ಪುತ್ತೂರು: ಬನ್ನೂರು ಗ್ರಾಮದ ಅಲುಂಬುಡ ಕುಟುಂಬದ ದೈವಗಳ ಪ್ರತಿಷ್ಠಾ ದಿನಾಚರಣೆ ಹಾಗೂ ಸನ್ಮಾನ ಕಾರ್ಯಕ್ರಮ ಡಿ.15ರಂದು ಬನ್ನೂರು ಅಲುಂಬುಡ ತರವಾಡು ಮನೆಯಲ್ಲಿ ನಡೆಯಿತು. ಬೆಳಿಗ್ಗೆ ಗಣಹೋಮ, ಬಳಿಕ ದೈವಗಳಿಗೆ ತಂಬಿಲ, ನಾಗ ತಂಬಿಲ ಮತ್ತು ರಕ್ತೇಶ್ವರಿ ತಂಬಿಲ ನಡೆಯಿತು. ಬಳಿಕ ಪ್ರಸಾದ ವಿತರಣೆ ಮಾಡಲಾಯಿತು.
ಸನ್ಮಾನ:
ಮಧ್ಯಾಹ್ನ ನಡೆದ ಸಭಾ ಕಾರ್ಯಕ್ರಮದಲ್ಲಿ ಕುಟುಂಬದ ಹಿರಿಯರು, ದೈವದ ಪರಿಚಾರಕರೂ ಆದ ಕೊರಗಪ್ಪ ಗೌಡ ಪಟ್ಟೆ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ಪದ್ಮಪ್ಪ ಗೌಡ ಬಾರಿಂಜ, ಕ್ಯಾಂಪ್ಕೋ ನಿವೃತ್ತ ಉದ್ಯೋಗಿ ರಾಮಕೃಷ್ಣ ಗೌಡ ರಾಗಿದಕುಮೇರು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕುಶಾಲ ಬಿ.ಬನ್ನೂರು, ಲೋಕೇಶ್ ಸರ್ವೆ, ಚೈತ್ರಾ ಬಾರಿಂಜ ಸನ್ಮಾನ ಪತ್ರ ವಾಚಿಸಿದರು. ಸನ್ಮಾನಿತರ ಪರವಾಗಿ ಪದ್ಮಪ್ಪ ಗೌಡ ಬಾರಿಂಜ ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಸಲ್ಲಿಸಿದರು.
ಕುಟುಂಬದ ಹಿರಿಯರನ್ನು ಗೌರವಿಸೋಣ-ಗುಡ್ಡಪ್ಪ ಗೌಡ ಬಲ್ಯ
ಸನ್ಮಾನಿಸಿ ಮಾತನಾಡಿದ ಶ್ರೀ ರಾಮಕುಂಜೇಶ್ವರ ಪ.ಪೂ.ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಗುಡ್ಡಪ್ಪ ಗೌಡ ಬಲ್ಯ ಅವರು, ನಾವು ನಮ್ಮ ಮಕ್ಕಳನ್ನು ಚಾರಿತ್ರ್ಯವಂತರನ್ನಾಗಿ ಮಾಡಲು, ನಾವು ಕುಟುಂಬದ ಹಿರಿಯರನ್ನು ಗೌರವಿಸುವುವ ಕೆಲಸವನ್ನು ಮಾಡಬೇಕು. ನಮ್ಮ ಮಕ್ಕಳು ತಮ್ಮ ಹಿರಿಯರನ್ನು ನೋಡಿ ಕಲಿಯಬೇಕಾಗಿದೆ. ಆದರೆ ಕೆಲವು ಕಡೆಗಳಲ್ಲಿ ನೋಡ ಬಾರದ್ದನ್ನು ನೋಡಿ ಆಗಬಾರದ ಹಾಗೇ ಬೆಳೆಯುತ್ತಿದ್ದಾರೆ. ಹೊರಗಡೆಯಲ್ಲಿ ಅವನೊಬ್ಬ ಅಧಿಕಾರಿಯೋ, ರಾಜಕಾರಣಿಯೋ, ದಾನಿಯೋ, ಕಲಾವಿದನೋ ಆಗಿರಬಹುದು. ಆದರೆ ಕುಟುಂಬಕ್ಕೆ ಬರುವಾಗ ಅವನಿಗೆ ಹಿರಿಯರೇ ಸುಪ್ರೀಂ ಕೋರ್ಟ್ ಆಗಿರಬೇಕು. ಅಂದರೆ ಕುಟುಂಬದ ಹಿರಿಯರ ಮಾರ್ಗದರ್ಶನ ಬಹಳ ಅಗತ್ಯ. ಅಲ್ಲಿ ಶಿಕ್ಷಣದ ಪದವಿ, ಸಮಾಜದಲ್ಲಿ ತನಗಿರುವ ಗೌರವ ಇವೆಲ್ಲ ಗೌಣವಾಗಬೇಕು. ಅದಕ್ಕೇ ಹೇಳಿದ್ದು ಊರಿಗೆ ಅರಸನಾದರೂ ತಾಯಿಗೆ ಮಗ ಎಂದು. ಕೀರ್ತಿ ಶೇಷ ಹಿರಿಯರು ಸಹ ಇದರಿಂದ ತೃಪ್ತರಾಗಿ ಆಶೀರ್ವದಿಸುತ್ತಾರೆ. ಇಲ್ಲವಾದರೆ ನಾವು ಮಾಡುವ ಕೆಲಸಗಳಿಗೆ ಅಡ್ಡಿ ಆತಂಕಗಳು ಬರಲು ಸಾಧ್ಯವಿದೆ. ಮಕ್ಕಳನ್ನು ಚೆನ್ನಾಗಿ ಸಾಕುವುದರಲ್ಲಿ ಇದೂ ಸೇರುತ್ತದೆ. ನಾವು ಹುಟ್ಟಿದ ಮಣ್ಣು ಎಲ್ಲಕ್ಕಿಂತಲೂ ನಮಗೆ ಶ್ರೇಷ್ಠವಾದುದು. ಅದಕ್ಕೇ ಹೇಳಿದ್ದು ‘ಜನನಿ ಜನ್ಮ ಭೂಮಿ ಸ್ವರ್ಗಾದಪಿ ಗರಿಯಸಿ’ ಎಂದು ಹೇಳಿದರು.
ಅಲುಂಬುಡ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಾರಾಯಣ ಗೌಡ ಬಿ.ಅಧ್ಯಕ್ಷತೆ ವಹಿಸಿದ್ದರು. ಅಲುಂಬುಡ ತರವಾಡು ಮನೆಯ ಯಜಮಾನ ಶಿವಣ್ಣ ಗೌಡ, ಅಲುಂಬುಡ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಭಾಸ್ಕರ ಗೌಡ ಸರ್ವೆ, ಖಜಾಂಜಿ ವಾಮನ ಎ.ವಿ.ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅಲುಂಬುಡ ಸೇವಾ ಪ್ರತಿಷ್ಠಾನದ ಜೊತೆ ಕಾರ್ಯದರ್ಶಿಗಳಾದ ಹೊನ್ನಪ್ಪ ಗೌಡ ಬನ್ನೂರು, ಸುರೇಶ ಗೌಡ ಬನ್ನೂರು, ಕುಟುಂಬದ ಹಿರಿಯರಾದ ಆನಂದ ಗೌಡ ಬನ್ನೂರುಪಟ್ಟೆ, ಗಂಗಾಧರ ಗೌಡ ಅಲುಂಬುಡ, ಸಾಂತಪ್ಪ ಗೌಡ ಸರ್ವೆ, ವಾಸಪ್ಪ ಗೌಡ ಬನ್ನೂರು, ಜಯರಾಮ ಸರ್ವೆ, ಚಂದ್ರ ಗೌಡ ಬಾರಿಂಜ ಅವರು ಅತಿಥಿಗಳಿಗೆ ಶಾಲು ಹಾಕಿ, ವೀಳ್ಯ ನೀಡಿ ಗೌರವಿಸಿದರು. ಅಲುಂಬುಡ ಸೇವಾಪ್ರತಿಷ್ಠಾನದ ಮುಖ್ಯ ಪ್ರವರ್ತಕರಾದ ಎ.ವಿ.ನಾರಾಯಣ ಗೌಡ ಬನ್ನೂರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಈಶ್ವರ ಗೌಡ ಬಾರಿಂಜ ವಂದಿಸಿದರು. ಹರೀಶ್ ಬಾರಿಂಜ ನಿರೂಪಿಸಿದರು. ಎ.ಎನ್.ಜ್ಯೋತ್ಸ್ನಾ ಗೌಡ ಮತ್ತು ಬಳಗದವರು ಪ್ರಾರ್ಥಿಸಿದರು.