ಪುತ್ತೂರು: ಧನುಸಂಕ್ರಮಣದ ಮರುದಿನ ತಿಂಗಳ ದಿನದಿಂದ ಮುಂದಿನ ಉತ್ತರಾಯಣ ಪುಣ್ಯಕಾಲ ಮಕರ ಸಂಕ್ರಮಣದ ಪರ್ಯಂತ ನಡೆಯುವಂತಹ ಧನುರ್ಮಾಸದ ಮೊದಲ ಪೂಜೆ ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಡಿ.16ರಂದು ಬೆಳಿಗ್ಗೆ ಪ್ರಾತಃಕಾಲ 5.30 ರ ವೇಳೆಗೆ ನಡೆಯಿತು.
ಪ್ರಾಥಃಕಾಲದ ಮತ್ತು ಧನುರ್ಮಾಸದ ಮೊದಲ ಪೂಜೆಗಾಗಿ ನಸುಕಿನ ಜಾವ ದೇವಸ್ಥಾನದಲ್ಲಿ ಭಕ್ತ ಸಾಗರ ಹರಿದು ಬಂತು. ಬೆಳಿಗ್ಗೆ ಗಂಟೆ 4.15ಕ್ಕೆ ವೇದ ಸಂವರ್ಧನ ಪ್ರತಿಷ್ಠಾನದ ನೇತೃತ್ವದಲ್ಲಿ ರುದ್ರಪಠಣ ಆರಂಭಗೊಂಡಿತ್ತು. ಗಂಟೆ 5.30ಕ್ಕೆ ಧನುಪೂಜೆ ನಡೆಯಿತು. ಪೂಜೆಯ ನಂತರ ನಿತ್ಯ ಬಲಿ ಉತ್ಸವ ನಡೆಯಿತು. ದೇವಳದ ಹೊರಾಂಗಣದಲ್ಲಿ ಭಕ್ತರಿಗೆ ಅವಲಕ್ಕಿ ಪ್ರಸಾದ ವಿತರಣೆ ಮಾಡಲಾಯಿತು.
ರುದ್ರ ಪಠಣಕ್ಕೆ ಚಾಲನೆ:
ದೇವಳದ ಆಡಳಿತಾಧಿಕಾರಿ ನವೀನ್ ಭಂಡಾರಿ, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಮಾಜಿ ಅಡಳಿತ ಮೊಕ್ತೇಸರ ಎನ್.ಕೆ.ಜಗನ್ನಿವಾಸ ರಾವ್, ಬನ್ನೂರು ರೈತರ ಸೇವಾ ಸಹಕಾರ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ಅವರು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೇದ ಸಂವರ್ಧನ ಪ್ರತಿಷ್ಠಾನದ ಅಧ್ಯಕ್ಷ ಎಂ.ಟಿ.ಜಯರಾಮ ಭಟ್, ಪ್ರತಿಷ್ಠಾನದ ಉಪಾಧ್ಯಕ್ಷ ಮಣಿಲಾ ಸಿ ಮಹಾದೇವ ಶಾಸ್ತ್ರೀ, ದೇವಳದ ಅರ್ಚಕ ಜಯರಾಮ್ ಜೋಯಿಷ, ವಾಸ್ತು ಇಂಜಿನಿಯರ್ ನಗರಸಭಾ ಸದಸ್ಯ ಪಿ.ಜಿ.ಜಗನ್ನಿವಾಸ ರಾವ್, ಚಂದ್ರಶೇಖರ್ ರಾವ್, ಭಾಸ್ಕರ್ ಬಾರ್ಯ, ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.
ಧನುಪೂಜೆಯ ಸಂದರ್ಭ ದೇವಳದ ವ್ಯವಸ್ಥಾಪನಾ ಸಮಿತಿ ನಿಕಟಪೂರ್ವ ಸದಸ್ಯರಾದ ರಾಮಚಂದ್ರ ಕಾಮತ್, ರಾಮ್ದಾಸ್ ಗೌಡ, ಶೇಖರ್ ನಾರಾವಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ದೇವಳದ ಪ್ರಧಾನ ಅರ್ಚಕ ವೇ ಮೂ ವಿ.ಎಸ್ ಭಟ್, ಕಿಟ್ಟಣ್ಣ ಗೌಡ ಬಪ್ಪಳಿಗೆ, ಮಾಜಿ ಮೊಕ್ತೇಸರ ಚಿದಾನಂದ ಬೈಲಾಡಿ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು.