ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಅಕ್ಷರ ದಾಸೋಹ ನೌಕರರ ಸಂಘದಿಂದ ಪ್ರತಿಭಟನೆ

0

3ಲಕ್ಷ ಸಂಬಳ ಬೇಕೆನ್ನುವ ಶಾಸಕರು, ಸಂಸದರು ರೂ. 3ಸಾವಿರದಲ್ಲಿ ಬದುಕುವ ಬಿಸಿಯೂಟದ ತಾಯಂದಿರ ಕುರಿತು ಯಾಕೆ ಮಾತನಾಡುತ್ತಿಲ್ಲ-ಬಿ.ಎಮ್ ಭಟ್

ಪುತ್ತೂರು: ಕೆಲವು ಶಾಸಕರು ಕೊಲ್ಲುವ ಸಂಸ್ಕೃತಿ ಉಲ್ಲವರು. ವಿಧಾನ ಸೌಧದಲ್ಲಿ ಕೊಲ್ಲುವುದನ್ನು ಮಾತನಾಡುತ್ತಾರೆ. ಯಾರ‍್ಯಾರದೋ ಸಿಡಿ ಬಗ್ಗೆ ಮಾತನಾಡುತ್ತಾರೆ. ಪರಸ್ಪರ ದೋಷಾರೋಪಣೆ ಮಾಡಿಕೊಳ್ಳುತ್ತಾರೆ. ಹೀಗೆ ಕೊಲ್ಲುವ ಸುದ್ದಿ ಮಾತನಾಡುವ ಜನಪ್ರತಿನಿಧಿಗಳು ಬದುಕುವ ಸುದ್ದಿಯನ್ನು ಯಾಕೆ ಮಾತನಾಡುತ್ತಿಲ್ಲ ಎಂದು ಸಿಐಟಿಯು ಮುಖಂಡ ಬಿ.ಎಮ್ ಭಟ್ ಅವರು ಹೇಳಿದರು.


ಸಿಐಟಿಯು ನೇತೃತ್ವದಲ್ಲಿ ಪುತ್ತೂರು, ಬೆಳ್ತಂಗಡಿ ಕಡಬ ತಾಲೂಕು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದಿಂದ ಅಕ್ಷರ ದಾಸೋಹ ನೌಕರರ ವೇತನ ಮಾಸಿಕ ರೂ.26 ಸಾವಿರ ನೀಡಬೇಕು, ನಿವೃತ್ತಿ ಆದವರಿಗೆ ನೀಡಬೇಕಾದ ಇಡುಗಂಟು ತಕ್ಷಣ ಬಿಡುಗಡೆಗೊಳಿಸಬೇಕು, ನಿವೃತ್ತಿಯಾದ ಬಿಸಿಯೂಟ ನೌಕರರಿಗೆ ಮಾಸಿಕ ರೂ.10 ಸಾವಿರ ಪಿಂಚಣಿ ನೀಡಿ, ಅಕ್ಷರದಾಸೋಹ ನೌಕರರನ್ನು ಸರಕಾರಿ ಡಿ ಗ್ರೂಪ್ ನೌಕರರೆಂದು ಮಾನ್ಯ ಮಾಡಬೇಕು, 12 ತಿಂಗಳೂ ಸಂಬಳ ನೀಡಬೇಕು,ಮಕ್ಕಳ ಹಾಜರಾತಿ ಆಧಾರದಲ್ಲಿ ಕೈ ಬಿಡಬೇಡಿ ಸಹಿತ 31 ಬೇಡಿಕೆಗಳನ್ನು ಆಗ್ರಹಿಸಿ ಪುತ್ತೂರು ತಾಲೂಕು ಆಡಳಿತ ಸೌಧದ ಬಳಿಯ ಅಮರ್‌ಜವಾನ್ ಸ್ಮಾರಕ ಜ್ಯೋತಿ ಬಳಿ ಡಿ.19ರಂದು ಅವರು ಉಪವಿಭಾಗ ಮಟ್ಟದ ಪ್ರತಿಭಟನೆಯಲ್ಲಿ ಮಾತನಾಡಿದರು.


ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಬಿಸಿಯೂಟದವರಿಗೆ ರೂ.6 ಸಾವಿರದ ಗ್ಯಾರೆಂಟಿ ಕೊಟ್ಟಿದ್ದರು. ಆದರೆ ಅದು ಇಲ್ಲಿನ ತನಕ ಬಂದಿಲ್ಲ. ಕೇಂದ್ರ ಸರಕಾರ ಒಮ್ಮೆಯೂ ನಯಾ ಪೈಸೆ ಎರಿಸಿಲ್ಲ. ಇವತ್ತು ಬಿಸಿಯೂಟದ ನೌಕರರು ಈ ಭೂಮಿಯಲ್ಲಿ ಬದುಕಲು ಅರ್ಹರು ಹೌದ ಅಲ್ವ ಎಂಬದು ಅರ್ಥ ಮಾಡಿಕೊಳ್ಳಬೇಕಾಗಿದೆ. ಜನಪ್ರತಿನಿಧಿಗಳನ್ನು ಬಿಸಿಯೂಟದ ನೌಕರರ ಬಗ್ಗೆ ವಿಧಾನ ಸೌಧದಲ್ಲಿ ಮಾತನಾಡುತ್ತಿಲ್ಲ. ಬೆಳ್ತಂಗಡಿಯ ಹರೀಶ್ ಪೂಂಜಾರಿಗೆ ಆನೆ ಕೊಲ್ಲುವ ಭಾವನೆ ಇರಬಹುದು. ಆದರೆ ನಮಗೆ ಹಾಗೆ ಇಲ್ಲ. ಶಾಸಕರು ಸಂಸದರು 2ಲಕ್ಷ ಸಂಬಳ ಸಾಕಾಗುವುದಿಲ್ಲ ಬೆಲೆ ಏರಿಕೆ ಆಗಿದೆ ನಮಗೆ 3ಲಕ್ಷ ಕೊಡಬೇಕೆಂದು ಮಾತನಾಡುವ ಶಾಸಕರು ಸಂಸದರು ರೂ. 3ಸಾವಿರದಲ್ಲಿ ಬದುಕುವ ಬಿಸಿಯೂಟದ ತಾಯಂದಿರ ಕುರಿತು ಯಾಕೆ ಮಾತನಾಡುತ್ತಿಲ್ಲ. ಇದನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಶ್ನೆ ಮಾಡಲು ಹೋದರೆ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕುವ ಪ್ರಯತ್ನ ಮಾಡುತ್ತಾರೆ. ಆದರೆ ನಾವು ಹೋರಾಟ ಮಾಡುತ್ತಾ ಇದ್ದೇವೆ. ಪ್ರಶ್ನೆ ಮಾಡುವುದೇ ಪ್ರಜಾಪ್ರಭುತ್ವದ ಶೋಭೆ ಎಂದ ಅವರು ಬಿಸಿಯೂಟ ನೌಕರರ ರೂ.3ಸಾವಿರ ವೇತನದಲ್ಲಿ ಜನಪ್ರತಿನಿಧಿಗಳು ಒಂದು ತಿಂಗಳು ಜೀವನ ಸಾಗಿಸಿ ತೋರಿಸಲಿ ಎಂದು ಸವಾಲು ಹಾಕಿದರಲ್ಲದೆ ನಮಗೆ ಯಾವುದೇ ಶಿಕ್ಷೆ ನೀಡಿದರು ನಾವು ಕೆಂಬಾವುಟ ಎತ್ತಿ ಹಿಡಿದೇ ಹಿಡಿಯುತ್ತೇವೆ ಎಂದರು.


ಸವಲತ್ತು ಸಿಗಬೇಕಾದರೆ ಹೋರಾಟ ಅಗತ್ಯ:
ಸಿಐಟಿಯು ತಾಲೂಕು ಕಾರ್ಯದರ್ಶಿ ನ್ಯಾಯವಾದಿ ಪಿ.ಕೆಸತೀಶನ್ ಅವರು ಮಾತನಾಡಿ ದುಡಿಮೆ ಮತ್ತು ಹೋರಾಟ ಇವತ್ತಿನ ದಿನದಲ್ಲಿ ಅಗತ್ಯವಿದೆ. ಕೇರಳದಲ್ಲಿ 1957ನೇ ಇಸವಿಯಲ್ಲಿ ಇಎಮ್‌ಎಸ್ ಸರಕಾರದ ಪ್ರಥಮವಾಗಿ ಬಿಸಿಯೂಟವನ್ನು ಆರಂಭಿಸಿತ್ತು. ಆದಾದ ಬಳಿಕ ಕೋರ್ಟ್‌ನ ನಿರ್ದೇಶನದಂತೆ ಎಸ್.ಎಮ್.ಕೃಷ್ಣ ಸರಕಾರ ಬಿಸಿಯೂಟ ಆರಂಭಿಸಿತು. ಸಿಐಟಿಯುವಿನ ಹೋರಾಟದಿಂದಾಗಿ ಬಿಸಿಯೂಟ ಜಾರಿಗೆ ಬಂದಿದೆ. ಸಿಐಟಿಯ ಹೋರಾಟದಿಂದ ಮಾತ್ರ ನೌಕರರನ್ನು ಉಳಿಸುವ ಕೆಲಸ ಆಗಿದೆ. ಸವಲತ್ತು ಸಿಗಬೇಕಾದರೆ ಹೋರಾಟ ಅಗತ್ಯವಿದೆ. ಇವತ್ತು ಒಂದು ಚುನಾವಣೆ, ಒಂದು ದೇಶ ಬಂದರೆ ಮುಂದೆ 5 ವರ್ಷಕ್ಕೊಮ್ಮೆ ಮಾತ್ರ ಹೋರಾಟ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದರು.

ಪ್ರತಿಭಟನೆಯಲ್ಲಿ ಅಕ್ಷರದಾಸೋಹ ನೌಕರರ ಸಂಘದ ಅಧ್ಯಕ್ಷೆ ಲತಾ ಏಕತ್ತಡ್ಕ, ಕಾರ್ಯದರ್ಶಿ ರಂಜಿತಾ, ಸಂಘಟಕಿ ಲೀಲಾವತಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷೆ ಲೋನ್ಸಿ, ಕಡಬದ ಅಧ್ಯಕ್ಷೆ ರೇವತಿ, ಸುಲೋಚನಾ, ಹೇಮಾವತಿ ಸಹಿತ ಹಲವಾರು ಮಂದಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here