ಕಡಬ: ಶಿಕ್ಷಣ ಕ್ಷೇತ್ರದಲ್ಲಿ ತನ್ನ ಪ್ರತಿಭೆ ಅನಾವರಣಕ್ಕೆ ಅನೇಕ ವೇದಿಕೆಗಳು ಸಿಗುವ ಪ್ರಸ್ತುತ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಸದುಪಯೋಗಪಡಿಸಿಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯು ತನಗೆ ಅವಕಾಶ ಸಿಕ್ಕಾಗ ತನ್ನ ಮುಂದಿನ ಯಶಸ್ಸಿಗೆ ಮೆಟ್ಟಿಲು ಎನ್ನುವ ಮಾನಸೀಕತೆಯನ್ನು ಬೆಳೆಸಿಕೊಂಡು ಮುನ್ನಡೆಯಬೇಕು ಎಂದು ಕೊಯಿಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಸುಭಾಷ್ ಹೇಳಿದರು.
ಅವರು ಕಡಬ ತಾಲೂಕು ಕೊಯಿಲ ಗ್ರಾಮದ ಸಬಳೂರು ಉನ್ನತ ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಶಾಲಾ ವಾರ್ಷಿಕೋತ್ಸವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗದೆ ಊರಿನ ಹಬ್ಬವಾಗಿ ಮಾರ್ಪಾಡು ಆಗಬೇಕು. ಇದಕ್ಕಾಗಿ ಊರಿನ ಜನರ ಸಹಭಾಗಿತ್ವ ಅಗತ್ಯವಾಗಿದೆ. ಸರ್ಕಾರಿ ಶಾಲೆಗಳನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ನಾವು ಪ್ರಯತ್ನಿಸಬೇಕು ಎಂದು ಪುಷ್ಪಾ ಸುಭಾಷ್ ಹೇಳಿದರು.
ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶೇಖರ ಗೌಡ ಪಾಪುದಮಂಡೆ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ಮನೋಹರ್ ಸಬಳೂರು, ಅಧ್ಯಕ್ಷ ಗಣೇಶ್ ಎರ್ಮಡ್ಕ, ಹಿರಿಯರಾದ ಲಿಂಗಪ್ಪ ಗೌಡ ಕಡೆಂಬ್ಯಾಲು ಶುಭಹಾರೈಸಿದರು. ಕೊಯಿಲ ಗ್ರಾಮ ಪಂಚಾಯಿತಿ ಸದಸ್ಯರಾದ ಚಿದಾನಂದ ಪಾನ್ಯಾಲು, ಶಶಿಕಲಾ ಏಣಿತ್ತಡ್ಕ, ಭಾರತಿ ಕಲ್ಕಾಡಿ ಉಪಸ್ಥಿತರಿದ್ದರು. ಎನ್ಎನ್ಎಮ್ಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಫಾತಿಮತ್ ಅಸ್ಲಾಹ , ನವೋದಯ ಪರೀಕ್ಷೆ ಉತ್ತಿರ್ಣರಾದ ಆಯಿಶ್ ಏಣಿತ್ತಡ್ಕ, ಋತ್ವಿಜ್ ಕೊಲ್ಯ ಹಾಗೂ ಶಾಲೆಯ ಅಭಿವೃದ್ದಿಗೆ ಕೊಡುಗೆ ನೀಡಿದ ದಾನಿಗಳನ್ನು, ಕಾರ್ಯಕ್ರಮಕ್ಕೆ ಸಹಕರಿಸಿದವರನ್ನು ಸನ್ಮಾನಿಸಲಾಯಿತು.
ವಾರ್ಷಿಕೋತ್ಸವ ಅಂಗವಾಗಿ ವಿದ್ಯಾರ್ಥಿಗಳಿಗೆ, ಸ್ಥಳಿಯರಿಗೆ, ಹಿರಿಯ ವಿದ್ಯಾರ್ಥಿಗಳಿಗೆ , ಪೋಷಕರಿಗೆ ನಡೆಸಲಾದ ವಿವಿಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಶಿಕ್ಷಕಿ ತಾರಾದೇವಿ ವರದಿ ಮಂಡಿಸಿದರು. ಶಾಲಾ ಮುಖ್ಯಗುರು ವಾರಿಜ ಬಿ ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕಿ ವನಜಾ ವಂದಿಸಿದರು. ಶಿಕ್ಷಕರಾದ ಶೇಖರ ಬಲ್ಯ, ವೆಂಕಟೇಶ್, ರವಿಚಂದ್ರ, ಶಿಕ್ಷಕಿಯರಾದ ಅಂಜನಾ, ತೇಜಸ್ವಿನಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.