ಪುತ್ತೂರು: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಬೆಂಗಳೂರು ಇದರ 2023-24 ಮತ್ತು 2024-25ನೇ ಸಾಲಿನ ಶಿಷ್ಯ ವೇತನಕ್ಕೆ ಪುತ್ತೂರಿನ ನೃತ್ಯೋಪಾಸನಾ ಕಲಾ ಅಕಾಡೆಮಿ(ರಿ) ಇದರ ಮೂವರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ನೃತ್ಯ ವಿಭಾಗದ ಭರತನಾಟ್ಯದಲ್ಲಿ ತನುವಿ, ಸಿಂಚನಾ ಎಸ್.ಭಟ್ ಹಾಗೂ ತೇಜಸ್ವಿರಾಜ್ ಇವರು ಶಿಷ್ಯವೇತನಕ್ಕೆ ಆಯ್ಕೆಯಾಗಿದ್ದಾರೆ. ಇವರು ನೃತ್ಯಗುರು, ವಿದುಷಿ ಶಾಲಿನಿ ಆತ್ಮಭೂಷಣ್ ಇವರಲ್ಲಿ ನೃತ್ಯಾಭ್ಯಾಸ ನಡೆಸುತ್ತಿದ್ದು, ಇವರ ಆಯ್ಕೆಯನ್ನು ಕಲಾ ಅಕಾಡೆಮಿ ಅಭಿನಂದಿಸಿದೆ. ಪುತ್ತೂರು ವಿವೇಕಾನಂದ ಮಹಾವಿದ್ಯಾಲಯದಲ್ಲಿ ಪ್ರಥಮ ವರ್ಷ ಬಿಸಿಎ ವ್ಯಾಸಂಗ ಮಾಡುತ್ತಿರುವ ತನುವಿ ಉಪ್ಪಿನಂಗಡಿ ನಿವಾಸಿಯಾಗಿದ್ದು ಯೋಗಾನಂದ ಮತ್ತು ಸುನಿತಾ ದಂಪತಿ ಪುತ್ರಿಯಾಗಿದ್ದಾರೆ. ಜೂನಿಯರ್, ಸೀನಿಯರ್ ಆಗಿ ಈಗ ವಿದ್ವತ್ ಪೂರ್ವ ಪರೀಕ್ಷೆ ಬರೆದಿದ್ದಾರೆ. ಕಳೆದ 15 ವರ್ಷಗಳಿಂದ ಈ ಕೇಂದ್ರದಲ್ಲಿ ನೃತ್ಯಾಭ್ಯಾಸ ಮಾಡುತ್ತಿದ್ದಾರೆ.
ಸಿಂಚನಾ ಎಸ್.ಭಟ್ ಅವರು ಮಾಣಿಯ ನೇರಳಕಟ್ಟೆ ನಿವಾಸಿಯಾಗಿದ್ದು, ಶಂಕರನಾರಾಯಣ ಭಟ್ ಮತ್ತು ಪಾವನ ಎಸ್.ಭಟ್ ದಂಪತಿ ಪುತ್ರಿ. ಇವರು ಮಂಗಳೂರಿನ ವಳಚ್ಚಿಲ್ ಶ್ರೀನಿವಾಸ ಫಾರ್ಮಸಿ ವಿದ್ಯಾಲಯದಲ್ಲಿ ಪ್ರಥಮ ಸ್ನಾತಕೋತ್ತರ ಫಾರ್ಮಾ ಕಲಿಯುತ್ತಿದ್ದಾರೆ. ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಪದವಿ ಪಡೆದಿದ್ದಾರೆ. ಈ ಕಲಾಕೇಂದ್ರದಲ್ಲಿ ಸುಮಾರು 10 ವರ್ಷಗಳಿಂದ ನೃತ್ಯ ಕಲಿಯುತ್ತಿದ್ದಾರೆ.
ತೇಜಸ್ರಾಜ್ ಅವರು ಕಡಬ ನಿವಾಸಿಯಾಗಿದ್ದು, ದಿ.ಶಾಂತರಾಮ ಗೌಡ ಮತ್ತು ಲಕ್ಷ್ಮಿ ದಂಪತಿ ಪುತ್ರ. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ ಪದವಿ ಬಳಿಕ ಈಗ ಚಾರ್ಟೆಡ್ ಅಕೌಂಟ್ಸ್ನಲ್ಲಿ ಇಂಟರ್ ಮೀಡಿಯೇಟ್ ಉತ್ತೀರ್ಣರಾಗಿದ್ದಾರೆ. ಭರತನಾಟ್ಯದಲ್ಲಿ ಜೂನಿಯರ್, ಸೀನಿಯರ್ ಪದವಿ ಪಡೆದಿದ್ದಾರೆ. ಕಳೆದ 10 ವರ್ಷಗಳಿಂದ ಈ ಕಲಾಕೇಂದ್ರದ ನೃತ್ಯ ವಿದ್ಯಾರ್ಥಿಯಾಗಿದ್ದಾರೆ.