ಪುತ್ತೂರು:ಉದ್ಯೋಗ ಕೊಡಿಸುವುದಾಗಿ ನಂಬಿಸಿ ಕೊಲದ ರಕ್ಷಿತಾ ಸಹಿತ 12ಕ್ಕೂ ಹೆಚ್ಚು ಮಂದಿಯಿಂದ ಲಕ್ಷಾಂತರ ರೂ.ಪಡೆದು ವಂಚಿಸಿದ ಆರೋಪದಲ್ಲಿ ಪೊಲೀಸರಿಂದ ಬಂಧಿತರಾಗಿ ನ್ಯಾಯಾಂಗ ಬಂಧನದಲ್ಲಿರುವ ಶಿಕ್ಷಕಿ, ಪೆರ್ಲ ಶೇಣಿ ಬಳ್ತಕ್ಕಲ್ ನಿವಾಸಿ ಸಚಿತಾ ರೈ(27ವ)ಗೆ ಪುತ್ತೂರು ನ್ಯಾಯಾಲಯ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಬಂಧಿತ ಸಚಿತಾ ರೈ ವಿರುದ್ಧ ಉಪ್ಪಿನಂಗಡಿ, ಬದಿಯಡ್ಕ, ಕುಂಬಳೆ, ಮಂಜೇಶ್ವರ, ಕಾಸರಗೋಡು, ಆದೂರು, ಮೇಲ್ಪರಂಬ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗಿದೆ.ಪೊಲೀಸರಿಂದ ತಲೆಮರೆಸಿಕೊಂಡಿದ್ದ ಆರೋಪಿ ಸಚಿತಾ ರೈ ಅವರು ನ್ಯಾಯಾಲಯಕ್ಕೆ ಶರಣಾಗಲು ಆಗಮಿಸಿದ ವೇಳೆ ವಿದ್ಯಾನಗರ ಪೊಲೀಸರು ಬಂಧಿಸಿದ್ದರು.ಸಿಪಿಸಿಆರ್ಐ,ಕೇಂದ್ರೀಯ ವಿದ್ಯಾಲಯ, ಕರ್ನಾಟಕ ಅಬಕಾರಿ ಇಲಾಖೆ, ಅರಣ್ಯ ಇಲಾಖೆ, ಎಸ್ಬಿಐ ಸಹಿತ ವಿವಿಧ ಇಲಾಖೆಗಳಲ್ಲಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿ ನಂಬಿಸಿ, ಹಲವರಿಂದ ಲಕ್ಷ ಲಕ್ಷ ರೂಪಾಯಿಗಳನ್ನು ಈಕೆ ಸಂಗ್ರಹಿಸಿ ವಂಚಿಸಿದ್ದ ಆರೋಪವಿದ್ದು, ಕುಂಬಳೆ ಕಿದೂರಿನ ನಿಶ್ಮಿತಾ ಶೆಟ್ಟಿ ಎಂಬವರು ದೂರು ನೀಡಿದ್ದರು.
ಈ ದೂರಿನ ತನಿಖೆ ಬೆನ್ನಲ್ಲೇ ಆರೋಪಿ ವಿರುದ್ಧ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದ್ದವು.ಸಿಪಿಸಿಆರ್ಐನಲ್ಲಿ ಕೆಲಸ ಕೊಡಿಸುವುದಾಗಿ ನಿಶ್ಮಿತಾ ಶೆಟ್ಟಿಗೆ ಸಚಿತಾ ರೈ ಸುಮಾರು 15 ಲಕ್ಷ ರೂ. ವಂಚಿಸಿದ್ದರೆ,ಕೇಂದ್ರೀಯ ವಿದ್ಯಾಲಯದಲ್ಲಿ ಕೆಲಸ ಕೊಡಿಸುವುದಾಗಿ ದೇಲಂಪಾಡಿಯ ಸುಚಿತ್ರಾ ರಾವ್ ಎಂಬವರಿಂದ 7,31,500 ರೂ.ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಆರೋಪಿಯ ಕ್ಲಾಸ್ಮೇಟ್ ಆಗಿದ್ದ ಕೊಯಿಲದ ರಕ್ಷಿತಾ ಅವರಿಗೆ ಇರಿಗೇಶನ್ ಇಲಾಖೆಯಲ್ಲಿ ಕೆಲಸ ಕೊಡುವುದಾಗಿ ಹೇಳಿ 2.50 ಲಕ್ಷ ರೂ. ಪಡೆದುಕೊಂಡದ್ದಲ್ಲದೆ, ಪುತ್ತೂರು ಎಸ್ಬಿಐ ಬ್ಯಾಂಕ್ನಲ್ಲಿ ಕೆಲಸ ಮಾಡಿಸಿಕೊಡುವುದಾಗಿ ಹೇಳಿಯೂ ಹಣ ಪಡೆದುಕೊಂಡಿದ್ದರು. 13-9-2024ರಿಂದ 23-9-2024ರ ನಡುವೆ ತನ್ನಿಂದ ಒಟ್ಟು 13.11 ಲಕ್ಷ ರೂ.ಪಡೆದು ವಂಚಿಸಿರುವುದಾಗಿ ರಕ್ಷಿತಾ ಅವರು ಸಚಿತಾ ರೈ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.ತನಿಖೆ ಕೈಗೆತ್ತಿಕೊಂಡ ಪೊಲೀಸರು ಆರೋಪಿ ಸಚಿತಾ ರೈಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗೆ ಪುತ್ತೂರು ಹೆಚ್ಚುವರಿ ವ್ಯವಹಾರಿಕ ನ್ಯಾಯಾದಿಶ ಮತ್ತು ಜೆಎಂಎಫ್ ಸಿ ನ್ಯಾಯಾಧಿಶ ಶಿವಣ್ಣ ಅವರು ಶರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ.ಆರೋಪಿ ಸಚಿತಾ ರೈ ಪರವಾಗಿ ವಕೀಲ ಕುಮಾರನಾಥ ಎಸ್ ಅವರು ವಾದಿಸಿದ್ದಾರೆ.