ಪುತ್ತೂರು:ಕರ್ನಾಟಕ ರಾಜ್ಯ ಮಟ್ಟದ 20ರ ವಯೋಮಾನದ ಬಾಲಕರ ವಿಭಾಗದ ರಾಜ್ಯಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟವು ಡಿ.13 ರಿಂದ ಡಿ.15ರ ವರೆಗೆ ಕೋಲಾರ ಜಿಲ್ಲೆಯಲ್ಲಿ ಜರಗಿದ್ದು, ಈ ಪಂದ್ಯಾಕೂಟದಲ್ಲಿ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಪ್ರಾಯೋಜಕತ್ವದ ದಕ್ಷಿಣ ಕನ್ನಡ ಜಿಲ್ಲಾ ತಂಡ ಚಾಂಪಿಯನ್ಸ್ ಆಗಿದ್ದು ಬೆಂಗಳೂರು ಸಿಟಿ ತಂಡ ರನ್ನರ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಎಸ್.ಡಿ.ಎಂ ಉಜಿರೆಯ ವಿಘ್ನೇಶ್ ಶೆಟ್ಟಿರವರ ನಾಯಕತ್ವದಲ್ಲಿ ದ.ಕ ಜಿಲ್ಲಾ ತಂಡವು ಲೀಗ್ ಹಂತದಲ್ಲಿ ಚಾಮರಾಜನಗರ ಹಾಗೂ ಧಾರವಾಡ ಜಿಲ್ಲೆಯನ್ನು ಸೋಲಿಸಿ, ಬಳಿಕ ಪ್ರಿ ಕ್ವಾರ್ಟರ್ ಪಂದ್ಯದಲ್ಲಿ ಕೋಲಾರ ಜಿಲ್ಲೆಯನ್ನು, ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಕಲಬುರ್ಗಿ ಜಿಲ್ಲಾ ತಂಡವನ್ನು ಸೋಲಿಸಿ ಸೆಮಿಫೈನಲಿಗೇರಿತ್ತು. ಸೆಮಿಫೈನಲಿನಲ್ಲಿ ಉತ್ತರಕಾಂಡ ಜಿಲ್ಲಾ ತಂಡವನ್ನು ಸೋಲಿಸಿ ಅಧಿಕಾರಯುತವಾಗಿ ಫೈನಲ್ ಹಂತಕ್ಕೆ ತಲುಪಿದ ದ.ಕ ಜಿಲ್ಲಾ ತಂಡವು ಅಂತಿಮ ಹಣಾಹಣಿ ಎನಿಸಿದ ಬಿಗ್ ಫೈನಲ್ ಹೋರಾಟದಲ್ಲಿ ಬಲಿಷ್ಟ ಬೆಂಗಳೂರು ಸಿಟಿ ತಂಡವನ್ನು ಮಣಿಸಿ ಪ್ರತಿಷ್ಠಿತ ಟ್ರೋಫಿ ಹಾಗೂ ರೂ.50 ಸಾವಿರ ಮೊತ್ತದೊಂದಿಗೆ ಟಗರು ಅನ್ನು ಬಹುಮಾನವಾಗಿ ದ.ಕ ಜಿಲ್ಲಾ ತಂಡವು ಚಾಂಪಿಯನ್ಸ್ ಎನಿಸಿಕೊಂಡಿದೆ.
ಫಿಲೋಮಿನಾದಲ್ಲಿ ತರಬೇತಿ:
ದಕ್ಷಿಣ ಕನ್ನಡದ ವಿವಿಧ ಕಾಲೇಜುಗಳ 12 ಮಂದಿ ಆಟಗಾರರನ್ನೊಳಗೊಂಡ ದ.ಕ ಜಿಲ್ಲಾ ತಂಡವು ಡಿ.8 ರಿಂದ 11ರ ವರೆಗೆ ಫಿಲೋಮಿನಾ ಕಾಲೇಜಿನ ಆವರಣದಲ್ಲಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ತರಬೇತುದಾರರಾಗಿ ಮಾಜಿ ಕಬಡ್ಡಿ ಆಟಗಾರ ಹಬೀಬ್ ಮಾಣಿರವರು ಆಟಗಾರರಿಗೆ ತರಬೇತಿ ನೀಡಿರುತ್ತಾರೆ. ಈ ನಾಲ್ಕು ದಿನಗಳ ತರಬೇತಿ ಶಿಬಿರದಲ್ಲಿ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಕಾರ್ಯಾಧ್ಯಕ್ಷ ಚಂದ್ರಹಾಸ ಶೆಟ್ಟಿ, ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ತಾಲೂಕು ಅಧ್ಯಕ್ಷ ಸುರೇಂದ್ರ ರೈ ಬಳ್ಳಮಜಲು, ಕಾರ್ಯದರ್ಶಿ ದಯಾನಂದ ರೈ ಕೋರ್ಮಂಡ, ಕೋಶಾಧಿಕಾರಿ ರಝಾಕ್ ಬಿ.ಎಚ್, ಫಿಲೋಮಿನಾ ಕಾಲೇಜು ದೈಹಿಕ ಶಿಕ್ಷಣ ನಿರ್ದೇಶಕ ಡಾ.ಎಲ್ಯಾಸ್ ಪಿಂಟೊ, ರೆಫ್ರೀ ಬೋರ್ಡ್ ಅಧ್ಯಕ್ಷ ಅಬ್ದುಲ್ ಆಸಿಫ್ ತುಂಬುತ್ತಡ್ಕ, ಉದ್ಯಮಿ ರೋಶನ್ ರೈ ಬನ್ನೂರು, ಸುದರ್ಶನ್ ನಾಯ್ಕ್, ಝಿಹಾದ್, ಪ್ರೇಮಾನಂದ ನಾಯಕ್ ರವರು ಉಪಸ್ಥಿತರಿದ್ದು ಆಟಗಾರರಿಗೆ ಸೂಕ್ತ ಮಾರ್ಗದರ್ಶನ ನೀಡಿರುತ್ತಾರೆ. ಈ ಸಂದರ್ಭದಲ್ಲಿ ಆರ್.ರೈ ಇನ್ಫ್ರಸ್ಟ್ರಕ್ಚರ್ ಪ್ರೈ.ಲಿಮಿಟೆಡ್ ಇದರ ಮಾಲಕ ರೋಶನ್ ರೈ ಬನ್ನೂರುರವರ ಪ್ರಾಯೋಜಕತ್ವದಲ್ಲಿ ಆಟಗಾರರಿಗೆ ಜೆರ್ಸಿಯನ್ನು ಕೊಡುಗೆಯಾಗಿ ನೀಡಲಾಗಿತ್ತು.
ದ.ಕ ಜಿಲ್ಲೆಯ ವಿವಿಧ ಕಾಲೇಜಿನ ಕಬಡ್ಡಿ ಆಟಗಾರರನ್ನೊಳಗೊಂಡ ದ.ಕ ಜಿಲ್ಲಾ ತಂಡ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಚಾಂಪಿಯನ್ಸ್ ಆಗಿದ್ದು ಖುಷಿ ತಂದಿದೆ. ಪಂದ್ಯಾವಳಿದುದ್ದಕ್ಕೂ ನಮ್ಮ ತಂಡದ ಆಟಗಾರರು ಒಳ್ಳೆಯ ಪ್ರದರ್ಶನವನ್ನು ನೀಡಿರುತ್ತಾರೆ. ಆಯ್ಕೆ ಶಿಬಿರದಲ್ಲಿಯೂ ಆಟಗಾರರು ಒಳ್ಳೆಯ ರೀತಿಯ ಪ್ರದರ್ಶನ ನೀಡಿದ್ದು ನಮ್ಮ ತಂಡ ಚಾಂಪಿಯನ್ ಆಗಲು ಅರ್ಹ ತಂಡವಾಗಿತ್ತು. ಆಯ್ಕೆಯಾದ ಆಟಗಾರರು ವೈಯುಕ್ತಿಕವಾಗಿ ಆಡದೆ ಜವಾಬ್ದಾರಿಯುತವಾಗಿ ತಂಡವಾಗಿ ಆಡಿ ದ.ಕ ಜಿಲ್ಲೆಗೆ ಹೆಸರು ತರಬೇಕು ಎಂದು ನಾನು ಆಯ್ಕೆ ಶಿಬಿರದ ಸಮಾರೋಪದಲ್ಲಿ ಹೇಳಿದ್ದೆ. ಇದೀಗ ಹುಡುಗರು ನಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ. ಚಾಂಪಿಯನ್ಸ್ ಆದ ನಮ್ಮ ತಂಡಕ್ಕೆ ಹಾಗೂ ಉತ್ತಮ ತರಬೇತಿಯನ್ನು ನೀಡಿದ ಆತ್ಮೀಯ ಮಿತ್ರ ಹಬೀಬ್ ಮಾಣಿರವರಿಗೆ ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್ ಹಾಗೂ ಪುತ್ತೂರು ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಷನ್ ವತಿಯಿಂದ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ.
-ಎನ್.ಚಂದ್ರಹಾಸ ಶೆಟ್ಟಿ, ಕಾರ್ಯಾಧ್ಯಕ್ಷರು, ದ.ಕ ಜಿಲ್ಲಾ ಅಮೆಚೂರು ಕಬಡ್ಡಿ ಅಸೋಸಿಯೇಷನ್
ಆಟಗಾರರು..
ವಿಘ್ನೇಶ್ ಶೆಟ್ಟಿ-ನಾಯಕ(ಎಸ್.ಡಿ.ಎಂ ಉಜಿರೆ), ಶಿವನೀತ್ ನಾಯಕ್(ವಿಕಾಸ್ ಕಾಲೇಜು), ಆದೇಶ್ ಶೆಟ್ಟಿ(ತ್ರಿಶಾ ಕಾಲೇಜು), ಕಿಶನ್ ರೈ ಎನ್(ಪ್ರೇರಣಾ ಕಾಲೇಜು), ಅಹಮ್ಮದ್ ಜಮೀರ್(ಎಸ್.ಡಿ.ಎಂ), ಸಚಿನ್(ಆಳ್ವಾಸ್), ಸಲಾಹುದ್ದೀನ್, ಮೊಹಮ್ಮದ್ ಸುಹೈಲ್(ಮಿಲಾಗ್ರಿಸ್ ಮಂಗಳೂರು), ಗುರುದತ್ತ್ ನಾಯಕ್(ವಿಕಾಸ್ ಕಾಲೇಜು), ಅಹಮದ್ ರಾಫಿ(ಫಿಲೋಮಿನಾ), ನೀಕ್ಷಿತ್(ಗೋಕರ್ಣನಾಥೇಶ್ವರ ಕಾಲೇಜು), ಮನ್ವಿತ್ (ಪುಣ್ಯಕೋಟಿ ಕೈರಂಗಳ)