಿಚಂದ್ರ ಗೌಡ ಹೊಸವಕ್ಲು, ಕಡಬ ತಾಲೂಕು ಮಹಿಳಾ ಸಂಘದ ಉಪಾಧ್ಯಕ್ಷೆ ತುಳಸಿ ಕುದ್ಕೋಳಿ, ಗೋಳಿತ್ತೊಟ್ಟು ಗ್ರಾಮ ಮಹಿಳಾ ಸಮಿತಿ ಅಧ್ಯಕ್ಷೆ ತಿರುಮಲೇಶ್ವರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.


ಸಂಘದ ಸದಸ್ಯರಿಗೆ ನಡೆಸಿದ ಆನ್‌ಲೈನ್ ಸ್ಪರ್ಧೆಯಲ್ಲಿ ವಿಜೇತರಾದ ಮಾದೇರಿ ಒಕ್ಕೂಟದ ಶ್ರೀ ಸತ್ಯ ದೇವತೆ ಸಂಘದ ಸದಸ್ಯರಿಗೆ ಈ ಸಂದರ್ಭದಲ್ಲಿ ಬಹುಮಾನ ಮೊತ್ತದ ಚೆಕ್ ವಿತರಿಸಲಾಯಿತು. ವಲಯದ ಪ್ರೇರಕ ಪರಮೇಶ್ವರ ಗೌಡ ಸ್ವಾಗತಿಸಿದರು, ಒಕ್ಕೂಟದ ಕಾರ್ಯದರ್ಶಿ ಪ್ರಿಯದರ್ಶಿನಿ, ತ್ರಿವೇಣಿ ಕುದ್ಕೋಳಿ, ಲಲಿತ ತಿರ್ಲೆ ಸಹಕರಿಸಿದರು. ಸುರೇಶ್ ಪಡಿಪಂಡ ವಂದಿಸಿದರು. ಮೇಲ್ವಿಚಾರಕ ವಿಜಯಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಶ್ರೀ ನಾಗೆಡೆಬ್ಬೇಲಿ ಒಕ್ಕಲಿಗ ಸ್ವಸಹಾಯ ಸಂಘದ ಸದಸ್ಯರು ಪ್ರಾರ್ಥಿಸಿದರು. ಬಾಂಧವ್ಯ ಸಂಘದ ಸದಸ್ಯೆ ಅಮಿತಾ ಚಿಂತನವನ್ನು ವಾಚಿಸಿದರು. ವಲಯದ 8 ಒಕ್ಕೂಟಗಳ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಎಲ್ಲಾ ಗ್ರಾಮಗಳ ಪ್ರಮುಖರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here