ಆಲಂಕಾರು: ಹಗಲು ವೇಳೆಯೇ ಮನೆಯಿಂದ ಚಿನ್ನಾಭರಣ ಕಳವು

0

ಆಲಂಕಾರು: ಯಾರೂ ಇಲ್ಲದ ಸಂದರ್ಭ ಮನೆಯೊಂದರಿಂದ ಹಗಲು ವೇಳೆಯೇ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳ್ಳತನ ಆಗಿರುವ ಘಟನೆ ಆಲಂಕಾರು ಗ್ರಾಮದ ಕಲ್ಲೇರಿ ಎಂಬಲ್ಲಿ ಡಿ.18ರಂದು ನಡೆದಿದೆ.


ಆಲಂಕಾರು-ಶರವೂರು ರಸ್ತೆ ಬದಿಯ ಕಲ್ಲೇರಿ ಎಂಬಲ್ಲಿರುವ ಪಿಡಬ್ಲ್ಯುಡಿ ಗುತ್ತಿಗೆದಾರ, ಆಲಂಕಾರು ಗ್ರಾ.ಪಂ.ಮಾಜಿ ಉಪಾಧ್ಯಕ್ಷ, ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕರೂ ಆದ ಸುಧಾಕರ ಪೂಜಾರಿಯವರ ಮನೆಯಲ್ಲಿ ಈ ಕಳ್ಳತನ ನಡೆದಿದೆ.

ಸುಧಾಕರ ಪೂಜಾರಿ ಅವರಿಗೆ ಕುಂತೂರಿನಲ್ಲಿ ಕೃಷಿ ಜಾಗವಿದ್ದು ಅವರು ಬೆಳಿಗ್ಗೆ ಅಲ್ಲಿಗೆ ಹೋಗಿದ್ದರು. ಮಕ್ಕಳು ಶಾಲೆಗೆ ಹೋಗಿದ್ದು ಅವರ ಪತ್ನಿ ಸೌಮ್ಯ ಅವರು ಮಧ್ಯಾಹ್ನ 11.30ರ ವೇಳೆಗೆ ಮನೆಗೆ ಬಾಗಿಲು ಹಾಕಿ ಮನೆ ಪಕ್ಕದಲ್ಲೇ ಇರುವ ತೋಟಕ್ಕೆ ಹೋಗಿದ್ದರು. ಅವರು ಮಧ್ಯಾಹ್ನ 1.30ರ ಸುಮಾರಿಗೆ ಮನೆಗೆ ಬಂದ ವೇಳೆ ಕಳ್ಳತನ ನಡೆದಿರುವುದು ಬೆಳಕಿಗೆ ಬಂದಿದೆ.


ಹಂಚಿನ ಮನೆಯ ಹಿಂಬದಿ ಬಾಗಿಲಿಗೆ ಕಾಲಿನಿಂದ ಒದ್ದು ಬಾಗಿಲು ಮುರಿದು ಒಳನುಗ್ಗಿರುವ ಕಳ್ಳರು ಬೆಡ್‌ರೋಮ್‌ನ ಕಪಾಟಿನಲ್ಲಿದ್ದ ಸೌಮ್ಯ ಅವರ ಕರಿಮಣಿ ಸರ, ಮಕ್ಕಳ ಮೂರ‍್ನಾಲ್ಕು ಚಿನ್ನದ ಉಂಗುರ, ಬೆಳ್ಳಿಯ ಕಾಲು ಚೈನ್, ಸೊಂಟದ ಚೈನ್ ಕಳವು ಗೈದಿದ್ದಾರೆ. ಅಲ್ಲದೇ ಕಪಾಟಿನಲ್ಲಿದ್ದ ರೋಲ್ಡ್ ಗೋಲ್ಡ್ ಸಹ ಕದ್ದೊಯ್ದಿದ್ದಾರೆ. ಒಟ್ಟು ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣ ಕಳವಾಗಿರುವುದಾಗಿ ವರದಿಯಾಗಿದೆ. ಕಳ್ಳ ಮನೆಯ ಹಿಂಬದಿ ಬಾಗಿಲಿಗೆ ಕಾಲಿನಿಂದ ಒದ್ದಿದ್ದು ಕಾಲಿನ ಶೂ ಅಚ್ಚು ಬಾಗಿಲಿನಲ್ಲಿ ಕಾಣಿಸಿಕೊಂಡಿದೆ.

ಶ್ವಾನದಳ/ಬೆರಳಚ್ಚು ತಜ್ಞರ ಆಗಮನ:
ಘಟನಾ ಸ್ಥಳಕ್ಕೆ ಕಡಬ ಎಸ್.ಐ.ಗಳಾದ ಅಭಿನಂದನ್ ಎಂ.ಎಸ್., ಅಕ್ಷಯ್ ಢವಗಿ ಹಾಗೂ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಸಂಜೆ ವೇಳೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಮಧ್ಯಾಹ್ನ ಹೆದ್ದಾರಿ ಬದಿಯಲ್ಲಿ ಕಾರೊಂದು ನಿಂತಿರವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here