ಮದುವೆಯಾಗಲು ನಿರಾಕರಿಸಿ ಹಲ್ಲೆಗೈದು ಜೀವ ಬೆದರಿಕೆ ಆರೋಪ- ಕೆಮ್ಮಾರ ನಿವಾಸಿ ವಿರುದ್ಧ ಮಹಿಳೆಯಿಂದ ದೂರು

0

ಪುತ್ತೂರು: 9 ವರ್ಷದಿಂದ ಬಾಡಿಗೆ ಮನೆಯಲ್ಲಿ ಜೊತೆಯಾಗಿ ವಾಸವಾಗಿದ್ದು , ಮದುವೆಯಾಗಲು ನಿರಾಕರಿಸಿ ಹಲ್ಲೆಗೈದು ಜೀವ ಬೆದರಿಕೆಯೊಡ್ಡಿದ್ದಾರೆ ಎಂದು ಆರೋಪಿಸಿ ಪುತ್ತೂರಿನ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಬಂಟ್ವಾಳ ತಾಲೂಕಿನ ವಿಟ್ಲಮುಡ್ನೂರು ಗ್ರಾಮದ ಬೊಳಂತಿಮೊಗರು ಕಂಬಳಬೆಟ್ಟು ನಿವಾಸಿ ರೇಷ್ಮಾ ಪರ್ವಿನ್(40ವ.)ಎಂಬವರು ಕಡಬ ತಾಲೂಕಿನ ಕೆಮ್ಮಾರ ನಿವಾಸಿ ಮುಹಮ್ಮದ್ ಮುಸ್ತಾಫ ಹಾಗೂ ಆತನ ತಾಯಿ, ಅಕ್ಕನ ವಿರುದ್ಧ ದ.ಕ.ಜಿಲ್ಲಾ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.


ದೂರುದಾರ ಮಹಿಳೆಗೆ 20 ವರ್ಷದ ಹಿಂದೆ ಸುರತ್ಕಲ್‌ನ ಸಿರಾಜ್ ಎಂಬವರೊಂದಿಗೆ ವಿವಾಹವಾಗಿದ್ದು 19 ವರ್ಷದ ಮಗನಿದ್ದಾನೆ. 17 ವರ್ಷದ ಹಿಂದೆ ಸಿರಾಜ್‌ನಿಂದ ವಿವಾಹ ವಿಚ್ಚೇದನ ಪಡೆದುಕೊಂಡು ಬಾಡಿಗೆ ಮನೆಯಲ್ಲಿ ಮಗನೊಂದಿಗೆ ವಾಸವಾಗಿದ್ದೆ. 10 ವರ್ಷದ ಹಿಂದೆ ಕಡಬ ತಾಲೂಕಿನ ಕೆಮ್ಮಾರ ನಿವಾಸಿ ಮಹಮ್ಮದ್ ಮುಸ್ತಾಫ ಎಂಬವರ ಪರಿಚಯವಾಗಿ ಅವರೊಂದಿಗೆ 9 ವರ್ಷದಿಂದ ಪುರುಷರಕಟ್ಟೆಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೆ.ಮಗನೂ ಜೊತೆಗಿದ್ದು ನಾನು ಮತ್ತು ಮುಸ್ತಫ ವಿವಾಹ ಮಾಡಿಕೊಂಡಿರುವುದಿಲ್ಲ. 3 ತಿಂಗಳ ನಂತರ ಬನ್ನೂರು ಕೆ.ಎಂ ಸ್ಟೋರ್ ಹತ್ತಿರ ಬಾಡಿಗೆ ಮನೆ ಮಾಡಿದ್ದು ಅಲ್ಲಿ ಮಗ ಮತ್ತು ಮುಸ್ತಫನೊಂದಿಗೆ ವಾಸವಾಗಿದ್ದೆ. 1 ತಿಂಗಳಿನಿಂದ ಮುಸ್ತಫ ಮನೆಗೆ ಖರ್ಚಿಗೆ ಹಣ ನೀಡದೇ ಇದ್ದುದರಿಂದ ಅವರ ವಿರುದ್ಧ ಸಾಂತ್ವನ ಕೇಂದ್ರಕ್ಕೆ ದೂರು ನೀಡಿದ್ದೆ. ಅಲ್ಲಿ ವಿಚಾರಣೆ ವೇಳೆ 15 ದಿನದ ಬಳಿಕ ಮುಸ್ಲಿಂ ಸಂಪ್ರದಾಯದಂತೆ ನನ್ನನ್ನು ಮದುವೆಯಾಗುವುದಾಗಿ ಮುಸ್ತಫ ಹೇಳಿಕೆ ನೀಡಿದ್ದರು. ಡಿ.12ರಂದು ಮುಸ್ತಫನಿಗೆ ಪೋನ್ ಕರೆ ಮಾಡಿದಾಗ ನಿಖಾ ಮಾಡುವುದಿಲ್ಲ ಎಂದು ಹೇಳಿ ಕರೆ ಕಟ್ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅದೇ ದಿನ ಮಧ್ಯಾಹ್ನ 1.30ಕ್ಕೆ ಕೆಮ್ಮಾರದಲ್ಲಿರುವ ಮುಸ್ತಫರವರ ತಾಯಿ ಮನೆಗೆ ಹೋದಾಗ ಮುಸ್ತಫರವರ ಮನೆಯಲ್ಲಿ ಅವರ ತಾಯಿ ಜೈನಾಬಿ, ಅಕ್ಕ ಶಾಹೀದಾ ಹಾಗೂ ಮುಸ್ತಫ ಇದ್ದು ಈ ವೇಳೆ ಮುಸ್ತಫರವರಲ್ಲಿ ಮದುವೆಯಾಗುವಂತೆ ಕೇಳಿಕೊಂಡಾಗ ನಿನ್ನನ್ನು ಮದುವೆಯಾಗುವುದಿಲ್ಲ ಎಂದು ಹೇಳಿ ದೂಡಿದ್ದು ಅಲ್ಲದೇ ಬಲಕೆನ್ನೆಗೆ ಕೈಯಿಂದ ಹೊಡೆದಿದ್ದಾರೆ. ಆ ವೇಳೆ ಮುಸ್ತಫರವರ ತಾಯಿ ಮತ್ತು ಅಕ್ಕ ಕೈಯಿಂದ ಹೊಡೆದಿದ್ದಾರೆ. ಇನ್ನು ಮುಂದಕ್ಕೆ ನಮ್ಮ ಮನೆಯ ಬಾಗಿಲಿಗೆ ಬಂದರೆ ನಿನ್ನನ್ನು ಕೊಲ್ಲದೇ ಬಿಡುವುದಿಲ್ಲ ಎಂದು ಶಾಹೀದಾ ಅವರು ಬೆದರಿಕೆ ಹಾಕಿದ್ದಾರೆ. ಇನ್ನು ಮುಂದಕ್ಕೆ ನಮ್ಮ ಮನೆಯ ಬಾಗಿಲಿಗೆ ಬರಬಾರದು ಎಂದು ಜೈನಾಬಿ ಅವರು ಬೈದಿರುತ್ತಾರೆ. ನಂತರ ಪುತ್ತೂರಿನ ಬಾಡಿಗೆಗೆ ಮನೆಗೆ ಬಂದ ವೇಳೆ ಕಿವಿ, ಕುತ್ತಿಗೆ ಭಾಗಕ್ಕೆ ನೋವಾಗಿದ್ದರಿಂದ ಚಿಕಿತ್ಸೆ ಬಗ್ಗೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿರುವುದಾಗಿ ರೇಷ್ಮಾ ಪರ್ವಿನ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಮಹಿಳೆ ದೂರಿನಂತೆ ದ.ಕ ಮಹಿಳಾ ಪೊಲೀಸ್ ಠಾಣೆಯಲ್ಲಿ ಅ.ಕ್ರ: 62/2024 ಕಲಂ: 75, 352, 351(2), 115(2) ಜೊತೆಗೆ 3(5) ಬಿ.ಎನ್.ಎಸ್ 2023ರಂತೆ ಪ್ರಕರಣ ದಾಖಲಾಗಿರುತ್ತದೆ.

LEAVE A REPLY

Please enter your comment!
Please enter your name here