ಬೆಟ್ಟಂಪಾಡಿಯಲ್ಲಿ ಅಪರಿಚಿತ ವ್ಯಕ್ತಿಗಳಿಂದ ಸ್ಕ್ರಾಚ್ & ವಿನ್’ ಲೈನ್ ಸೇಲ್-ವಂಚನೆ ಜಾಲ ಗುಮಾನಿ ಮೇಲೆ ಪೊಲೀಸರಿಗೊಪ್ಪಿಸಿದ ಸ್ಥಳೀಯರು

0

ಬೆಟ್ಟಂಪಾಡಿ: ಛತ್ತೀಸ್‌ಗಢ ನೊಂದಾವಣೆಯ ಕಾರೊಂದರಲ್ಲಿ ಅಪರಿಚಿತ ಈರ್ವರು ವ್ಯಕ್ತಿಗಳು ಪರಿಸರದಲ್ಲಿ ಮನೆ ಮನೆಗೆ ಹೋಗಿ ‘ಸ್ಕ್ರ್ಯಾಚ್ & ವಿನ್’ ರೀತಿಯ ಲೈನ್ ಸೇಲ್ ನಲ್ಲಿ ತೊಡಗಿಸಿಕೊಂಡಿದ್ದು, ಇವರ ಮೇಲೆ ಅನುಮಾನ ಪಟ್ಟ ಸ್ಥಳೀಯರು ಬೆಟ್ಟಂಪಾಡಿ ಪಂಚಾಯತ್ ಗೆ ಅವರನ್ನು ಕರೆದುಕೊಂಡು ಬಂದು ಬಳಿಕ ಪೊಲೀಸರಿಗೊಪ್ಪಿಸಿದ ಘಟನೆ ನಡೆದಿದೆ.‌


ಬಾಲಾಜಿ ಮಾರ್ಕೆಟಿಂಗ್ & ಸೇಲ್ಸ್ ಎಂದು ಕೂಪನ್ ಹೊಂದಿರುವ ಇವರು ಟಿವಿ, ಫ್ರಿಡ್ಜ್ ಸೇರಿದಂತೆ ಗೃಹೋಪಯೋಗಿ ಉಪಕರಣಗಳನ್ನು ರಿಯಾಯಿತಿ ದರದಲ್ಲಿ ಮತ್ತು ಕೂಪನ್ ಕೊಟ್ಟು ಅದನ್ನು ಸ್ಕ್ರಾಚ್ ಮಾಡಿದ್ದಲ್ಲಿ ಅದರಲ್ಲಿ ಬಂದ ವಸ್ತುಗಳನ್ನು ಕೊಡುವುದಾಗಿ ಜನರನ್ನು ನಂಬಿಸುತ್ತಿದ್ದರು ಎನ್ನಲಾಗಿದೆ. ಇದರಿಂದ ಅನುಮಾನಗೊಂಡ ಸ್ಥಳೀಯರು ಬೆಟ್ಟಂಪಾಡಿ ಪಂಚಾಯತ್ ಗೆ ವಿಷಯ ತಿಳಿಸಿ ಅಲ್ಲಿಗೆ ಕರೆತಂದಿದ್ದರು. ಗ್ರಾಮಸ್ಥರು ಸೇರಿದಂತೆ ಬೆಟ್ಟಂಪಾಡಿ ಗ್ರಾ.ಪಂ. ಉಪಾಧ್ಯಕ್ಷ ಮಹೇಶ್ ಕೋರ್ಮಂಡ, ಸದಸ್ಯರಾದ ಪ್ರಕಾಶ್ ರೈ ಬೈಲಾಡಿ ಈ ವೇಳೆ ಜಮಾಯಿಸಿದ್ದರು.ಆ ಬಳಿಕ ಪೊಲೀಸರು ಬಂದು ವಿಚಾರಣೆ ನಡೆಸಿದಾಗ ಸ್ಪಷ್ಟವಾದ ದಾಖಲೆಗಳಿಲ್ಲದೇ ಇರುವುದು ಕಂಡುಬಂದಿದೆ. ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕ ಜಂಬೂರಾಜ್ ಮಹಾಜನ್ ರವರ ನಿರ್ದೇಶನದಂತೆ ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ.


ಇವರ ಮಾರ್ಕೆಂಟಿಂಗ್ ಕಚೇರಿ ಕೋಲ್ಹಾಪುರ ಗಾಂಧಿನಗರ ಎಂದಿದ್ದು, ಮಂಗಳೂರು ಸೇರಿದಂತೆ 10 ಕಡೆ ಶಾಖೆಗಳನ್ನು ಹೊಂದಿರುವುದಾಗಿ ನಮೂದಿಸಲಾಗಿದೆ. ಆದರೆ ಜಿಲ್ಲಾಡಳಿತ ಅಥವಾ ಸ್ಥಳೀಯಾಡಳಿತದಿಂದ ಯಾವುದೇ ಅಧಿಕೃತ ಪರ್ಮಿಷನ್ ಇಲ್ಲದೇ ಇವರು ಮನೆ ಮನೆಗೆ ಹೋಗುತ್ತಿರುವುದಾಗಿ ಆರೋಪಿಸಿರುವ ಸ್ಥಳೀಯರು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಈ ರೀತಿಯಾಗಿ ಅಪರಿಚಿತರು ಬರುವುದರ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.

ಅಲ್ಲದೇ ಸ್ಥಳೀಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ರೀತಿಯ ಮಾರ್ಕೆಟಿಂಗ್ ಮಾಡುವವರು ಪಂಚಾಯತ್ ಪರವಾನಿಗೆ ಪಡೆದುಕೊಳ್ಳುವಂತೆಯೂ ಪಂಚಾಯತ್ ನಿರ್ಣಯವಿದೆ. ಈ ನಿಟ್ಟಿನಲ್ಲಿ ಅನಧಿಕೃತವಾಗಿ ಮಾರ್ಕೆಟಿಂಗ್ ಮಾಡುವವರ ವಿರುದ್ದ ಸಾರ್ವಜನಿಕ ಹಿತದೃಷ್ಟಿಯಿಂದ ಪೊಲೀಸ್ ಇಲಾಖೆ ಮತ್ತು ತಾಲೂಕು, ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿದೆ.

LEAVE A REPLY

Please enter your comment!
Please enter your name here