ಪುತ್ತೂರು ತಾಲೂಕು ಸರಕಾರಿ ವಾಹನ ವಾಹನ ಚಾಲಕರ ಸಂಘದ`ಸಾರಥಿ ಭವನ’ದ ಬೆಳ್ಳಿಹಬ್ಬದ ಸಮಾರಂಭ

0

ಸಮಾಜದಲ್ಲಿನ ವ್ಯವಸ್ಥೆಗೆ ಸರಕಾರಿ ವಾಹನ ಚಾಲಕರ ಕೊಡುಗೆ ಅನನ್ಯ-ಜುಬಿನ್ ಮೊಹಾಪಾತ್ರ

ಪುತ್ತೂರು:ಸರಕಾರಿ ವಾಹನ ಚಾಲಕರದ್ದು ಬರೀ ವೃತ್ತಿ ಅಲ್ಲ. ಸರಕಾರಿ ವ್ಯವಸ್ಥೆಯಲ್ಲಿ ಅಧಿಕಾರಿಗಳು ಕೆಲವೊಮ್ಮೆ ತುರ್ತು ಪರಿಸ್ಥಿತಿಯನ್ನು ಎದುರಿಸುವ ಸಂದರ್ಭ ತಮ್ಮ ವಾಹನ ಚಾಲಕರೇ ಪರಿಹಾರ ನೀಡುವ ಮೂಲಕ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಆದ್ದರಿಂದ ಸರಕಾರಿ ವಾಹನ ಚಾಲಕರು ಸಮಾಜದಲ್ಲಿನ ವ್ಯವಸ್ಥೆಗೆ, ಸಮಾಜಕ್ಕೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಪುತ್ತೂರು ಸಹಾಯಕ ಆಯುಕ್ತರಾದ ಜುಬಿನ್ ಮೊಹಾಪಾತ್ರರವರು ಹೇಳಿದರು.


ಕರ್ನಾಟಕ ರಾಜ್ಯ ಸರಕಾರದ ವಾಹನ ಚಾಲಕರ ಸಂಘ(ರಿ.) ಬೆಂಗಳೂರು ಇದರ ಪುತ್ತೂರು ಶಾಖೆಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಪುತ್ತೂರಿನ ಹೃದಯಭಾಗವಾದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಬಳಿಯಿರುವ ಸಾರಥಿ ಭವನದ ಬೆಳ್ಳಿಹಬ್ಬದ ಸಮಾರಂಭವು ಡಿ.14 ರಂದು ಮಿನಿ ವಿಧಾನಸೌಧದ ಬಳಿಯ ತಾಲೂಕು ಸರಕಾರಿ ನೌಕರರ ಸಮುದಾಯ ಭವನದಲ್ಲಿ ಜರಗಿದ್ದು, ಈ ಸಮಾರಂಭದಲ್ಲಿ ಸಂಘದ ಬೆಳ್ಳಿಹಬ್ಬದ `ಸ್ಮರಣ ಸಂಚಿಕೆ’ಯನ್ನು ಅನಾವರಣಗೊಳಿಸಿ ಅವರು ಮಾತನಾಡಿದರು.

ಸರಕಾರಿ ಅಧಿಕಾರಿಗಳಿಗೆ ಸಮರ್ಥ ಚಾಲಕರಿಲ್ಲದಿದ್ದರೆ ಯಾವುದೇ ಕೆಲಸ ಆಗುವುದಿಲ್ಲ. ಯಾವುದೇ ತುರ್ತು ಪರಿಸ್ಥಿತಿಯಿರಲಿ, ಅಧಿಕಾರಿಗಳಿಗೆ ಆ ಸಂದರ್ಭದಲ್ಲಿ ನೆರವು ಕೊಡುವವರು ಚಾಲಕರು. ಭೂಕುಸಿತ ಅಥವಾ ಇನ್ನಿತರ ಪರಿಸ್ಥಿತಿಗಳಲ್ಲಿ ಘಟನೆ ನಡೆದ ಸಂದರ್ಭದಲ್ಲಿ ಸ್ಥಳಕ್ಕೆ ತಲುಪಿಸುವಲ್ಲಿ ನಮ್ಮ ಸಾರಥಿ ಚಾಲಕರು ಕಾರಣರಾಗಿದ್ದಾರೆ ಎಂದರು.


ಯಾರನ್ನೂ ನೋಯಿಸದೆ ಎಲ್ಲರನ್ನು ಒಗ್ಗಟ್ಟಿನಿಂದ ಕಂಡಾಗ ಎಲ್ಲವೂ ಸುಸೂತ್ರ-ಸವಣೂರು ಸೀತಾರಾಮ ರೈ:
ಸವಣೂರು ವಿದ್ಯಾರಶ್ಮಿ ವಿದ್ಯಾಲಯದ ಸಂಚಾಲಕ ಸವಣೂರು ಸೀತಾರಾಮ ರೈಯವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, ಸಂಘವನ್ನು ಕಟ್ಟುವುದು ಸುಲಭ. ಆದರೆ ಸಂಘವನ್ನು ಮುಂದುವರೆಸುವುದು ಅದು ಸಾರ್ವಜನಿಕ ಜೀವನದಲ್ಲಿ ಇರುವವರಿಗೆ ಮಾತ್ರ ಗೊತ್ತಿದೆ. ಸಂಘದ ಸದಸ್ಯರನ್ನು ನೋಯಿಸದೆ ಎಲ್ಲರನ್ನು ಒಗ್ಗಟ್ಟಿನಿಂದ ಕೊಂಡೊಯ್ದಾಗ ಮಾತ್ರ ಸಂಘವು ಯಶಸ್ವಿಯಾಗಿ ಮುನ್ನೆಡೆಯಲು ಸಾಧ್ಯ ಎಂಬುದು ಸಾರಥಿ ಭವನದ ಬೆಳ್ಳಿಹಬ್ಬ ಆಚರಿಸಿದ ಸರಕಾರಿ ವಾಹನ ಚಾಲಕರ ಸಂಘವೇ ಸಾಕ್ಷಿಯಾಗಿದೆ ಎಂದ ಅವರು ಅಧಿಕಾರಿಗಳನ್ನು ಕ್ಲಪ್ತ ಸಮಯದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯುವವರು ಚಾಲಕರು. ಒಳ್ಳೆಯತನ, ವಿಶ್ವಾಸತನದೊಂದಿಗೆ ಜವಾಬ್ದಾರಿ ಸ್ಥಾನದಲ್ಲಿ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.


ಅಧಿಕಾರಿಗಳು ನೆಚ್ಚಿನ ಅಧಿಕಾರಿಗಳಾಬೇಕಾದರೆ ಚಾಲಕರು ಕಾರಣ-ಇಬ್ರಾಹಿಂ ಗೂನಡ್ಕ:
ಬೆಂಗಳೂರು ವಿಧಾನಸೌಧದ ನಿವೃತ್ತ ಉಪ ಕಾರ್ಯದರ್ಶಿ ಇಬ್ರಾಹಿಂ ಗೂನಡ್ಕ ಮಾತನಾಡಿ, ನನ್ನ ಜನ್ಮ ಸುಳ್ಯದಲ್ಲಿ ಆದರೆ ಮರುಜನ್ಮ ಸಿಕ್ಕಿರುವುದು ಮುತ್ತಿನ ನಗರಿ ಪುತ್ತೂರಿನಲ್ಲಿ. ಅಧಿಕಾರಿಗಳು ನೆಚ್ಚಿನ ಅಧಿಕಾರಿಗಳಾಬೇಕಾದರೆ ಅದಕ್ಕೆ ಕಾರಣ ಅವರ ಚಾಲಕರು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಾಗ ಆ ಘಟನೆಗಳ ಮಾಹಿತಿಯು ಮೊದಲಾಗಿ ಸಾರ್ವಜನಿಕರಿಂದ ಸಿಗುವುದು ಚಾಲಕರಿಂದ. ಪುತ್ತೂರಿನಲ್ಲಿ ಯಾರೇ ಅಧಿಕಾರಿಗಳು ಸೇವೆ ಸಲ್ಲಿಸಲಿ, ಮುಂದೊಂದು ದಿನ ಅವರು ಉನ್ನತ ಹುದ್ದೆಯಲ್ಲಿ ನಿವೃತ್ತರಾಗುತ್ತಾರೆ ಎಂದರು.


ಟೀಕೆ, ಟಿಪ್ಪಣಿಗಳನ್ನು ಎದುರಿಸಿ ಸಂಘವನ್ನು ಕಟ್ಟಿ ಬೆಳೆಸಿದ ಕೀರ್ತಿ ಮೌರಿಸ್‌ರವರಿಗೆ ಸಲ್ಲುತ್ತದೆ-ಪದ್ಮನಾಭ ಜೋಗಿ:
ಕರ್ನಾಟಕ ರಾಜ್ಯ ಸರಕಾರಿ ವಾಹನ ಚಾಲಕರ ಸಂಘದ ಜಿಲ್ಲಾಧ್ಯಕ್ಷ ಪದ್ಮನಾಭ ಜೋಗಿ ಮಾತನಾಡಿ, ಸಂಘ-ಸಂಸ್ಥೆಗಳು ಕಟ್ಟುವುದು ದೊಡ್ಡದಲ್ಲ. ಆದರೆ ಅವನ್ನು ಉಳಿಸಿ ಬೆಳೆಸುವುದು ಬಹಳ ಮುಖ್ಯ. ಸಾರಥಿ ಭವನಕ್ಕೆ ಬೆಳ್ಳಿಹಬ್ಬ ತುಂಬಿದರೂ ಅದರ ಹಿಂದೆ ಸರಕಾರಿ ವಾಹನ ಚಾಲಕರ ಶ್ರಮ ನಿಜಕ್ಕೂ ಮೆಚ್ಚುವಂತಹುದು. ಬಹಳಷ್ಟು ಟೀಕೆ, ಟಿಪ್ಪಣಿಗಳನ್ನು ಎದುರಿಸಿ ಸಂಘವನ್ನು ಕಟ್ಟಿ ಬೆಳೆಸಿದ ಕೀರ್ತಿ ಮೌರಿಸ್ ಮಸ್ಕರೇನ್ಹಸ್‌ರವರಿಗೆ ಸಲ್ಲುತ್ತದೆ ಎಂದ ಅವರು ಸರಕಾರಿ ಕೆಲಸ ಅಲ್ಲ ಅದು ಸೇವೆ. ಸಂಘವು ರಾತ್ರೋ ರಾತ್ರಿ ನೆರವಾಗುವ ಮೆಸ್ಕಾಂ ನೌಕರರನ್ನು, ಪರಿಸರವನ್ನು ಸ್ವಚ್ಛವನ್ನಾಗಿಸುವ ಪೌರ ಕಾರ್ಮಿಕರನ್ನು ಗುರುತಿಸಿ ಸನ್ಮಾನಿಸಿರುವುದು ಹೆಗ್ಗಳಿಕೆಯಾಗಿದೆ ಎಂದರು. ನೋಡಿ ಕಲಿಯಬೇಕು, ಮಾಡಿ ಕಲಿಯಬೇಕು, ಕೂಡಿ ಬಾಳಬೇಕು ಎನ್ನುವುದು ಮೌರಿಸ್ ಮಸ್ಕರೇನ್ಹಸ್‌ರವರನ್ನು ನೋಡಿ ಕಲಿಯಬೇಕು. ಸರಕಾರಿ ವಾಹನ ಚಾಲಕರ ನೇಮಕಾತಿಗೆ ಸರಕಾರಿ ವಾಹನ ಚಾಲಕರ ರಾಜ್ಯಾಧ್ಯಕ್ಷರ ಮುಖೇನ ಸರಕಾರದ ಗಮನ ಸೆಳೆಯುವ ಪ್ರಯತ್ನ ಮಾಡಲಿದ್ದೇವೆ ಎಂದರು.


ಪ್ರಾಮಾಣಿಕತೆ, ನಿಷ್ಠೆಯಿದ್ದಾಗ ದೇವರು ಆರೋಗ್ಯ ಭಾಗ್ಯ, ನೆಮ್ಮದಿ ಕರುಣಿಸುತ್ತಾರೆ-ಎಚ್.ಪದ್ಮಕುಮಾರ್:
ನಿವೃತ್ತ ಕಂದಾಯ ನಿರೀಕ್ಷಕ ಎಚ್.ಪದ್ಮಕುಮಾರ್ ಮಾತನಾಡಿ, ಕಂದಾಯ ಇಲಾಖೆಯಲ್ಲಿ 36 ವರ್ಷ ಸೇವೆ ಸಲ್ಲಿಸಿ ನಿವೃತ್ತನಾದೆ. ಪುತ್ತೂರಿನಲ್ಲಿ ಗ್ರಾಮ ಲೆಕ್ಕಾಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರಕಾರಿ ವಾಹನ ಚಾಲಕರ ಸಂಘದ ಆಶಯದಂತೆ ಮೌರಿಸ್ ಮಸ್ಕರೇನ್ಹಸ್‌ರವರು ಅಧ್ಯಕ್ಷರಾಗಿದ್ದಾಗ ಸಂಘಕ್ಕೆ ನಿವೇಶನ ಹೊಂದಿಸಲು ಸಹಕರಿಸಿದ್ದೆ. ಯಾರು ಪ್ರಾಮಾಣಿಕತೆ ಹಾಗೂ ನಿಷ್ಠೆಯಿಂದ ತಮ್ಮ ಕರ್ತವ್ಯ ನಿರ್ವಹಿಸುತ್ತಾರೋ ಅವರಿಗೆ ದೇವರು ಆರೋಗ್ಯ ಭಾಗ್ಯ ಹಾಗೂ ನೆಮ್ಮದಿಯನ್ನು ದೇವರು ಕರುಣಿಸುತ್ತಾರೆ ಎಂದರು.


ಬೆಳ್ಳಿಹಬ್ಬದ ಸಮಾರಂಭದ ಪ್ರಯುಕ್ತ ಬೆಳಿಗ್ಗೆ ಗಣಹೋಮ ನೆರವೇರಿತು. ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಆರೋಹಣ ಮ್ಯೂಸಿಕ್‌ನ ಹರಿಣಿ ಗೌಡ, ಕರಣ್ ಗೌಡ ಪ್ರಾರ್ಥಿಸಿದರು. ತಾಲೂಕು ವಾಹನ ಚಾಲಕರ ಸಂಘದ ಅಧ್ಯಕ್ಷ ಎಂ.ಲೀಲಯ್ಯ ಸ್ವಾಗತಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ಕಮಾಲಾಕ್ಷ ಕೆ, ನಿವೃತ್ತ ಚಾಲಕ ಶ್ರೀಧರ್ ಮಣಿಯಾಣಿ ದಾಮೋದರ್, ವಾಸು, ದೇವಪ್ಪ ಗೌಡ, ನಾರಾಯಣ, ಚಾಲಕರಾದ ಸತೀಶ್ ವಿಜಯ್, ಸುಳ್ಯ ತಾಲೂಕು ಸಂಘದ ಅಧ್ಯಕ್ಷ ಪುಟ್ಟಣ್ಣರವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಕಾರ್ಯದರ್ಶಿ ಸತೀಶ್ ವಂದಿಸಿದರು. ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಹಾಗೂ ಇತರ ಗಣ್ಯರಿಗೆ ಶಾಲು ಹೊದಿಸುವ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ನಿರೂಪಕಿ ಹೇಮ ಜಯರಾಂ ರೈ ಕಾರ್ಯಕ್ರಮ ನಿರೂಪಿಸಿದರು.


ಜಿಲ್ಲಾ ಸರಕಾರಿ ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ನವೀನ್ ಕುಮಾರ್, ತಾಲೂಕು ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೃಷ್ಣಪ್ಪ ಕೆ, ಕಾರ್ಯದರ್ಶಿ ಅಬ್ರಹಾಂ ಎಸ್.ಎ, ಮಾಜಿ ರಾಜ್ಯ ಪರಿಷತ್ ಸದಸ್ಯ ಪುರುಷೋತ್ತಮ ಬಿ, ಬಂಟ್ವಾಳ ತಾಲೂಕು ಆರೋಗ್ಯ ಅಧಿಕಾರಿ ಡಾ.ಅಶೋಕ್ ಕುಮಾರ್ ರೈ, ಪುತ್ತೂರು ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್, ಎಪಿಎಂಸಿ ಕ್ರಿಸ್ಟೋಫರ್ ಸಮೂಹ ಸಂಸ್ಥೆಗಳ ಎಂ.ಡಿ ವಲೇರಿಯನ್ ಡಾಯಸ್ ಸಹಿತ ವಿವಿಧ ಇಲಾಖೆಯ ಸಿಬ್ಬಂದಿಗಳು, ಹಿತೈಷಿಗಳು ಉಪಸ್ಥಿತರಿದ್ದರು.

ನಿಜವಾದ ಸಾರಥಿ ಮೌರಿಸ್ ಮಸ್ಕರೇನ್ಹಸ್…
25 ವರ್ಷದ ಹಿಂದೆ ತಾ|ಸರಕಾರಿ ವಾಹನ ಚಾಲಕರ ಸಂಘದ ಸ್ಥಾಪಕಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಮೌರಿಸ್ ಮಸ್ಕರೇನ್ಹಸ್‌ರವರಿಗೆ ಈ ಸಾರಥಿ ಭವನದ ನಿರ್ಮಾಣ ಅಷ್ಟು ಕಷ್ಟವಾಗಿರಲಿಕ್ಕಿಲ್ಲ. ಆದರೆ ನೋಟು ಅಮಾನ್ಯೀಕರಣದ ಸಂದರ್ಭದಲ್ಲಿ ಇದೇ ಮೌರಿಸ್‌ರವರು ತಾಲೂಕು ಸರಕಾರಿ ನೌಕರರ ಸಂಘದ ತಮ್ಮ ಅಧ್ಯಕ್ಷಾವಧಿಯಲ್ಲಿ ಎಲ್ಲರನ್ನೂ ಒಗ್ಗೂಡಿಸಿಕೊಂಡು, ಎಲ್ಲರ ತ್ಯಾಗದ ಫಲವಾಗಿ ಈ ಸುಸಜ್ಜಿತ ಸರಕಾರಿ ನೌಕರರ ಸಂಘದ ಸಭಾಭವನವನ್ನು ನಿರ್ಮಿಸಿರುವುದು ಇತಿಹಾಸವೇ. ಓರ್ವ ಸರಕಾರಿ ವಾಹನ ಚಾಲಕನಾಗಿದ್ದು, ಸರಕಾರಿ ನೌಕರರ ಸಂಘವನ್ನು ಕಟ್ಟಿ, ಬೆಳೆಸಿ ಅದರ ಸಾರಥಿಯಂತೆ ಕೆಲಸ ಮಾಡಿರುವವರು ಮೌರಿಸ್‌ರವರು. ಇದೇ ಮೌರಿಸ್‌ರವರು ಕಟ್ಟಿಸಿದ ಸರಕಾರಿ ನೌಕರರ ಸಂಘವನ್ನು ನಾನು ಮುನ್ನೆಡೆಸುತ್ತಿರುವುದು ನನ್ನ ಭಾಗ್ಯ. ನಿಜಕ್ಕೂ ಮೌರಿಸ್ ಮಸ್ಕರೇನ್ಹಸ್‌ರವರು ಓರ್ವ ನಿಜವಾದ ಸಾರಥಿಯಾಗಿದ್ದಾರೆ.
-ಶಿವಾನಂದ ಆಚಾರ್ಯ, ಅಧ್ಯಕ್ಷರು, ತಾಲೂಕು ಸರಕಾರಿ ನೌಕರರ ಸಂಘ, ಪುತ್ತೂರು

ಕೈಜೋಡಿಸುವಿಕೆಯಿಂದ ಯಶಸ್ವಿ..
1993ರಲ್ಲಿ ಸಂಘವು ಜಿಲ್ಲಾ ಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವುದಾಗಿ, ಪುತ್ತೂರಿನಲ್ಲಿ ಸಂಘದ ತಾಲೂಕು ಶಾಖೆಯು ಕಾರ್ಯನಿರ್ವಹಿಸುತ್ತಿರುವ ವಿಚಾರವು ಬೆಳಕಿಗೆ ಬಂತು. ಈ ಸಂದರ್ಭದಲ್ಲಿ ತಾಲೂಕು ಶಾಖೆಯನ್ನು ಬಲಪಡಿಸುವುದಕ್ಕೆ ನಿರ್ಧರಿಸಿ, ಶಾಖೆಗೆ ಸರಕಾರದಿಂದ ನಿವೇಶನವನ್ನು ಮಂಜೂರು ಮಾಡಿಕೊಂಡು ಕಾರ್ಯಾಚರಿಸುವುದೆಂದು ತೀರ್ಮಾನಿಸಿದೆವು. ಅಂದಿನ ಸರಕಾರಿ ಅಧಿಕಾರಿಗಳ ಸಹಕಾರದಿಂದ ಸಂಘಕ್ಕೆ 3.5 ಸೆಂಟ್ಸ್ ನಿವೇಶನ ಮಂಜೂರಾಯಿತು. ಕಟ್ಟಡ ನಿರ್ಮಿಸಲು ಅಧಿಕಾರಿಗಳು, ಉದ್ಯಮಿ ಸವಣೂರು ಸೀತಾರಾಮ ರೈ ಸೇರಿದಂತೆ ಹಲವರು ನಮ್ಮೊಂದಿಗೆ ಕೈಜೋಡಿಸಿದ್ದರ ಪರಿಣಾಮವಾಗಿ ಇಂದು ನಮ್ಮ ಸಾರಥಿ ಭವನ ಕಟ್ಟಡವು ಬೆಳ್ಳಿಹಬ್ಬವನ್ನು ಆಚರಿಸುತ್ತಿದೆ ಎನ್ನಲು ಖುಶಿಯಾಗುತ್ತದೆ.
-ಮೌರಿಸ್ ಮಸ್ಕರೇನ್ಹಸ್, ಸ್ಥಾಪಕರು, ಸಾರಥಿ ಭವನ

ಸನ್ಮಾನ..
ಈ ಸಂದರ್ಭದಲ್ಲಿ ಸಾರಥಿ ಭವನದ ಶಿಲಾನ್ಯಾಸ ಸಂದರ್ಭದಲ್ಲಿ ದೇಣಿಗೆ ನೀಡಿ ಸಹಕರಿಸಿದ ಸವಣೂರಿನ ಶಿಕ್ಷಣ ಶಿಲ್ಫಿ ಸೀತಾರಾಮ ರೈ ಸವಣೂರು, ಸಾರಥಿ ಭವನದ ರೂವಾರಿ ಮೌರಿಸ್ ಮಸ್ಕರೇನ್ಹಸ್, ಶಿಕ್ಷಣ ಇಲಾಖೆಯಲ್ಲಿ ಚಾಲಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ವಾಹನ ಚಾಲಕರ ಸಂಘದ ಮಾಜಿ ಅಧ್ಯಕ್ಷ ಗಿರಿಧರ್ ಗೌಡ, ಮಾಜಿ ಅಧ್ಯಕ್ಷರಾದ ಕಮಾಲಾಕ್ಷ ಕೆ, ಸಿ.ಸೀತಾರಾಂ, ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ರಾಮಚಂದ್ರ ಭಟ್, ನಗರಸಭೆಯಲ್ಲಿ ಪೌರ ಕಾರ್ಮಿಕರಾಗಿ ಕರ್ತವ್ಯ ನಿರ್ವಹಿಸುವ ಅನಿಲ್, ವೀರಪ್ಪ, ಉಮಾವತಿ, ಪವರ್‌ಮ್ಯಾನ್‌ಗಳಾಗಿರುವ ಮೆಸ್ಕಾಂ ಪುತ್ತೂರಿನ ಕಾರ್ಯ ಮತ್ತು ಪಾಲನಾ ಶಾಖೆ-3 ಪವರ್ ಮ್ಯಾನ್ ಮಲೆಪ್ಪ ಹಲಗಲಿ, ಸಹಾಯಕ ಪವರ್ ಮ್ಯಾನ್ ಅನೂಜ್ ಎನ್.ಪಿ, ಮೆಕ್ಯಾನಿಕ್ ಲೋಕೇಶ್ ಡಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರಾದ ದಯಾನಂದ ಬಿ.ಕೆ, ವಾಸುದೇವ ಗೌಡ ಬಿ.ರವರುಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here