ಉಪ್ಪಿನಂಗಡಿ:ದೀಪಕ್ ಬೆಂಗರ ಕೊಲೆ ಪ್ರಕರಣ- ಆರೋಪಿಗೆ ನ್ಯಾಯಾಂಗ ಬಂಧನ

0

ಉಪ್ಪಿನಂಗಡಿ:ಅಸ್ಸಾಂ ಮೂಲದ ಕೂಲಿ ಕಾರ್ಮಿಕ ದೀಪಕ್ ಬೆಂಗರ ಎಂಬಾತನ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿ ಬಾಬು ಯಾನೆ ರುದ್ರನನ್ನು ಉಪ್ಪಿನಂಗಡಿ ಪೊಲೀಸರು ದ.11ರಂದು ನ್ಯಾಯಾಧಿಶರ ಮನೆಗೆ ಹಾಜರುಪಡಿಸಿದ್ದು, ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಬಾಬು ಯಾನೆ ರುದ್ರ ಎಂಬಾತ ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದಲ್ಲಿ ಒಂದು ಹಾಗೂ ಪೆರ್ನೆಯಲ್ಲಿ ಒಂದು ಮದುವೆಯಾಗಿ ಐದು ಮಕ್ಕಳನ್ನು ಹೊಂದಿದ್ದರೂ ಈತ ಇಬ್ಬರು ಪತ್ನಿಯರ ಮನೆಗೂ ಹೋಗದೇ ಅಲೆಮಾರಿಯಂತೆ ತಿರುಗಿಕೊಂಡಿದ್ದ.ಇದರೊಂದಿಗೆ ಕಳ್ಳತನ ಕೃತ್ಯಗಳಲ್ಲಿಯೂ ತೊಡಗಿಸಿಕೊಳ್ಳುತ್ತಿದ್ದ ಆರೋಪವಿದೆ.ಸಾರಣೆ ಕೆಲಸ ಮಾಡುತ್ತಿದ್ದ ಈತ ಅದರೊಂದಿಗೆ ಜಾತ್ರೆ ಸೇರಿದಂತೆ ಇನ್ನಿತರ ಕಡೆಗಳಿಗೆ ಬಂದು ಗೊತ್ತು ಗುರಿಯಿಲ್ಲದೆ ಎಲ್ಲೆಂದರಲ್ಲಿ ಮಲಗುತ್ತಿದ್ದವರ ಹಣ, ಮೊಬೈಲ್ ಎಗರಿಸುವ ಕೃತ್ಯವನ್ನೂ ಮಾಡುತ್ತಿದ್ದ.ಸ್ವಲ್ಪ ಮದ್ಯದ ಅಮಲೇರಿದಾಗಲೇ ಆಕ್ರೋಶ ಭರಿತನಾಗಿ ದಾಳಿಗೆ ಮುಂದಾಗುತ್ತಿದ್ದ ಸ್ವಭಾವ ಇವನದ್ದು ಎನ್ನುವುದು ಪೊಲೀಸರ ತನಿಖೆ ವೇಳೆ ತಿಳಿದು ಬಂದಿದೆ ಎನ್ನಲಾಗುತ್ತಿದೆ.


ಕೊಲೆ ಮಾಡಿದ ಬಳಿಕ ದೇರಳಕಟ್ಟೆಗೆ ಕೆಲಸಕ್ಕೆ ಸೇರಿಕೊಂಡಿದ್ದ:
ದೀಪಕ್ ಬೆಂಗರನನ್ನು ಕೊಲೆ ಮಾಡುವ ದಿನ ಈತ ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಲಗಿಕೊಂಡಿದ್ದು ರಾತ್ರಿ ಪೊಲೀಸ್ ಗಸ್ತು ವಾಹನವನ್ನು ಕಂಡು ಹೆದರಿ ಅಲ್ಲೇ ಸನಿಹದಲ್ಲಿರುವ ಗ್ರಾ.ಪಂ.ಅಧಿನದ ನಿರ್ಮಾಣ ಹಂತದ ಕಟ್ಟಡವನ್ನು ಹೊಕ್ಕಿದ್ದ.ಆಗ ಅಲ್ಲಿ ಮಲಗಿದ್ದ ದೀಪಕ್ ಬೆಂಗರ ಈತನಿಗೆ ಅಲ್ಲಿ ಮಲಗಲು ಆಕ್ಷೇಪ ವ್ಯಕ್ತಪಡಿಸಿದ್ದು, ಈವೇಳೆ ಅವರಿಬ್ಬರೊಳಗೆ ಮಾತಿನ ಚಕಮಕಿ ನಡೆದಿದೆ.ಅಲ್ಲಿಂದ ತೆರಳಿದ್ದ ಬಾಬು ಯಾನೆ ರುದ್ರ ಬಸ್ ನಿಲ್ದಾಣದ ಬಳಿಯಿರುವ ಬಾರ್ ಬಳಿಯಿಂದ ಮರದ ತುಂಡೊಂದನ್ನು ತಂದು, ಗಾಢ ನಿದ್ದೆಯಲ್ಲಿದ್ದ ದೀಪಕ್ ಬೆಂಗರನ ತಲೆಗೆ ಒಡೆದಿದ್ದ ಎನ್ನಲಾಗುತ್ತಿದೆ.ಈ ಸಂದರ್ಭ ಇಲ್ಲಿ ನೂಕಾಟ, ತಳ್ಳಾಟವಾಗಿ ಬಳಿಕ ದೀಪಕ್ ಬೆಂಗರ ಹತನಾಗಿರಬಹುದು ಎಂದು ಶಂಕಿಸಲಾಗಿದೆ.ಕೊಲೆ ಪ್ರಕರಣ ಬೆಳಕಿಗೆ ಬಂದ ಬಳಿಕ ಮಧ್ಯಾಹ್ನ ತನಕ ಉಪ್ಪಿನಂಗಡಿಯಲ್ಲೇ ಇದ್ದ ಆರೋಪಿ ಬಳಿಕ ದೇರಳಕಟ್ಟೆಗೆ ತೆರಳಿ ಪರಿಚಯದವರೊಬ್ಬರ ಬಳಿ ಸಾರಣೆ ಕೆಲಸಕ್ಕೆ ಸೇರಿಕೊಂಡಿದ್ದ ಎಂದು ಮಾಹಿತಿ ಲಭ್ಯವಾಗಿದೆ.
ಕೊಲೆಯಾದ ದೀಪಕ್ ಬೆಂಗರರವರಿಗೂ ಅಸ್ಸಾಂನಲ್ಲಿ ಮದುವೆಯಾಗಿ ಮಕ್ಕಳಿದ್ದರೂ ತನ್ನ ಊರಿಗೆ ಹೋಗದೇ ಇಲ್ಲಿ ಕೆಲಸ ಮಾಡಿ, ಕುಡಿದು, ಸಿಕ್ಕಿದಲ್ಲೆಲ್ಲಾ ಮಲಗಿ ದಿನ ದೂಡುತ್ತಿದ್ದುದರಿಂದ ಈತನ ಕೊಲೆ ಸುದ್ದಿ ಕುಟುಂಬಸ್ಥರಿಗೆ ತಲುಪಿದರೂ ಅಲ್ಲಿಂದ ಇಲ್ಲಿಗೆ ಬರಲು ಈತನಕ ಯಾರೂ ಮುಂದಾಗಿಲ್ಲ.ಈತನ ಮೃತದೇಹ ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಇದ್ದು,ಈತನ ಸಂಬಂಧಿಯೋರ್ವ ಕಡಬದಲ್ಲಿ ದುಡಿಯುತ್ತಿದ್ದು, ಆತನೇ ದ.12ರಂದು ಬಂದು ದೀಪಕ್ ಬೆಂಗರ ಮೃತದೇಹದ ಅಂತಿಮ ಸಂಸ್ಕಾರ ಮಾಡಲಿರುವುದಾಗಿ ಹೇಳಲಾಗುತ್ತಿದೆ.

ಪೊಲೀಸರಿಗೆ ಅಭಿನಂದನೆ
ಒಟ್ಟಿನಲ್ಲಿ ಯಾವುದೇ ಕುರುಹು,ಕುಟುಂಬಸ್ಥರ ಒತ್ತಡ ಇಲ್ಲದೆ ಮುಚ್ಚೇ ಹೋಗಲಿದ್ದ ಈ ಪ್ರಕರಣವನ್ನು ಭೇದಿಸಿ ಆರೋಪಿಯನ್ನು ಬಂಧಿಸಿದ ಉಪ್ಪಿನಂಗಡಿ ಪೊಲೀಸ್ ಠಾಣಾ ಉಪನಿರೀಕ್ಷಕ ಅವಿನಾಶ್ ಗೌಡ ಹಾಗೂ ತಂಡ ಮತ್ತು ಅವರಿಗೆ ಸೂಕ್ತ ಮಾರ್ಗದರ್ಶನ ಕೊಟ್ಟ ಹಿರಿಯ ಅಧಿಕಾರಿಗಳಿಗೆ ಸಾರ್ವಜನಿಕರಿಂದ ಅಭಿನಂದನೆಗಳು ಹರಿದು ಬರುತ್ತಿದೆ.

LEAVE A REPLY

Please enter your comment!
Please enter your name here