ಪುತ್ತೂರಿನ ಅಭಿವೃದ್ದಿಗೆ ಮತ್ತೊಂದು ಗರಿಮೆ: ಶಾಸಕ ಅಶೋಕ್ ರೈ
ಪುತ್ತೂರು: ಪುತ್ತೂರಿನ ಆರ್ಯಾಪು ಗ್ರಾಮದ ಕುರಿಯದಲ್ಲಿ ಕಾರ್ಮಿಕ ಇಲಾಖೆಯ ವತಿಯಿಂದ ಕಾರ್ಮಿಕರ ಮಕ್ಕಳಿಗಾಗಿ ವಸತಿ ಶಾಲೆ ಮಂಜೂರುಗೊಂಡಿದ್ದು, ಇದಕ್ಕಾಗಿ ಏಳು ಎಕ್ರೆ ಜಾಗವನ್ನು ಕಾರ್ಮಿಕ ಇಲಾಖೆಗೆ ಮಂಜೂರು ಮಾಡಲಾಗಿದ್ದು, ಸುಮಾರು 70 ಕೋಟಿ ವೆಚ್ಚದಲ್ಲಿ ಆ ವಸತಿ ಶಾಲೆ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭವಾಗುವ ನಿರೀಕ್ಷೆಯನ್ನು ಹೊಂದಿದ್ದು ಇದು ಪುತ್ತೂರಿನ ಅಭಿವೃದ್ದಿಗೆ ಮತ್ತೊಂದು ಗರಿಮೆಯಾಗಿದೆ ಎಂದು ಪುತ್ತೂರು ಶಾಸಕರಾದ ಅಶೋಕ್ ರೈ ಹೇಳಿದರು.
ಅವರು ಶಾಸಕರ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಕಾರ್ಮಿಕ ಇಲಾಖೆಗೆ ಮಂಜೂರುಗೊಂಡಿರುವ ಜಾಗದ ಪಹಣಿಪತ್ರವನ್ನು ಹಸ್ತಾಂತರಿಸಿ ಮಾತನಾಡಿದರು.
ಕರ್ನಾಟಕದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ಬಳಿಕ ಅಭಿವೃದ್ದಿ ಕಾರ್ಯ ಎಲ್ಲೆಡೆ ನಡೆಯುತ್ತಿದೆ. ಕರ್ನಾಟಕದಲ್ಲಿ ಒಟ್ಟು 32 ಕಾರ್ಮಿಕ ವಸತಿ ಶಾಲೆಯನ್ನು ಮಂಜೂರು ಮಾಡಿದೆ, ಈ ಪೈಕಿ ಜಾಗ ಮಂಜೂರುಗೊಂಡ ಸುಮಾರು 28 ಕಡೆಗಳಲ್ಲಿ ಈ ಶಾಲೆಯನ್ನು ಮಂಜೂರುಗೊಳಿಸಿ ಸರಕಾರ ಅನುಮೋದಿಸಿದೆ. ದ ಕ ಜಿಲ್ಲೆಯ ವಸತಿ ಶಾಲೆ ಪುತ್ತೂರಿಗೆ ಮಂಜೂರುಗೊಂಡಿರುವುದು ನಮಗೆಲ್ಲಾ ಹೆಮ್ಮೆಯನ್ನು ತಂದಿದೆ. ಇದಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹಾಗೂ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಪುತ್ತೂರು ಜನತೆಯ ಪರವಾಗಿ ಅಭಿನಂದನೆಯನ್ನು ಸಲ್ಲಿಸುವುದಾಗಿ ಹೇಳಿದರು.
ಕಾರ್ಮಿಕರ ಮಕ್ಕಳಿಗಾಗಿಯೇ ಇರುವ ಶಾಲೆ
ಹೊಸದಾಗಿ ಪ್ರಾರಂಭವಾಗಲಿರುವ ಶಾಲೆಯಲ್ಲಿ ಕಾರ್ಮಿಕರ ಮಕ್ಕಳನ್ನು ಮಾತ್ರ ದಾಖಲಾತಿ ಮಾಡಲಾಗುತ್ತದೆ. ಇಲ್ಲಿ ಒಂದನೇ ತರಗತಿಯಿಂದ ದ್ವಿತೀಯ ಪಿಯುಸಿ ತನಕ ಒಂದೇ ಸೂರಿನಡಿ ಶಿಕ್ಷಣ ದೊರೆಯುತ್ತದೆ. ಈಗಾಗಲೇ ಕಾರ್ಮಿಕ ಇಲಾಖೆಯಡಿ ಸದಸ್ಯತ್ವ ನೋಂದಣಿ ಹೊಂದಿರುವ ಕುಟುಂಬದ ಮಕ್ಕಳಿಗೆ ಈ ವಸತಿ ಶಾಲೆಯನ್ನು ಕಲಿಯುವ ಅವಕಾಶವನ್ನು ಒದಗಿಸಲಾಗುತ್ತದೆ. 40 ಕೋಟಿ ರೂ ವೆಚ್ಚದಲ್ಲಿ ಕಟ್ಟಡ ಕಾಮಗಾರಿಗಳು ನಡೆಯಲಿದ್ದು ಉಳಿದ ಪರಿಕರಗಳು ಸೇರಿ ಒಟ್ಟು 70 ಕೋಟಿ ವೆಚ್ಚದಲ್ಲಿ ಈ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ. ಆಡದ ಮೈದಾನ ಸೇರಿಂತೆ ಎಲ್ಲಾ ಸೌಲಭ್ಯಗಳು ಈ ವಸತಿ ಶಾಲೆಯಲ್ಲಿ ಮಕ್ಕಳಿಗೆ ದೊರೆಯಲಿದೆ ಎಂದು ಶಾಸಕರು ಹೇಳಿದರು.
ದ ಕ ಜಿಲ್ಲೆಯಲ್ಲಿ 80 ಸಾವಿರ ಕಾರ್ಮಿಕರು
ಜಿಲ್ಲಾ ಹಿರಿಯ ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬೆತ್ ತಾವ್ರೋ ಮಾತನಾಡಿ, ದಕ ಜಿಲ್ಲೆಯಲ್ಲಿ 80 ಸಾವಿರ ಕಾರ್ಮಿಕರು ನೋಂದಾವಣೆಯಾಗಿದ್ದಾರೆ. ಬಜೆಟ್ನಲ್ಲಿ ಘೋಷಣೆಯಾದ ಕಾರ್ಮಿಕ ವಸತಿ ಶಾಲೆಯು ಶಾಸಕರ ಮುತುವರ್ಜಿಯಿಂದ ಪುತ್ತೂರಿಗೆ ಮಂಜೂರಾಗಿದೆ. ಕಂದಾಯ ಇಲಾಖೆ ಏಳು ಎಕ್ರೆ ಜಾಗವನ್ನು ನಮ್ಮ ಇಲಾಖೆಗೆ ಹಸ್ತಾಂತರ ಮಾಡಿದ್ದು ಮುಂದಿನ ದಿನಗಳಲ್ಲಿ ಇಲ್ಲಿನ ಕಟ್ಟಡ ಕಾಮಗಾರಿಗೆ ಚಾಲನೆ ದೊರೆಯಲಿದೆ ಎಂದು ಹೇಳಿದರು.
ಪುತ್ತೂರು ತಹಶಿಲ್ದಾರ್ ಎಸ್ ಬಿ ಕೂಡಲಗಿ ಮಾತನಾಡಿ, ಶಾಸಕರ ಸೂಚನೆಯ ಪ್ರಕಾರ ನಾವು ಕುರಿಯದಲ್ಲಿ ಸುಮಾರು ಏಳು ಎಕ್ರೆ ಜಾಗವನ್ನು ಕಾರ್ಮಿಕ ಇಲಾಖೆಗೆ ಮಂಜೂರು ಮಾಡಿದ್ದೇವೆ. ಪುತ್ತೂರಿನಲ್ಲಿ ಕಾರ್ಮಿಕ ವಸತಿ ಶಾಲೆ ಮಂಜೂರುಗೊಂಡಿದ್ದು ಸಂತಸದ ವಿಚಾರವಾಗಿದೆ. ಇಚ್ಚಾಶಕ್ತಿ ಇದ್ದರೆ ಯಾವುದೇ ಕೆಲಸವನ್ನು ಮಾಡಬಹುದು ಎಂಬುದಕ್ಕೆ ಶಾಸಕ ಅಶೋಕ್ ರೈ ಅವರೇ ಉದಾಹರಣೆಯಾಗಿದ್ದಾರೆ. ಪುತ್ತೂರಿನಲ್ಲಿ ಇನ್ನಷ್ಟು ಅಭಿವೃದ್ದಿ ಕೆಲಸಗಳು ನಡೆಯಲಿದೆ. ನಾನು ತಹಶಿಲ್ದಾರ್ ಆಗಿ ನೇಮಕವಾದ ಬಳಿಕ ಪುತ್ತೂರಿನಲ್ಲಿ ಹಲವು ಜಾಗವನ್ನು ವಿವಿಧ ಸರಕಾರಿ ಇಲಾಖೆಗೆ ಸಾರ್ವಜನಿಕರ ಹಿತಕ್ಕಾಗಿ ಮಂಜೂರು ಮಾಡಿದ್ದೇವೆ . ಪುತ್ತೂರು ಅಭಿವೃದ್ದಿಯಾದರೆ ಎಲ್ಲರಿಗೂ ಅದು ಹಿತಕಾರಿಯಾಗಿ ಮೂಡಿಬರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಉಪತಹಶಿಲ್ದಾರ್ ರವಿಕುಮಾರ್, ಕಾರ್ಮಿಕ ನಿರೀಕ್ಷಕ ಗಣಪತಿ ಹೆಗಡೆ,ಕಾರ್ಮಿಕ ಇಲಾಖೆಯ ಕಾರ್ಯ ನಿರ್ವಾಹಕರಾದ ರಮೇಶ್, ಕಂದಾಯ ನಿರೀಕ್ಷಕ ಗೋಪಾಲ ಉಪಸ್ಥಿತರಿದ್ದರು.