ಜಿಲ್ಲಾಧಿಕಾರಿ ನಿರ್ದೇಶನ ನೀಡಿದರೂ ಆಗದ ಆಧಾರ್ ಕಾರ್ಡ್- ಪ್ರಧಾನ ಮಂತ್ರಿಗೆ ಮನವಿ
ಕಡಬ: ಐತ್ತೂರು ಗ್ರಾಮದ ಶಿವಾಜಿನಗರ ನಿವಾಸಿ ಅಹ್ಮದ್ ಕುಂಞ ಎಂಬವರ ಪುತ್ರ ಮಹಮ್ಮದ್ ಆಸಿಫ್ ಅಂಗವಿಕಲರಾಗಿದ್ದು, ಇವರಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಈ ಹಿಂದೆ ಜಿಲ್ಲಾಧಿಕಾರಿಯವರಿಗೆ ಮನವಿ ಮಾಡಲಾಗಿದ್ದು, ಮನವಿಗೆ ಸ್ಪಂದಿಸಿ, ಯುವಕನಿಗೆ ಆಧಾರ್ ಕಾರ್ಡ್ ಮಾಡಿಕೊಡುವಂತೆ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದರೂ ಇದುವರೆಗೆ ಆಧಾರ್ ಕಾರ್ಡ್ ಆಗದ ಹಿನ್ನಲೆಯಲ್ಲಿ ಕಡಬ ತಾಲೂಕು ಕಛೇರಿ ಎದುರಿನಲ್ಲಿ ಅಂಗವಿಕಲ ಯುವಕ ಹಾಗೂ ಆತನ ತಾಯಿ ಮತ್ತು ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ್ ಗೊಳ್ಯಾಡಿಯವರ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರಿಗೆ ಕಡಬ ತಾಲೂಕು ಕಛೇರಿಯ ಮೂಲಕ ಮನವಿ ಸಲ್ಲಿಸಲಾಯಿತು.
ಶಾಶ್ವತ ಅಂಗವಿಕಲತೆ ಹೊಂದಿ ಪೂರ್ಣ ಪ್ರಮಾಣದಲ್ಲಿ ಮಲಗಿದಲ್ಲೇ ಇರುವ ಮಹಮ್ಮದ್ ಆಸಿಫ್ ಅವರಿಗೆ ಸರಕಾರಿ ಸವಲತ್ತು ಪಡೆಯಲು ಹಲವಾರು ಬಾರಿ ಆಧಾರ್ ನೋಂದಣಿ ಮಾಡಲು ಪ್ರಯತ್ನಿಸಿ ವಿಫಲರಾಗಿದ್ದಾರೆ. ಇದರಿಂದ ಅವರು ಪಡಿತರ ಚೀಟಿ ವಂಚಿತರಾಗಿದ್ದು ಈ ಬಗ್ಗೆ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಲಾಗಿತ್ತು. ಕೂಡಲೇ ಆಧಾರ್ ನೋಂದಣಿ ಮಾಡಿಕೊಡುವಂತೆ ಜಿಲ್ಲಾ ಆಧಾರ್ ಸೇವಾ ಕೇಂದ್ರದವರಿಗೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದರೂ ಇದುವರೆಗೆ ಆಧಾರ್ ಕಾರ್ಡ್ ಮಾಡಿಸಲು ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಐತ್ತೂರು ಗ್ರಾ.ಪಂ. ಸದಸ್ಯ ಮನಮೋಹನ ಗೊಳ್ಯಾಡಿಯವರ ನೇತೃತ್ವದಲ್ಲಿ ಪ್ರಧಾನ ಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಐತ್ತೂರು ಗ್ರಾ.ಪಂ. ಅಧ್ಯಕ್ಷೆ ವತ್ಸಲಾ, ಸದಸ್ಯರಾದ ನಾಗೇಶ್ ಕೋಕಲ, ಪ್ರಮುಖರಾದ ಸೈಯದ್ ಮೀರಾ ಸಾಹೇಬ್, ಟೋನಿ, ರಶೀದ್, ಮೋನಪ್ಪ ಪೂಜಾರಿ, ಅಬ್ಬಾಸ್, ಲಿಂಗಪ್ಪ ಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಎಸಿಯವರ ಸೂಚನೆ: ಯುವಕನ ಮನೆಗೆ ಹೋಗಿ ಆಧಾರ್ ನೋಂದಣಿ
ವಿಶೇಷ ಚೇತನ ಯುವಕ ಮಹಮ್ಮದ್ ಆಸಿಫ್ ಅವರಿಗೆ ಆಧಾರ್‌ಕಾರ್ಡ್ ಮಾಡಿಕೊಡದೆ ನಿರ್ಲಕ್ಷ್ಯ ವಹಿಸಿರುವ ವಿಚಾರದಲ್ಲಿ ಪ್ರಧಾನಮಂತ್ರಿಯವರಿಗೆ ಮನವಿ ಸಲ್ಲಿಸಲಾದ ಬೆನ್ನಲ್ಲೇ ಈ ವಿಚಾರದ ಕುರಿತು ಮಾಧ್ಯಮದವರು ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಾಪಾತ್ರ ಅವರ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಕೂಡಲೇ ಆಧಾರ್ ನೋಂದಣಿ ಮಾಡಿಸುವಂತೆ ಶುಕ್ರವಾರ ರಾತ್ರಿಯೇ ಕಡಬ ತಹಶಿಲ್ದಾರ್ ಪ್ರಭಾಕರ ಖಜೂರೆ ಅವರಿಗೆ ಎಸಿಯವರು ಮೌಖಿಕ ಸೂಚನೆ ನೀಡಿದ್ದರು. ಶನಿವಾರವೇ ಆಧಾರ್ ಕಾರ್ಡ್ ಪ್ರಕ್ರಿಯೆ ಮಾಡಿಸುವ ಬಗ್ಗೆ ಭರವಸೆ ನೀಡಿದ್ದರು. ಈ ಬೆನ್ನಲ್ಲೇ ಕಡಬ ತಹಶೀಲ್ದಾರ್ ನೇತೃತ್ವದ ತಂಡ ಹಾಗೂ ಮಂಗಳೂರಿನಿಂದ ಆಗಮಿಸಿದ ಆಧಾರ್ ಸೇವಾ ಕೇಂದ್ರದವರು ವಿಕಲಚೇತನರ ಮನೆಗೆ ಹೋಗಿ ಆಧಾರ್ ಕಾರ್ಡ್ ಮಾಡಿಸುವ ಪ್ರಕ್ರಿಯೆಯನ್ನು ಮಾಡಿ ಮುಗಿಸಿದ್ದಾರೆ.
ಜನರ ಸೇವೆ ನಮ್ಮ ಕರ್ತವ್ಯ ಮಾಡಿದ್ದೇವೆ-ಜುಬಿನ್ ಮೊಹಪಾತ್ರ
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಎಸಿಯವರು ಅಂಗವಿಕಲ ಯುವಕನಿಗೆ ಆಧಾರ್ ಇಲ್ಲದಿರುವ ಬಗ್ಗೆ ನಿನ್ನೆಯಷ್ಟೆ ತಿಳಿಯಿತು. ನಾನು ಕೂಡಲೇ ಆಧಾರ್ ಸೇವಾ ಕೇಂದ್ರದವರನ್ನು ಸಂಪರ್ಕಿಸಿ ಆಧಾರ್ ಮಾಡಿ ಕೊಡುವ ಬಗ್ಗೆ ಸೂಚನೆ ನೀಡಿದ್ದೇನೆ ಅದರಂತೆ ಶನಿವಾರವೇ ಕಡಬ ತಹಶೀಲ್ದಾರ್ ವಾಹನದಲ್ಲಿ ಯುವಕನ ಮನೆಗೆ ಹೋಗಿ ಆಧಾರ್ ನೋಂದಣಿ ಮಾಡಿದ್ದಾರೆ. ಕೆಲವೇ ದಿನದಲ್ಲಿ ಯುವಕನಿಗೆ ಆಧಾರ ಕಾರ್ಡ್ ಕೈ ಸೇರಲಿದೆ ಇದು ನಮ್ಮ ಕರ್ತವ್ಯ ಅಷ್ಟೆ ಅದನ್ನು ಮಾಡಿದ್ದೇವೆ ಎಂದು ಹೇಳಿದ್ದಾರೆ.
ಎ.ಸಿ.ಯವರ ನಡೆಗೆ ಸಾರ್ವಜನಿಕರ ಶ್ಲಾಘನೆ
ಜಿಲ್ಲಾಧಿಕಾರಿಯವರ ಆದೇಶ ಇದ್ದರೂ ಆಧಾರ್ ಸೇವಾ ಕೇಂದ್ರದವರಾಗಲಿ, ಕಡಬ ತಾಲೂಕು ಆಡಳಿತ ಹಲವು ಸಮಯದಿಂದ ಯಾವುದೇ ಕ್ರಮ ಕೈಗೊಳ್ಳದೆ ಇದ್ದರೂ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ ಅವರ ಗಮನಕ್ಕೆ ಬಂದ ಕೂಡಲೇ ವಿಕಲಾಂಗ ಯುವಕನಿಗೆ ಆಧಾರ್ ನೋಂದಣಿ ಆಗಿರುವುದರಿಂದ ಎ.ಸಿ.ಯವರ ನಡೆಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.